ಪ್ರತಿಯೊಬ್ಬರೂ ವ್ಯಸನಮುಕ್ತವಾದರೆ, ಸ್ವಾಸ್ತ್ಯ ಸಮಾಜ:ಎ.ಎನ್.ಮಹೇಶ್‌

KannadaprabhaNewsNetwork |  
Published : Aug 03, 2026, 01:45 AM IST
ಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಸಮಾಜದಲ್ಲಿ ಶಾಂತಿ, ಸ್ವಾಸ್ಥ್ಯ ಹಾಗೂ ಸುಂದರ ವಾತಾವರಣ ನಿರ್ಮಾಣವಾಗಬೇಕಾದರೆ ಪ್ರತಿಯೊಬ್ಬರೂ ವ್ಯಸನ ಮುಕ್ತರಾಗುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಬಿಳಕಲ್ ಮಠದ ಶ್ರೀಗಳು ಕೈಗೊಂಡ ’ಜೋಳಿಗೆ ಚಳವಳಿ’ ಸಮಾಜ ದಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದೆ ಎಂದು ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸಮಾಜದಲ್ಲಿ ಶಾಂತಿ, ಸ್ವಾಸ್ಥ್ಯ ಹಾಗೂ ಸುಂದರ ವಾತಾವರಣ ನಿರ್ಮಾಣವಾಗಬೇಕಾದರೆ ಪ್ರತಿಯೊಬ್ಬರೂ ವ್ಯಸನ ಮುಕ್ತರಾಗುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಬಿಳಕಲ್ ಮಠದ ಶ್ರೀಗಳು ಕೈಗೊಂಡ ’ಜೋಳಿಗೆ ಚಳವಳಿ’ ಸಮಾಜ ದಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದೆ ಎಂದು ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್‌ ಹೇಳಿದರು.

ಜಿಲ್ಲಾಡಳಿತ ವಿವಿಧ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದ ಡಿಎಸಿಜಿ. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ’ವ್ಯಸನ ಮುಕ್ತ ದಿನಾಚರಣೆ ಉದ್ಘಾಟಿಸಿ ಮಾತ ನಾಡಿ 1975ರಲ್ಲಿ ಜೋಳಿಗೆ ಹಿಡಿದು ಸಮಾಜ ಸುಧಾರಣೆಗೆ ಹೊರಟ ಇಳಕಲ್ ಮಠದ ಶ್ರೀಗಳ ಕೊಡುಗೆ ಸ್ಮರಿಸಿದ ಅವರು, ಶ್ರೀಗಳು ಭಿಕ್ಷಾಧಾರಿಯಾಗಿ ಜನರ ಬಳಿಗೆ ಹೋಗಿ ಧಾನ್ಯ ಅಥವಾ ಹಣ ಬೇಡದೆ ’ನಿಮ್ಮಲ್ಲಿರುವ ದುರ್ವ್ಯಸನಗಳನ್ನು ಈ ಜೋಳಿಗೆಗೆ ಸಮರ್ಪಿಸಿ ಎಂದು ಕರೆ ನೀಡಿದ್ದರು.

ಸಮಾಜವನ್ನು ಜಾಗೃತಗೊಳಿಸಲು ಅವರು ಕೈಗೊಂಡ ಈ ಕಾರ್ಯ ಅತ್ಯಂತ ಶ್ಲಾಘನೀಯ. ಅವರ ಈ ಕ್ರಾಂತಿಕಾರಿ ಕಾರ್ಯ ಗೌರವಿಸಿ ರಾಜ್ಯ ಸರ್ಕಾರ ಪ್ರತಿವರ್ಷ ಆ.1 ರಂದು ಅವರ ಜನ್ಮದಿನವನ್ನು ’ವ್ಯಸನಮುಕ್ತ ದಿನ’ವನ್ನಾಗಿ ಆಚರಿಸಿ ಕೊಂಡು ಬರುತ್ತಿದೆ ಎಂದರು.

ಹಿಂದಿನ ಕಾಲದಲ್ಲಿ ಮದ್ಯಪಾನ, ಧೂಮಪಾನ ಅಥವಾ ತಂಬಾಕು ಸೇವನೆ ಮಾತ್ರ ವ್ಯಸನಗಳಾಗಿದ್ದವು. ಆದರೆ ಇಂದಿನ ಆಧುನಿಕ ಯುಗದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಬಳಕೆ ಯುವಜನತೆಯಲ್ಲಿ ದೊಡ್ಡ ವ್ಯಸನವಾಗಿ ಪರಿಣಮಿಸಿದೆ. ತಂತ್ರಜ್ಞಾನ ವಿಚಾರ ಕ್ರಾಂತಿ ಮೂಡಿಸಬೇಕಿತ್ತೇ ವಿನಃ ಅಪರಾಧ ಕ್ರಾಂತಿಗಲ್ಲ. ಮೊಬೈಲ್ ಅತಿಯಾದ ಬಳಕೆಯಿಂದ ಇಡೀ ಜಗತ್ತಿನ ಯುವ ಸಮುದಾಯ ದಾರಿ ತಪ್ಪುತ್ತಿರುವುದು ಕಳವಳಕಾರಿ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ದೇಶ ಅತ್ಯಂತ ಶ್ರೀಮಂತ ಸಂಸ್ಕೃತಿ, ಪರಂಪರೆ ಹಾಗೂ ಯುವಶಕ್ತಿ ಹೊಂದಿದೆ. ಆದರೆ, ದೇಶದ ಬಲವಾಗಿರುವ ಯುವಜನತೆಯನ್ನು ವ್ಯಸನ ಬಲಿ ಪಡೆಯುತ್ತಿರುವುದು ಗಂಭೀರ ಕಳವಳಕಾರಿ ಸಂಗತಿ ಎಂದರು.

ವ್ಯಸನ ಎಂದರೆ ಕೇವಲ ಮದ್ಯಪಾನ, ಧೂಮಪಾನ, ಗಾಂಜಾ ಅಥವಾ ಡ್ರಗ್ಸ್ ಮಾತ್ರವಲ್ಲ. ಇಂದಿನ ಡಿಜಿಟಲ್ ಯುಗದಲ್ಲಿ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ಕೈಯಲ್ಲಿರುವ ಮೊಬೈಲ್ ಕೂಡ ಒಂದು ದೊಡ್ಡ ವ್ಯಸನವಾಗಿ ಮಾರ್ಪಟ್ಟಿದೆ. ಮೊಬೈಲ್‌ನಲ್ಲಿರುವ ಒಳ್ಳೆಯ ವಿಷಯಗಳನ್ನು ಸ್ವೀಕರಿಸಿದರೆ ಒಳಿತು, ಆದರೆ ಗೇಮಿಂಗ್ ಹಾಗೂ ಇಂಟರ್ನೆಟ್ ದುರ್ಬಳಕೆ ಯಿಂದ ಅನೇಕ ಅನಾಹುತಗಳು ಸಂಭವಿಸುತ್ತಿವೆ ಎಂದರು.

ಮಕ್ಕಳು ಮೊಬೈಲ್ ವ್ಯಸನಕ್ಕೆ ಒಳಗಾಗಲು ಪೋಷಕರೂ ಕಾರಣ. ಹಿಂದೆ ಅಜ್ಜಿಯಂದಿರು ಮಗುವಿಗೆ ಊಟ ತಿನ್ನಿಸುವಾಗ ಚಂದಮಾಮನನ್ನು ತೋರಿಸಿ ಪ್ರೀತಿಯಿಂದ ಉಣಿಸುತ್ತಿದ್ದರು. ಆದರೆ ಇಂದು ಪೋಷಕರು ಸುಲಭವಾಗಿ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಅಭ್ಯಾಸ ಮಾಡುತ್ತಿರುವುದು ದುರಂತ. ಇದು ವೈಯಕ್ತಿಕ ಸಮಸ್ಯೆಯಾಗಿ ಉಳಿಯದೆ ಸಾಮಾಜಿಕ ಹಾಗೂ ರಾಷ್ಟ್ರೀಯ ಸಮಸ್ಯೆಯಾಗಿದೆ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ ಇಂದಿನ ಯುವಜನತೆ ಯಾವುದೇ ದುರಾಭ್ಯಾಸಗಳಿಗೆ ಬಲಿಯಾಗದೆ ಜಾಗೃತರಾಗಿರಬೇಕು. ದುರಾಭ್ಯಾಸ ಜೀವನವನ್ನು ನಾಶಪಡಿ ಸುತ್ತವೆ. ಆದರೆ ಸಾರ್ವಜನಿಕರ ಸೇವೆ ಹಾಗೂ ಕೆಲಸದಲ್ಲಿ ನಿರತರಾಗುವ ವ್ಯಸನ ಇದ್ದರೆ ಅದು ಸಮಾಜಕ್ಕೆ ಆಸ್ತಿ ಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಸರ್ಕಾರಿ ಆಸ್ಪತ್ರೆ ಮಾನಸಿಕ ಆರೋಗ್ಯ ತಜ್ಞ ಡಾ.ವಿನಯ್ ಮಾತನಾಡಿ ಇಂದು ವಿದ್ಯಾರ್ಥಿಗಳಿಗೆ ಮೂತ್ರ ತಪಾಸಣೆ ಮಾಡಿದಾಗ ಮಾದಕ ವಸ್ತು ಸೇವನೆ ಮಾಡಿದ್ದಾರೋ ಇಲ್ಲವೋ ಎಂದು ತಿಳಿಯುತ್ತದೆ.5-6 ವರ್ಷಗಳ ಹಿಂದೆ ಈ ರೀತಿ ಮಾದಕ ವಸ್ತು ವ್ಯಸನಿ ಪತ್ತೆಯಾದರೆ ಅಂಥವರನ್ನು ಶಿಕ್ಷಿಸಲಾಗುತ್ತಿತ್ತು. ಇಂದು ಅವರನ್ನು ಕೌನ್ಸೆಲಿಂಗ್‌ಗೆ ಕಳುಹಿಸ ಲಾಗುವುದು. ವಿದ್ಯಾರ್ಥಿಗಳು ಇಂತಹ ದುಶ್ಚಟಗಳಿಂದ ದೂರವಿದ್ದು, ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಕೆ. ಮಂಜುನಾಥ್, ಡಿ.ಎ.ಸಿ.ಜಿ.ಸರ್ಕಾರಿ ಪಾಲಿಟೆಕ್ನಿಕ್‌ನ ಉಪಪ್ರಾಂಶುಪಾಲ ಶ್ರೀಧರ್ ಆಚಾರ್, ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್, ಜಿಲ್ಲಾ ನಿವೃತ್ತ ಗ್ರಂಥಾಲಯಾಧಿಕಾರಿ ಮಹೇಶಪ್ಪ ಇದ್ದರು.

-- ಬಾಕ್ಸ್‌--

ವ್ಯಸನಮುಕ್ತ ಸಮಾಜ ನಿರ್ಮಾಣ ಕೇವಲ ಸರ್ಕಾರದ ಹೊಣೆಯಲ್ಲ, ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಶಾಸಕನಾಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದೇವೆ. ಯಾವುದೇ ರಾಜಕೀಯ ಹಿನ್ನೆಲೆ ಇರಲಿ ಎಷ್ಟೇ ಪ್ರಭಾವಿ ವ್ಯಕ್ತಿಯಾಗಿರಲಿ, ಮಾದಕ ವಸ್ತು ಸಂಬಂಧಿತ ಪದಾರ್ಥ ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಜೈಲಿಗಟ್ಟಲು ಸೂಚಿಸ ಲಾಗಿದೆ.

-ಎಚ್‌.ಡಿ.ತಮ್ಮಯ್ಯ, ಶಾಸಕರು, ಚಿಕ್ಕಮಗಳೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ
ಶಿಕ್ಷಣದಿಂದ ಮಾತ್ರ ಪಿಡುಗುಗಳನ್ನು ತಡೆಯಬಹುದು: ನ್ಯಾ. ಯೋಗೇಂದ್ರ ಶೆಟ್ಟಿ ಸಲಹೆ