ಈಗ ಚುನಾವಣೆ ನಡೆದರೆ ಬಿಜೆಪಿಗೆ ಬಹುಮತ : ಜನಾರ್ದನ ರೆಡ್ಡಿ

KannadaprabhaNewsNetwork |  
Published : Jul 09, 2025, 12:19 AM ISTUpdated : Jul 09, 2025, 01:52 PM IST
4644 | Kannada Prabha

ಸಾರಾಂಶ

ರಾಜ್ಯ ಸರ್ಕಾರದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ, ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅಭಿವೃದ್ಧಿಯಂತೂ ಇಲ್ಲದಂತೆ ಆಗಿದೆ. ಇನ್ನು ಆಡಳಿತ ಪಕ್ಷದ ಶಾಸಕರೇ ವಿರೋಧಪಕ್ಷದವರನ್ನು ಮೀರಿಸುವಂತೆ ಬಹಿರಂಗವಾಗಿಯೇ ಆರೋಪ ಮಾಡುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.

ಕೊಪ್ಪಳ:  ರಾಜ್ಯ ಸರ್ಕಾರದ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಈ ಸರ್ಕಾರದಲ್ಲಿ ಸ್ಥಿರತೆ ಎಂಬುದೇ ಇಲ್ಲ. ಈಗ ಚುನಾವಣೆ ನಡೆದರೆ ಬಿಜೆಪಿ 120-130ಕ್ಕೂ ಅಧಿಕ ಸ್ಥಾನದಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೆ ಬರಲಿದೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಭವಿಷ್ಯ ನುಡಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ, ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅಭಿವೃದ್ಧಿಯಂತೂ ಇಲ್ಲದಂತೆ ಆಗಿದೆ. ಇನ್ನು ಆಡಳಿತ ಪಕ್ಷದ ಶಾಸಕರೇ ವಿರೋಧಪಕ್ಷದವರನ್ನು ಮೀರಿಸುವಂತೆ ಬಹಿರಂಗವಾಗಿಯೇ ಆರೋಪ ಮಾಡುತ್ತಿದ್ದಾರೆ. ಅವರ ಹೇಳಿಕೆ ನೋಡಿದರೆ ಆಡಳಿತ ಯಂತ್ರ ಎಷ್ಟು ಕುಸಿದಿದೆ ಎಂಬುದು ತಿಳಿಯುತ್ತದೆ ಎಂದರು. 

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಸಿಎಂ ಜತೆಗೆ ಇದ್ದುಕೊಂಡೇ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಚಾಣಿಕ್ಯ ತಂತ್ರವನ್ನು ಅನುಸರಿಸುತ್ತಿದ್ದಾರೆ. ನಂತರ ಮತ್ತೆ ನಾನು ಹೇಳಿಲ್ಲ ಎಂದು ಹೇಳುತ್ತಾರೆ ಎಂದ ಹೇಳಿದ ಅವರು, ಯಲಬುರ್ಗಾ ಕ್ಷೇತ್ರದಲ್ಲಿ ಮಾತ್ರ ಸಾವಿರ ಕೋಟಿ ರುಪಾಯಿ ತಂದು ಅಭಿವೃದ್ಧಿ ಮಾಡುತ್ತಿದ್ದಾರೆ. ಆದರೆ, ಇತರೆ ಕ್ಷೇತ್ರಗಳಲ್ಲಿ ಅಭಿವೃದ್ಧಿಯೇ ಆಗುತ್ತಿಲ್ಲ ಎಂದು ಆರೋಪಿಸಿದರು.

ಆಡಳಿತ ಸಂಪೂರ್ಣ ಹದಗೆಟ್ಟು ಹೋಗಿದೆ ಎನ್ನುವ ಮೂಲಕ ಸಚಿವ ಶಿವರಾಜ ತಂಗಡಗಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಕೊಪ್ಪಳದಲ್ಲಿ ಹಿಟ್ನಾಳ ಸಹೋದರರು ಅಕ್ರಮ ಮರಳು ದಂಧೆಗೆ ಸಾಥ್ ನೀಡುತ್ತಿದ್ದಾರೆ. ವ್ಯಾಪಕ ಭ್ರಷ್ಟಚಾರ ನಡೆಯುತ್ತಿದೆ. ಇದೆಲ್ಲದರ ವಿರುದ್ಧ ಬಿಜೆಪಿ ದೊಡ್ಡ ಹೋರಾಟ ಮಾಡಲಿದೆ ಎಂದ ಅವರು, ಕೊಪ್ಪಳದಲ್ಲಿ ನಡೆಯುವ ಅಕ್ರಮವನ್ನು ಶೀಘ್ರದಲ್ಲಿಯೇ ಬಯಲಿಗೆ ಎಳೆಯಲಾಗುವುದು ಎಂದರು.

ಬಲ್ಡೋಟಾ ವಿರುದ್ಧದ ಹೋರಾಟಕ್ಕೆ ಬಿಜೆಪಿ ಈಗಲೂ ಬದ್ಧವಾಗಿದೆ. ಆದರೆ, ಶ್ರೀಗವಿಸಿದ್ಧೇಶ್ವರ ಸ್ವಾಮೀಜಿ ನೀಡಿದ ಜವಾಬ್ದಾರಿಯನ್ನು ಶಾಸಕರಾದ ಬಸವರಾಜ ರಾಯರಡ್ಡಿ, ರಾಘವೇಂದ್ರ ಹಿಟ್ನಾಳ ಹಾಗೂ ಸಚಿವ ಶಿವರಾಜ ತಂಗಡಗಿ ಅವರು ನಿಭಾಯಿಸಿಲ್ಲ. ಸರ್ಕಾರದಿಂದ ಬಲ್ಡೋಟಾ ಪರವಾನಗಿ ರದ್ದು ಮಾಡಿದ ಆದೇಶವನ್ನು ಈ ವರೆಗೂ ತಂದಿಲ್ಲ. ಈ ವಿಷಯದಲ್ಲಿ ಗವಿಸಿದ್ಧೇಶ್ವರ ಸ್ವಾಮೀಜಿ ಅವರನ್ನು ಹೋರಾಟಕ್ಕೆ ಕರೆಯಬೇಕು ಎನಿಸುವುದಿಲ್ಲ. ಆದರೆ, ಜನರ ಜತೆಗೆ ಸೇರಿ ನಾವು ಹೋರಾಟ ಮಾಡುತ್ತೇವೆ ಎಂದರು.

PREV
Read more Articles on