ಕನ್ನಡ ಬೆಳೆಸಬೇಕಾದರೆ ಕನ್ನಡ ಶಾಲೆ ಉಳಿಸಿ

KannadaprabhaNewsNetwork | Published : Dec 30, 2024 1:02 AM

ಸಾರಾಂಶ

ಕನ್ನಡ ಭಾಷೆ ಉಳಿಯಬೇಕಾದರೆ ಸರ್ಕಾರ ಗ್ರಾಮೀಣ ಭಾಗದಲ್ಲಿ ಯಾವುದೇ ಕಾರಣ ನೀಡಿ ಕನ್ನಡ ಶಾಲೆಗಳನ್ನು ಮುಚ್ಚದೆ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು.ಕಳೆದ ಹತ್ತು ವರ್ಷಗಳಿಂದ ಒಂದು ಸಾವಿರಕ್ಕೂ ಹೆಚ್ಚಿನ ಸರ್ಕಾರಿ ಕನ್ನಡ ಶಾಲೆಗಳಿಗೆ ಸರ್ಕಾರ ಬೀಗ ಹಾಕಲಾಗಿದೆ. ಇವುಗಳನ್ನು ಮತ್ತೆ ತೆರೆದು ತರಗತಿ ಆರಂಭಿಸಬೇಕು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ರಾಜ್ಯದಲ್ಲಿ ಕನ್ನಡ ಭಾಷೆ ಪ್ರಜ್ವಲಿಸಬೇಕಾದರೆ ಸರ್ಕಾರಿ ಕನ್ನಡ ಶಾಲೆಗಳನ್ನು ಸರ್ಕಾರ ಮುಚ್ಚದೆ ಉಳಿಸಲು ಮತ್ತಷ್ಟು ಉತ್ತೇಜನ ನೀಡಬೇಕಾದ ಅನಿವಾರ್ಯತೆ ಇದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಅಶ್ವತ್ಥ್‌ ಅಭಿಪ್ರಾಯಪಟ್ಟರು.ಪಟ್ಟಣದ ಕುವೆಂಪು ವೃತ್ತದಲ್ಲಿರುವ ರಾಷ್ಟ್ರಕವಿ ಕುವೆಂಪು ರವರ ಜನ್ಮದಿನೋತ್ವದ ಪ್ರಯುಕ್ತ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ರಾಜ್ಯದಲ್ಲಿ ಅನ್ಯ ಭಾಷಿಗರು ಬೃಹತ್ತಾಗಿ ನೆಲೆಸಿರುವುದರಿಂದ ಕನ್ನಡ ಭಾಷೆಯನ್ನು ಬಳಸುವವರ ಸಂಖ್ಯೆ ದಿನೇ ದಿನೆ ಕ್ಷೀಣಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

ಗ್ರಾಮೀಣ ಶಾಲೆ ಮುಚ್ಚಬೇಡಿ

ಕನ್ನಡ ಭಾಷೆ ಉಳಿಯಬೇಕಾದರೆ ಸರ್ಕಾರ ಗ್ರಾಮೀಣ ಭಾಗದಲ್ಲಿ ಯಾವುದೇ ಕಾರಣ ನೀಡಿ ಕನ್ನಡ ಶಾಲೆಗಳನ್ನು ಮುಚ್ಚದೆ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು.ಕಳೆದ ಹತ್ತು ವರ್ಷಗಳಿಂದ ಒಂದು ಸಾವಿರಕ್ಕೂ ಹೆಚ್ಚಿನ ಸರ್ಕಾರಿ ಕನ್ನಡ ಶಾಲೆಗಳಿಗೆ ಸರ್ಕಾರ ಬೀಗ ಹಾಕಲಾಗಿದೆ ಎಂದು ವಿಷಾದಿಸಿದರು.ಕಸಾಪ ಕನ್ನಡ ನಾಡು ನುಡಿ ಜಲ ರಕ್ಷಣೆಗಾಗಿ ಸದಾ ಮಿಡಿಯುವುವುದು .ಮೂರು ಭಾಷಿಗರು ಸಂಗಮವಿರುವ ತಾಲೂಕಿನಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಕಸಾಪ ಸದಾ ಕಂಕಣ ಬದ್ದವಾಗಿದೆ. ಬರೀ ಮಾತಿನಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಶ್ರಮಿಸಬೇಕೆಂದು ಭಾಷಣ ಮಾಡಿದರೆ ಆಗದು ಅದನ್ನು ಕಾರ್ಯಗತಗೊಳಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.

ಕುವೆಂಪು ತಮ್ಮ ಮೇರು ಕೃತಿ ಶ್ರೀರಾಮಾಯಣ ದರ್ಶನಂನಲ್ಲಿ ಈ ಕಾಲಕ್ಕೆ ಅಗತ್ಯವಾದ ದರ್ಶವನ್ನು ನೀಡಿದ್ದಾರೆ. ಅವರ ಎರಡು ಬೃಹತ್ ಕಾದಂಬರಿಗಳಾದ ಕಾನೂರು ಹೆಗ್ಗಡತಿ ಹಾಗೂ ಮಲೆಗಳಲ್ಲಿ ಮದುಮಗಳು ಅವರನ್ನು ಜಗತ್ತಿನ ಮಹಾನ್ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ ಎಂದು ಬಣ್ಣಿಸಿದರು.ಈ ವೇಳೆ ಎಲ್.ರಾಜಪ್ಪ,ಮಧು,ಶಿವು,ಎಲ್.ರಾಮಕೃಷ್ಣ,ವಕೀಲ ಜಯಪ್ರಕಾಶ್,ಮೈಸತೀಶ್ ಕುಮಾರ್,ಕವಿ ಲಕ್ಷ್ಮಯ್ಯ,ಬೇಕರಿ ಶ್ರೀನಿವಾಸ್, ರಾಮಪ್ರಸಾದ್, ಮಂಜುನಾಥ್, ರಾಮಚಂದ್ರ, ಶ್ರೀನಾಥ್ ಮತ್ತಿತರರು ಇದ್ದರು.

Share this article