ಸವದತ್ತಿ : ಮಲಪ್ರಭಾ ಆಣೆಕಟ್ಟೆಯಲ್ಲಿ ಪ್ರಸಕ್ತ ವರ್ಷದಲ್ಲಿ ಕೇವಲ ೯ ಟಿಎಮ್‌ಸಿಯಷ್ಟು ಮಾತ್ರ ನೀರು ಸಂಗ್ರಹವಿರುವದರಿಂದ ಮುಂದಿನ ದಿನಗಳಲ್ಲಿ ಮಳೆಯಾಗದೆ ಹೋದಲ್ಲಿ ತಾಲೂಕಿನಾದ್ಯಂತ ಕುಡಿಯುವ ನೀರಿಗೂ ತೊಂದರೆಯಾಗುವ ಸಾಧ್ಯತೆಗಳಿವೆ. ಜಾಕ್‌ವೆಲ್ ಬಳಿಯ ಅನಧಿಕೃತ ಪಂಪ್‌ಸೆಟ್‌ಗಳನ್ನು ಶೀಘ್ರ ತೆರವುಗೊಳಿಸುವ ಕಾರ್ಯ ಮಾಡಬೇಕೆಂದು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಳೆಯಾದಗಲೊಮ್ಮೆ ಗ್ರಾಮೀಣ ಭಾಗದಲ್ಲಿ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಸ್ವಚ್ಛತೆ ಇಲ್ಲದೆ ಕೆಂಪು ವರ್ಣಕ್ಕೆ ತಿರುಗುತ್ತಿದ್ದು, ಅದನ್ನು ವ್ಯವಸ್ಥಿತವಾಗಿ ಸರಿಪಡಿಸುವ ಮೂಲಕ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಸದ್ಭಳಕೆಯಾಗಬೇಕಿದ್ದು, ಅನೇಕ ಕಡೆ ಅದರ ದುರ್ಬಳಕೆಯಾಗುತ್ತಿದೆ. ಮುಂದಿನ ಕೆಲವು ಗ್ರಾಮಗಳಿಗೆ ಕುಡಿಯುವ ನೀರು ನಿಲುಕದೆ ಇರುವುದು ಗಮನಕ್ಕೆ ಬಂದಿದ್ದು, ಆಯಾ ಗ್ರಾಮದ ಪಿಡಿಒಗಳು ಸೂಕ್ತ ಕ್ರಮವಹಿಸಬೇಕೆಂದು ಸೂಚನೆ ನೀಡಿದರು.ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಯಾವುದೆ ಕಾರಣಕ್ಕೂ ಮಕ್ಕಳ ಸಂಖ್ಯೆ ಕಡಿಮೆಯಾಗದಂತೆ ನಿಗಾವಹಿಸಬೇಕು. ಪ್ರತಿವರ್ಷ ಕನಿಷ್ಠ ಶೇ.೨ರಷ್ಟಾದರೂ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬೇಕು.
ತಾಲೂಕಿನ ಯಾವುದೇ ಶಾಲೆಗಳಲ್ಲಿ ಕಟ್ಟಡಗಳು ಕುಸಿಯುವ ಹಂತಕ್ಕೆ ಬಂದಿದ್ದರೆ ಅಂತಹ ಶಾಲೆಗಳಲ್ಲಿ ಮಕ್ಕಳನ್ನು ಕೂಡಿಸುವ ಕೆಲಸ ಮಾಡಬೇಡಿ. ಆ ಶಾಲೆಗಳನ್ನು ತಕ್ಷಣ ನೆಲಸಮಗೊಳಿಸಿ ಮುಂದಿನ ಕ್ರಮ ಕೈಗೊಳ್ಳಲು ತಮ್ಮ ಗಮನಕ್ಕೆ ತರುವಂತೆ ತಿಳಿಸಿದರು.ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ತಾಲೂಕಿನ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸಿಬ್ಬಂದಿಯ ಕೊರತೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದ್ದು, ಅಧಿಕಾರಿಗಳು ತಮ್ಮ ಇಲಾಖೆಯಲ್ಲಿನ ಸಮಸ್ಯೆಗಳನ್ನು ಗಮನಕ್ಕೆ ತರುವ ಪ್ರಯತ್ನ ಮಾಡಬೇಕು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತಂದಾಗ ಅಧಿಕಾರಿಗಳು ಅವರೊಂದಿಗೆ ಸಹನೆಯಿಂದ ವರ್ತಿಸುವುದರ ಜೊತೆಗೆ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು. ತಾಲೂಕಿನ ಪ್ರತಿಯೊಂದು ಹಾಸ್ಟೇಲ್‌ಗಳಲ್ಲಿ ಸ್ವಚ್ಛತೆಗೆ ವಿಶೇಷ ಗಮನ ನೀಡಬೇಕಿದ್ದು, ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡುವಲ್ಲಿ ಯಾವುದೇ ಕಾರಣಕ್ಕೂ ನಿಷ್ಕಾಳಜಿ ತೋರಬಾರದು.
ರೈತರ ಜಮೀನುಗಳಿಗೆ ನೀರಾವರಿ ಒದಗಿಸುವ ನಿಟ್ಟಿನಲ್ಲಿ ನಿತ್ಯ ನೀಡುತ್ತಿರುವ ೭ ಗಂಟೆಗಳ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ಕ್ರಮಕೈಗೊಳ್ಳಬೇಕೆಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕಿನಲ್ಲಿ ಸಾಕಷ್ಟು ಕಡೆಗಳಲ್ಲಿ ಅನಧಿಕೃತವಾಗಿ ಎಲ್ಲೆಂದರಲ್ಲಿ ಸಾರಾಯಿ ಮಾರಾಟವಾಗುತ್ತಿದ್ದು, ಅದಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ತಿಳಿಸಿದರು.
ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯಿಂದ ಕೈಗೊಂಡ ಕಾಮಗಾರಿಗಳು ಹಾಗೂ ಅನುದಾನ ಬಳಕೆಯ ಮಾಹಿತಿಯನ್ನು ಸಭೆಯಲ್ಲಿ ಮಂಡಿಸಿದರು.ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ, ಯರಗಟ್ಟಿ ತಹಸೀಲ್ದಾರ್ ಎಮ್.ವಿ.ಗುಂಡಪ್ಪಗೋಳ, ತಾಪಂ ಇಒ ಆನಂದ ಬಡಕುಂದ್ರಿ, ಯಲ್ಲಮ್ಮಾ ನಗರಸಭೆ ಪೌರಾಯುಕ್ತ ಸಂಗನಬಸಯ್ಯ ಗದಗಿಮಠ, ಡಿಎಸ್ಪಿ ಚಿದಂಬರ ಮಡಿವಾಳರ ಹಾಗೂ ಅಧಿಕಾರಿಗಳಾದ ಬಿಇಒ ಎ.ಎ.ಖಾಜಿ, ಆರ್.ಆರ್.ಕುಲಕರ್ಣಿ, ರತ್ನಾ ಕದಮ, ಡಾ.ಅನೀಲ ಮರಲಿಂಗಣ್ಣವರ, ಟಿಎಚ್‌ಓ ಡಾ.ಶ್ರೀಪಾದ ಸಬನೀಸ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.