ಕನ್ನಡಪ್ರಭ ವಾರ್ತೆ ಸವದತ್ತಿ
ಪಟ್ಟಣದ ಮಿನಿವಿಧಾನಸೌಧದ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತ ಎಂದೂ ಸಾಲಗಾರನಲ್ಲದಾಗಿದ್ದು, ಸರ್ಕಾರವೇ ಸಾಲಗಾರವಾಗಿರುತ್ತದೆ. ರೈತ ಸಮುದಾಯಕ್ಕೆ ವಿನಾಕಾರಣ ಕಿರುಕಳ ಕೊಟ್ಟರೆ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತರನ್ನು ಅವಮಾನಿಸಿದ ಸಕ್ಕರೆ ಸಚಿವ ಶಿವಾನಂದ ಪಾಟೀಲರವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರೈತರಿಗೆ ಸೆಡ್ಡು ಹೊಡೆದ ಅಧಿಕಾರಿಯು ಸಹಿತ ರೈತ ಸಮುದಾಯಕ್ಕೆ ಕ್ಷಮೆ ಯಾಚಿಸಬೇಕು ಅಲ್ಲಿಯವರೆಗೆ ನಮ್ಮ ರೈತ ಸಂಘಟನೆಗಳ ಪ್ರತಿಭಟನೆಯು ನಿರಂತರವಾಗಿ ಮುಂದುವರೆಯುತ್ತದೆ ಎಂದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರ ಮಾತನಾಡಿ, ತಾಲೂಕಿನಲ್ಲಿ ಬಹಳಷ್ಟು ಜನ ರೈತರು ಸಾಲದ ಭಾದೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ತಾಲೂಕು ಆಡಳಿತವು ರೈತರು ಪ್ರಾಣ ಕಳೆದುಕೊಳ್ಳವುದನ್ನು ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸಬೇಕಿದ್ದು, ಬ್ಯಾಂಕ್ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡುವುದು ಮತ್ತು ಸಾಲವನ್ನು ತುಂಬಲು ಒತ್ತಾಯ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು. ಇತ್ತೀಚೆಗೆ ರೈತರ ವಾಹನಗಳು ಕಳುವು ಆಗುತ್ತಿದ್ದು, ಪೊಲೀಸ್ ಇಲಾಖೆಯು ಸಹ ಶ್ರಮ ವಹಿಸಿ ಆರೋಪಿಗಳನ್ನು ಪತ್ತೆಹಚ್ಚಿ ಅಂತವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನಂತರ ರೈತರು ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರವರಿಗೆ ಮನವಿ ಸಲ್ಲಿಸಿದರು. ಬೆಳಗಾವಿ ಜಿಲ್ಲಾ ಕಾರ್ಯಧ್ಯಕ್ಷ ಸಿಂಧೂರ ತೆಗ್ಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಮುತವಾಡ, ಗಂಗಮ್ಮ ವಿಭೂತಿ, ರಮಿಜ ಪತ್ತು ನಾಯ್ಕರ್, ಶಂಕರ ಬಗನಾಳ, ಶಿವಲಿಂಗಪ್ಪ ಬಿರಾದರ್ ಪಾಟೀಲ, ಶಾರದಾ ಪಾಟೀಲ, ಈರಪ್ಪ ಕಾಳಗಿ, ಸೂರ್ಯಕಾಂತ್ ಕಿತ್ತೂರ, ಶ್ರೀಕಾಂತ ಹಟ್ಟಿಹೊಳಿ ಸೇರಿದಂತೆ ಸಂಘಟನೆಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.