ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರಿ ವಹಿಸಿಕೊಂಡ ನಂತರದಲ್ಲಿ ಇದೇ ಮೊದಲ ಬಾರಿಗೆ ಜನಸ್ಪಂದನ ಸಭೆ ನಡೆಸಿದ ಕೃಷ್ಣ ಬೈರೇಗೌಡರು ಸಭೆಯ ಆರಂಭಕ್ಕೂ ಮೊದಲೇ ಅಧಿಕಾರಿ ವರ್ಗಕ್ಕೆ ಸಮಸ್ಯೆಗಳನ್ನು ಹೊತ್ತು ಇಲ್ಲಿಗೆ ಬಂದಿರುವ ಜನರಿಗೆ ಸುಳ್ಳು ಭರವಸೆ ನೀಡಬೇಡಿ. ಕಾನೂನು ವ್ಯಾಪ್ತಿಯಲ್ಲಿ ಕೆಲಸ ಆಗುತ್ತದೆ ಎನ್ನುವುದಾದರೆ ಕೆಲಸ ಆಗುತ್ತದೆ ಎಂದು ಭರವಸೆ ಕೊಡಿ. ಇಲ್ಲದಿದ್ದರೆ ಆಗುವುದಿಲ್ಲ ಎಂದು ಲಿಖಿತವಾಗಿ ಬರೆದುಕೊಡಿ. ಸುಳ್ಳು ಹೇಳಿಕೊಂಡು ಜನರನ್ನು ಸುಮ್ಮನೆ ಅಲೆಸಬೇಡಿ ಎಂದು ತಾಕೀತು ಮಾಡಿದರು.ಡಿಸಿ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಜನಸ್ಪಂದನಾ ಸಭೆಯಲ್ಲಿ ಮಾತನಾಡಿದ ಅವರು, ಕೇವಲ ಕಾಟಾಚಾರಕ್ಕೆ ಸಭೆ ನಡೆಸುವುದರಿಂದ ಪ್ರಯೋಜನವಿಲ್ಲ ಎಂದು ಸ್ಪಷ್ಟಪಡಿಸಿದರು. ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಫಲಿತಾಂಶ ಬರಬೇಕು. ಇಲ್ಲದಿದ್ದರೆ ಸರ್ಕಾರದ ಯೋಜನೆಗಳು ವ್ಯರ್ಥವಾಗುತ್ತವೆ. ಜನರ ಹಿತಕ್ಕಾಗಿ ಕಾನೂನು ಬದ್ಧ ಕೆಲಸಗಳಿಗೆ ಆದ್ಯತೆ ನೀಡಿ. ಕಾನೂನು ಬಾಹಿರ ಕೆಲಸಗಳನ್ನು ಮಾಡಿಕೊಡಲು ನಾವು ಸಿದ್ಧರಿಲ್ಲ. ಆದ್ದರಿಂದ ಜನರೂ ಸಹ ಕಾನೂನು ಬದ್ಧ ಬೇಡಿಕೆಗಳನ್ನು ಮಾತ್ರ ಮುಂದುವರೆಸ ಬೇಕು ಎಂದು ಮನವಿ ಮಾಡಿದರು.
ಶೇ.90ರಷ್ಟು ಕಂದಾಯ ಇಲಾಖೆಗೆ ಸಂಬಂಧಿಸಿದ್ದು:ಇಡೀ ಜನಸ್ಪಂದನಾ ಸಭೆಯುದ್ದಕ್ಕೂ ಬಂದ ಅಹವಾಲುಗಳಲ್ಲಿ ಶೇ.90ರಷ್ಟು ಕಂದಾಯ ಇಲಾಖೆಗೆ ಸಂಬಂಧಿಸಿದ್ದೇ ಆಗಿತ್ತು. ಅನೇಕರು ಭೂಮಿ, ಮನೆ, ಪಿಂಚಣಿ, ರಸ್ತೆ, ಆರೋಗ್ಯ, ವಿದ್ಯುತ್ ಇಲಾಖೆ, ಕುಡಿಯುವ ನೀರು ಹಾಗೂ ಸಾರ್ವಜನಿಕ ಸೇವಾ ಸೌಲಭ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು. ಸಚಿವರು ಪ್ರತಿಯೊಂದು ಸಮಸ್ಯೆಗೂ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ತಕ್ಷಣದ ಪರಿಹಾರ ಕಲ್ಪಿಸುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ದೂರುಗಳೇ ಹೆಚ್ಚಿದ್ದವು. ಅಂದರೆ, ಜಮೀನಿನ ಖಾತೆ, ಹೇಮಾವತಿ ಮುಳುಗಡೆ ಸಂತ್ರಸ್ತರ ನೋವು, ಮುಳುಗಡೆ ಜಮೀನಿನ ದುರಸ್ತಿ ಆಗದಿರುವುದು. ಮಂಜೂರಾದರೂ ಜಾಗವನ್ನು ಅನುಭವಕ್ಕೆ ತೆಗೆದುಕೊಳ್ಳಲಾಗದಿರುವುದು, ಜಮೀನಿಗೆ ದಾರಿ ಕಲ್ಪಿಸಿಕೊಡುವುದು,ವೊತ್ತುವರಿ ಜಾಗವನ್ನು ಸಕ್ರಮಗೊಳಿಸಿಕೊಡಿ, ಸರ್ಕಾರಿ ಜಮೀನಿನಲ್ಲಿ ರಸ್ತೆ ಬಿಡಿಸಿಕೊಡಿ, ಫಾರಂ ನಂಬರ್ 53,57 ಅಡಿ ಸಲ್ಲಿಸಿರುವ ಅರ್ಜಿಗಳಿಗೆ ಭೂಮಿ ಮಂಜೂರು ಮಾಡಿಸಿಕೊಡಿ ಎನ್ನುವ ಅಹವಾಲುಗಳೇ ಹೆಚ್ಚಾಗಿದ್ದವು.
ಸಾರ್ವಜನಿಕ ಹಿತಾಸಕ್ತಿಯೇ ಕಂಡುಬರಲಿಲ್ಲ:ಈ ನಡುವೆ ಜಿಲ್ಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಪ್ರತಿಭಟನೆ, ಸಭೆ, ದುಂಡುಮೇಜಿನ ಸಭೆ ಮಾಡುವ ಸಾಕಷ್ಟು ಸಂಘಟನೆಗಳು ಇವೆ. ಆದರೆ, ಇವ್ಯಾವೂ ಈ ಸಂದರ್ಭದಲ್ಲಿ ಮುಂದೆ ಬಂದು ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ಸಾರ್ವಜನಿಕ ಹಿತಾಸಕ್ತಿ ಮುಂದಿಟ್ಟು ಅಹವಾಲು ಸಲ್ಲಿಸುವ ಪ್ರಯತ್ನ ಮಾಡಲೇ ಇಲ್ಲ. ಜಿಲ್ಲೆಯಲ್ಲಿ ಪ್ರತಿ ತಾಲೂಕಿನಲ್ಲೂ ಬೀದಿ ನಾಯಿಗಳ ಹಾವಳಿ, ಮೂಲಭೂತ ಸೌಲಭ್ಯಗಳ ಕೊರತೆ, ಜಿಲ್ಲಾ ಕೇಂದ್ರದಲ್ಲಿರುವ ಎಪಿಎಂಸಿಯಲ್ಲಿ ರೈತರ ಹಲವು ಸಮಸ್ಯೆಗಳು, ನಗರದೊಳಗೆ ಟ್ರಾಫಿಕ್ ಸಮಸ್ಯೆ, ಪಾರ್ಕಿಂಗ್ ಸಮಸ್ಯೆ, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಸೌಲಭ್ಯಗಳ ಕೊರತೆ, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸುಲಿಗೆ, ನರ್ಸಿಂಗ್ ಹೋಮ್ ಮತ್ತು ಖಾಸಗಿ ಶಾಲಾ ಕಾಲೇಜುಗಳ ಮುಂದಿನ ರಸ್ತೆ ಒತ್ತುವರಿ, ನಗರಸಭೆ ಮಹಾನಗರ ಪಾಲಿಕೆಯಾದ ನಂತರದಲ್ಲಿ ಇ ಖಾತೆಯಲ್ಲಿ ಉಂಟಾಗಿರುವ ಸಮಸ್ಯೆ ಸೇರಿದಂತೆ ನೂರಾರು ಸಮಸ್ಯೆಗಳಿವೆ. ಆದರೂ, ಯಾವ ಸಂಘಟನೆಗಳಾಗಲಿ ...ಬುದ್ದಿ ಜೀವಿಗಳು ಎನಿಸಿಕೊಂಡವರಾಗಲಿ ಇದ್ಯಾವುದರ ಬಗ್ಗೆಯೂ ಸೊಲ್ಲೆತ್ತಲೇ ಇಲ್ಲ.
ಸಚಿವರ ಭರವಸೆ:ಸಭೆಯ ಅಂತ್ಯದಲ್ಲಿ ಸಚಿವ ಕೃಷ್ಣಬೈರೇಗೌಡ ಅವರು, ಜನರ ವಿಶ್ವಾಸ ಕಳೆದುಕೊಳ್ಳಬಾರದು. ಸರ್ಕಾರದ ಕಾರ್ಯಕ್ರಮಗಳು ನೆಲಮಟ್ಟದಲ್ಲಿ ಯಶಸ್ವಿಯಾಗಬೇಕಾದರೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಹಾಸನ ಜಿಲ್ಲೆಯ ಜನತೆಗೆ ನಾವು ನೀಡುವ ಪ್ರತಿಯೊಂದು ನಿರ್ಧಾರವೂ ಅನುಭವಿಸಲು ಸಾಧ್ಯವಾಗಬೇಕು ಎಂದು ಪುನರುಚ್ಚರಿಸಿದರು. ಈ ಸಭೆಯ ಮೂಲಕ ಹಾಸನ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸರ್ಕಾರದಿಂದ ತ್ವರಿತ ಸ್ಪಂದನೆ ದೊರೆಯುವ ನಿರೀಕ್ಷೆ ಮೂಡಿದೆ. ಸಾರ್ವಜನಿಕರ ಕುಂದುಕೊರತೆಗಳ ಜನಸ್ಪಂದನಾ ಸಭೆಯಲ್ಲಿ ಸಮಸ್ಯೆಗಳನೊತ್ತಿಕೊಂಡು ನೂರಾರು ೬೦೦ಕ್ಕೂ ಹೆಚ್ಚು ಜನರು ಬಂದಿದ್ದು, ಅವರಿಗೆ ಯಾವ ಸಮಸ್ಯೆ ಆಗದಂತೆ ಅಚ್ಚುಕಟ್ಟಾಗಿ ಶಾಮಿಯಾನ ಹಾಕಿ ಕುಳಿತುಕೊಳ್ಳಲು ಚೇರಿನ ವ್ಯವಸ್ಥೆ ಮಾಡಲಾಗಿತ್ತು. ಮೊದಲೇ ನೀಡಿದ ಟೋಕನ್ ಪ್ರಕಾರ ಹೆಸರು ಕೂಗಿ ಯಾವ ಗೊಂದಲ ಆಗದಂತೆ ನಿಗಾ ವಹಿಸಿದರು.
ಸಭೆಯಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ, ಶಾಸಕ ಸಿ.ಎನ್. ಬಾಲಕೃಷ್ಣ, ಶಾಸಕ ಸಿಮೆಂಟ್ ಮಂಜು, ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ, ಜಿ.ಪಂ. ಸಿಇಒ ಬಿ.ಆರ್. ಪೂರ್ಣಿಮಾ, ಡಿಎಫ್‌ಇ ಸೌರಭ್ ಕುಮಾರ್ ತಿವಾರಿ, ಎಸಿ ಮಾರುತಿ ವಿವಿಧ ತಾಲೂಕಿನ ತಹಸೀಲ್ದಾರ್ ಸೇರಿದಂತೆ ಜಿಲ್ಲಾ ಮಟ್ಟದ ಹಲವು ಅಧಿಕಾರಿಗಳು, ಉಪವಿಭಾಗಾಧಿಕಾರಿಗಳು, ಇತರರು ಪಾಲ್ಗೊಂಡಿದ್ದರು.--
ಬಾಕ್ಸ್‌ನ್ಯೂಸ್.....ಬಡವರಿಗೆ ಮಿಡಿದ ಡಿಸಿ ಹೃದಯಸಭೆಯ ವೇದಿಕೆಯಲ್ಲಿದ್ದ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಇಡೀ ಜನಸ್ಪಂದನಾ ಸಭೆಯಲ್ಲಿ ವೃದ್ಧರು, ಬಡವರು, ಅಂಗವಿಲಕ ಬಗ್ಗೆ ಮಾತೃ ಹೃದಯ ಪ್ರದರ್ಶಿಸಿದ್ದಾರೆ. ಇಡೀ ಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಅಹವಾಲುಗಳೇ ಹೆಚ್ಚಿದ್ದವು. ಆದರೆ, ಅದರ ನಡುವೆ ಕೆಲ ಅಬಲರು, ಅಂಗವಿಕಲರು, ವೃದ್ಧರು, ನಿರುದ್ಯೋಗಿಗಳು ನೆರವು ಕೋರಿ ಬಂದಿದ್ದರು. ಅಂಥವರನ್ನು ಗಮನಿಸುತ್ತಿದ್ದ ಜಿಲ್ಲಾಧಿಕಾರಿಗಳು ಖುದ್ದು ಅವರನ್ನು ಗುರ್ತಿಸಿ ಕರೆದು ಅವರ ಅರ್ಜಿಗಳನ್ನು ಪಡೆದು ಅವುಗಳನ್ನು ವಿಶೇಷವಾಗಿ ಪರಿಗಣಿಸಿ ಇಡುತ್ತಿದ್ದರು. ಈ ಮೂಲಕ ಬಡವರು, ಅಸಹಾಯಕರ ಬಗೆಗಿನ ಅವರ ಕಾಳಜಿ ಏನೆನ್ನುವುದು ಸ್ಪಷ್ಟವಾಗುವಂತಿತ್ತು.