ಗುರಿ ಎಂಬುದು ಫ್ಯಾಷನ್‌ ಆದರೆ ಪ್ರಯತ್ನಕ್ಕೆ ಪ್ರತಿಫಲ ಸಿಗುತ್ತದೆ: ಸಿ.ಆರ್‌. ಕಲ್ಪಶ್ರೀ

KannadaprabhaNewsNetwork |  
Published : Sep 27, 2026, 01:15 AM IST
3 | Kannada Prabha

ಸಾರಾಂಶ

ಪದವಿಯಲ್ಲಿ ಇತಿಹಾಸ, ಅರ್ಥಶಾಸ್ತ್ರ, ಇಂಗ್ಲಿಷ್‌ ಐಚ್ಛಿಕ ತೆಗೆದುಕೊಂಡೆ. ಸ್ನಾತಕೋತ್ತರ ಪದವಿಯಲ್ಲಿ ಇಂಗ್ಲಿಷ್‌ನಲ್ಲಿ ಚಿನ್ನದ ಪದಕ ಪಡೆದೆ. ನಂತರ ಸಹಾಯಕ ಪ್ರಾಧ್ಯಾಪಕಿಯಾಗಿದ್ದೆ. ಆದರೆ ಕೆಎಎಸ್‌ ಅಧಿಕಾರಿಯಾಗಲೇಬೇಕು ಎಂಬುದು ನನ್ನ ಫ್ಯಾಷನ್‌ ಆಗಿತ್ತು. ಅದೇ ರೀತಿ ಪ್ರಯತ್ನ ಮಾಡಿ, ಗುರಿ ತಲುಪಿದೆ. ಇದಕ್ಕೆ ಬದ್ಧತೆ ಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಗುರಿ ಎಂಬುದು ಫ್ಯಾಷನ್‌ ಆದರೆ ಪ್ರಯತ್ನಕ್ಕೆ ಪ್ರತಿಫಲ ಸಿಗುತ್ತದೆ ಎಂದು ಮಂಡ್ಯ ವಿಶ್ವವಿದ್ಯಾಲಯ ಕುಲಸಚಿವೆ ಹಾಗೂ ಮೈಸೂರಿನ ಕಾವೇರಿ ನೀರಾವರಿ ನಿಗಮದ ಪ್ರಧಾನ ಆಡಳಿತಾಧಿಕಾರಿ ಸಿ.ಆರ್‌.ಕಲ್ಪಶ್ರೀ ಹೇಳಿದರು.

ಸರಸ್ವತಿಪುರಂ ಜೆಎಸ್ಎಸ್‌ ಮಹಿಳಾ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಹಿರಿಯ ವಿದ್ಯಾರ್ಥಿನಿಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಇದೇ ಕಾಲೇಜಿನ ಹಳೆಯ ವಿದ್ಯಾರ್ಥಿ. ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ನಾನು ಪಿಯುಸಿಯಲ್ಲಿ ಸೈನ್ಸ್‌ ತೆಗೆದುಕೊಂಡಿದ್ದೆ. ಇಂಗ್ಲಿಷ್‌ ಮಾಧ್ಯಮದ ಪಾಠ ಅರ್ಥವಾಗದಿದ್ದಾಗ ಒಂದು ತಿಂಗಳ ನಂತರ ಆರ್ಟ್ಸ್‌ಗೆ ಸ್ಥಳಾಂತರಗೊಂಡೆ ಎಂದರು.

ಪದವಿಯಲ್ಲಿ ಇತಿಹಾಸ, ಅರ್ಥಶಾಸ್ತ್ರ, ಇಂಗ್ಲಿಷ್‌ ಐಚ್ಛಿಕ ತೆಗೆದುಕೊಂಡೆ. ಸ್ನಾತಕೋತ್ತರ ಪದವಿಯಲ್ಲಿ ಇಂಗ್ಲಿಷ್‌ನಲ್ಲಿ ಚಿನ್ನದ ಪದಕ ಪಡೆದೆ. ನಂತರ ಸಹಾಯಕ ಪ್ರಾಧ್ಯಾಪಕಿಯಾಗಿದ್ದೆ. ಆದರೆ ಕೆಎಎಸ್‌ ಅಧಿಕಾರಿಯಾಗಲೇಬೇಕು ಎಂಬುದು ನನ್ನ ಫ್ಯಾಷನ್‌ ಆಗಿತ್ತು. ಅದೇ ರೀತಿ ಪ್ರಯತ್ನ ಮಾಡಿ, ಗುರಿ ತಲುಪಿದೆ. ಇದಕ್ಕೆ ಬದ್ಧತೆ ಬೇಕು. ಎಂಥದ್ದೇ ಸವಾಲು ಎದುರಾದರೂ ಸಾಧಿಸುವ ಛಲ ಇರಬೇಕು ಎಂದರು.

ಹಿರಿಯ ವಿದ್ಯಾರ್ಥಿನಿಯರನ್ನು ಸೇರಿಸುವುದು, ಭೂತ, ವರ್ತಮಾನ ಮತ್ತು ಭವಿಷ್ಯಕ್ಕೆ ಸೇತುವೆ ಇದ್ದಂತೆ. ಈ ರೀತಿಯ ಸಭೆ ಮಾಡುವುದರಿಂದ ಈಗ ಓದುತ್ತಿರುವವರಿಗೆ ಸ್ಫೂರ್ತಿ ಸಿಗುತ್ತದೆ. ಜೆಎಸ್ಎಸ್‌ ಸಂಸ್ಥೆ ಕೇವಲ ಶಿಕ್ಷಣ ನೀಡುವುದಿಲ್ಲ. ಅದರ ಜೊತೆಗೆ ಸಂಸ್ಕಾರವನ್ನು ಕೊಡುತ್ತದೆ. ಸಂಸ್ಕೃತಿಯನ್ನು ಕಲಿಸುತ್ತದೆ. ಅದು ವಿನಯವಂತರನ್ನಾಗಿ ಮಾಡುತ್ತದೆ ಎಂದು ಹೇಳಿದರು.

ಮುಖ್ಯಅತಿಥಿಯಾಗಿದ್ದ ‘ಆಂದೋಲನ’ ವ್ಯವಸ್ಥಾಪಕ ಸಂಪಾದಕಿ ರಶ್ಮಿ ಕೋಟಿ ಮಾತನಾಡಿ, ಜೀವನದಲ್ಲಿ ಸೋಲು- ಗೆಲುವು ಸಹಜ. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಆದ್ದರಿಂದ ದೃಢವಾದ ಆತ್ಮವಿಶ್ವಾಸದಿಂದ ಮುನ್ನಡೆಯಿರಿ ಎಂದರು.

ಯುವಜನತೆ ಸಾಮಾಜಿಕ ಜಾಲತಾಣವನ್ನು ಬಳಸುವಾಗ ಎಚ್ಚರ ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಮತ್ತೊರ್ವ ಮುಖ್ಯ ಅತಿಥಿ, ಚಲನಚಿತ್ರ ಹಾಗೂ ರಂಗಭೂಮಿ ನಟಿ ಅಕ್ಷತಾ ಪಾಂಡವಪುರ ಮಾತನಾಡಿ, ಕಲಾ ಜಗತ್ತಿಗೆ ಪ್ರವೇಶಿಸಬೇಕಾದರೆ ಸಾಹಿತ್ಯದ ಜ್ಞಾನ ಅವಶ್ಯಕ. ರಂಗಭೂಮಿಯ ಪ್ರಪಂಚದ ಜೀವನಪಾಠ ಕಲಿಸುತ್ತದೆ ಎಂದರು.

ಇದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದ ನಾನು ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೆ. ಜೊತೆಗೆ ಕಾಲೇಜು ಕೂಡ ನೆರವಾಯಿತು ಎಂದು ಸ್ಮರಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ರೇಚಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಸುತ್ತೂರು ಕ್ಷೇತ್ರದ ಶಿವರಾತ್ರಿ ರಾಜೇಂದ್ರ ಶ್ರೀಗಳು ಹಾಗೂ ಈಗಿನ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಸಮಾಜದ ಎಲ್ಲಾ ವರ್ಗದವರಿಗೆ ಅನ್ನ,ಅಕ್ಷರ, ಆರೋಗ್ಯ ಒದಗಿಸಲು ಶ್ರಮಿಸಿದರು ಎಂದರು.

ಮಹಿಳಾ ಕಾಲೇಜಿನ ಶೈಕ್ಷಣಿಕ ಸಾಧನೆ, ಪ್ರವೇಶಾತಿ, ವಿವಿಧ ಕೋರ್ಸುಗಳ ಗುಣಮಟ್ಟ, ಭಾರತೀಯ ಸಂಸ್ಕೃತಿ ಬೋಧನೆ ಕುರಿತು ಮಾಹಿತಿ ನೀಡಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ಯಾರ್ಥಿಗಳಾದ ಮೈವಿವಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಆರ್‌.ಎಚ್‌. ಪವಿತ್ರಾ, ಇದೇ ಕಾಲೇಜಿನ ಉಪನ್ಯಾಸಕಿ ಡಾ.ಮಲ್ಲಿಕಾ, ಅಕ್ಷರಿ, ಗೀತಾ ಮಾತನಾಡಿ, ತಮ್ಮ ಅನುಭವ ಹಂಚಿಕೊಂಡರು. ಕಾರ್ಯಕ್ರಮ ಸಂಯೋಜಕಿ ಆರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಡಾ.ಎಚ್‌.ಡಿ.ಸರಿತಾ ಸ್ವಾಗತಿಸಿದರು. ಭೂಗೋಳಶಾಸ್ತ್ರ ಮುಖ್ಯಸ್ಥೆ ಎನ್. ನಾಗಲಾಂಬಿಕೆ ಕಾರ್ಯಕ್ರಮ ನಿರೂಪಿಸಿದರು. ಭೌತಶಾಸ್ತ್ರ ಮುಖ್ಯಸ್ಥೆ ಬಿ. ಸೌಮ್ಯಾ ವಂದಿಸಿದರು. ದೀಕ್ಷಾ ಮತ್ತು ವೃಂದದವರು ಪ್ರಾರ್ಥಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಲೈಮಾಕ್ಸ್ ತಲುಪಿದ ಸಿಟಿ ಇನ್‌ಸ್ಟಿಟ್ಯೂಟ್ ಸಭೆ
ರಾಣೀಕೆರೆ ಒತ್ತುವರಿ ಸರ್ವೆ ಕಾರ್ಯಕ್ಕೆ ಗ್ರಹಣ