ರೈತರು ಒಕ್ಕಲುತನ ಬಿಟ್ಟರೆ ದೇಶದ ಆರ್ಥಿಕ ವ್ಯವಸ್ಥೆಯೇ ಬುಡಮೇಲು: ನಿರಂಜನಪ್ರಭು ಶ್ರೀ

KannadaprabhaNewsNetwork | Published : Jan 7, 2025 12:32 AM

ಸಾರಾಂಶ

ರೈತರು ಒಕ್ಕಲುತನ ಮಾಡುವುದನ್ನು ಬಿಟ್ಟರೆ ಇಡೀ ದೇಶದ ಆರ್ಥಿಕ ವ್ಯವಸ್ಥೆಯೇ ಬುಡಮೇಲಾಗುತ್ತದೆ.

ಹೊಸಪೇಟೆ: ರೈತರು ಒಕ್ಕಲುತನ ಮಾಡುವುದನ್ನು ಬಿಟ್ಟರೆ ಇಡೀ ದೇಶದ ಆರ್ಥಿಕ ವ್ಯವಸ್ಥೆಯೇ ಬುಡಮೇಲಾಗುತ್ತದೆ ಎಂದು ಗರಗ ನಾಗಲಾಪುರದ ಶ್ರೀಗುರು ಒಪ್ಪತ್ತೇಶ್ವರಸ್ವಾಮಿ ವಿರಕ್ತ ಮಠದ ನಿರಂಜನಪ್ರಭು ಶ್ರೀ ನುಡಿದರು.ನಗರದ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಸೋಮವಾರ ಆಯೋಜಿಸಿದ್ದ ರೈತ ದಿನಾಚರಣೆ ಹಾಗೂ ರೈತ ಸಾಧಕರು ಮತ್ತು ರೈತರ ಪ್ರತಿಭಾನ್ವಿತ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ರೈತರು ಎಷ್ಟೇ ಸಮಸ್ಯೆಯಲ್ಲಿ ಇದ್ದರೂ ಕೃಷಿ ಕಾರ್ಯ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಕೊರೋನ ಸಮಯದಲ್ಲಿ ಸಾಬೀತು ಮಾಡಿದ್ದಾರೆ ಎಂದರು.

ದೇಶದ ರೈತರು ಒಂದು ವರ್ಷ ಬಿತ್ತನೆ ಮಾಡುವುದನ್ನು ಬಿಟ್ಟರೆ ದೇಶ ಅಲ್ಲೋಲ, ಕಲ್ಲೋಲ ಆಗಲಿದೆ. ರೈತರನ್ನು ಎಲ್ಲರೂ ಗೌರವದಿಂದ ನಡೆಸಿಕೊಳ್ಳಬೇಕು. ಕೃಷಿಕರು ಎಂದರೆ ಸಾಕು, ಸಮಸ್ಯೆ ಸುಳಿಯಲಿ ಇದ್ದವರು ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಇಡೀ ದೇಶದ ಹಿತಕ್ಕಾಗಿ ಕೆಲಸ ಮಾಡುತ್ತಿರುವ ರೈತರ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡಬೇಕು ಎಂದರು.ಲಾಕ್‌ಡೌನ್‌ ವೇಳೆ ಕೊಟ್ಟೂರುಸ್ವಾಮಿ ಸಂಸ್ಥಾನ ಮಠಕ್ಕೆ ಸೇರಿದ ಎಂಟು ಎಕರೆ ಹೊಲದಲ್ಲಿ ನಾನು ಕೂಡ ಒಕ್ಕಲುತನ ಮಾಡಿರುವೆ. ಶ್ರೀಗಳು ನಮಗೆ ಮಾರ್ಗದರ್ಶನ ನೀಡಿ, ಕೃಷಿ ಮಾಡಲು ಪ್ರೇರಣೆ ನೀಡಿದರು. ರೈತರ ಕಷ್ಟ, ಕಾರ್ಪಣ್ಯಗಳು ನಮಗೆ ಗೊತ್ತಿದೆ. ಆದರೂ ಎದೆಗುಂದದೆ ಬಿತ್ತನೆ ಮಾಡುವ ಕಾಯಕವನ್ನು ಬಿಡಬಾರದು. ಇಡೀ ಜಗತ್ತಿಗೆ ಕಾಯಕದ ಮಹತ್ವ ತಿಳಿಸಿದ್ದೇ, ರೈತರು ಎಂಬುದನ್ನು ಮರೆಯಬಾರದು ಎಂದರು.

ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಮಾತನಾಡಿ, ರಾಜ್ಯ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು. ಎಪಿಎಂಸಿಗಳನ್ನು ನಡೆಸಿದರೆ, ರೈತರಿಗೆ ಮಧ್ಯವರ್ತಿಗಳಿಂದ ಆಗುವ ಮೋಸ ತಪ್ಪಲಿದೆ. ಈಗ ರೈತರು ಹೊಲ, ಗದ್ದೆಗಳಲ್ಲಿ ಒಬ್ಬರಿಗೆ ಫಸಲು ಮಾರಾಟ ಮಾಡುವ ಸ್ಥಿತಿ ಇದೆ. ಆಗ ತೂಕದಲ್ಲಿ, ಹಣದ ವ್ಯವಹಾರದಲ್ಲಿ ಮೋಸ ಆಗುತ್ತಿದೆ. ಒಂದು ವೇಳೆ ಉತ್ಪನ್ನ ಖರೀದಿಸಿ ಓಡಿ ಹೋದರೆ, ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರನ್ನು ಈ ಸಂಕಷ್ಟದಿಂದ ಪಾರು ಮಾಡಬೇಕು ಎಂದರು.

ಎಸ್ಪಿ ಬಿ.ಎಲ್‌. ಶ್ರೀಹರಿಬಾಬು ಮಾತನಾಡಿ, ಐಎಎಸ್, ಐಪಿಎಸ್‌ ಅಧಿಕಾರಿಗಳ ಮೂಲ ಹುಡುಕುತ್ತಾ ಹೋದರೆ ಅವರು ರೈತರ ಮಕ್ಕಳೇ ಆಗಿರುತ್ತಾರೆ. ನಾನು ಒಂದು ವೇಳೆ, ಖಾಕಿ ಕಳಚಿದರೆ, ಕೃಷಿ ಕೆಲಸವೇ ಮಾಡಬೇಕಾಗುತ್ತದೆ. ಹಾಗಾಗಿ ರೈತರ ಬಗ್ಗೆ ನಾವೆಲ್ಲರೂ ಅಭಿಮಾನ ಹೊಂದೋಣ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ ಮಾತನಾಡಿ, ಪ್ರತಿ ವರ್ಷ ಡಿ.23ರಂದು ರೈತ ದಿನಾಚರಣೆ ಆಚರಿಸಲಾಗುತ್ತದೆ. ರಾಜ್ಯ ಸರ್ಕಾರ ಈ ದಿನ ರಜೆ ಘೋಷಣೆ ಮಾಡಲಿ, ರೈತ ದಿನಾಚರಣೆ ಎಲ್ಲೆಡೆ ಆಚರಣೆ ಆಗಬೇಕು. ಶಾಲಾ, ಕಾಲೇಜುಗಳಲ್ಲಿ ಆಚರಣೆ ಮಾಡಿ, ರೈತರ ಕಾಯಕ, ಕೃಷಿ ಕುರಿತು ತಿಳಿಯಪಡಿಸಬೇಕು ಎಂದರು.

ಸಾಧಕ ರೈತರು, ರೈತರ ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸಲಾಯಿತು. ನಗರದಲ್ಲಿ ರೈತ ದಿನಾಚರಣೆ ನಿಮಿತ್ತ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌, ಜಿಪಂ ಸಿಇಒ ಅಕ್ರಂ ಷಾ ಚಾಲನೆ ನೀಡಿದರು.

ಮುಖಂಡರಾದ ವೆಂಕಟೇಶ್‌, ಶೇಖರ್‌, ಹೊನ್ನೂರವಲಿ ಸೇರಿದಂತೆ ಹಾವೇರಿ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳ ರೈತ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲೆಯ ಪದಾಧಿಕಾರಿಗಳು ಕೂಡ ಇದ್ದರು.

Share this article