ಕನ್ನಡಪ್ರಭ ವಾರ್ತೆ, ಬೀದರ್
ಸಚಿನ್ ಪಂಚಾಳ ಸಾವಿನ ಕುರಿತಂತೆ ಬಿಜೆಪಿ ಅನಗತ್ಯವಾಗಿ ಸಚಿವ ಪ್ರಿಯಾಂಕ ಖರ್ಗೆ ಅವರ ಹೆಸರು ಎಳೆದುತರುತ್ತಿದೆ. ಮನೆಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರೆ ನಾವು ದಲಿತ ಸಂಘಟನೆಗಳು ಕೈಕಟ್ಟಿ ಕುಳಿತುಕೊಂಡಿರುವದಿಲ್ಲ ಎಂಬುವದನ್ನು ಮರೆಯದಿರಲಿ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಚಂದ್ರಕಾಂತ ನಿರಾಟೆ ಎಚ್ಚರಿಸಿದರು.ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಚಿನ ಗುತ್ತಿಗೆದಾರನೇ ಅಲ್ಲ. ಮೋಸ ಹೋಗಿದ್ದು, ಕಲಬುರಗಿ ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್ ರಾಜು ಕಪನೂರ. ಅದಾಗ್ಯೂ ಬಿಜೆಪಿ ಸುಳ್ಳು ಆರೋಪ ಮಾಡುತ್ತಲಿದೆ. ಸಚಿನ ಆತ್ಮಹತ್ಯೆ ಇರಲಿಕ್ಕಿಲ್ಲ ಇದರ ಹಿಂದೆ ಷಡ್ಯಂತ್ರದ ಅನುಮಾನವಿದ್ದು ಕೊಲೆಯ ಶಂಕೆಯಿದೆ ಎಂದು ಆರೋಪಿಸಿದರು.ಬಿಎಸ್‌ವೈ ಪೋಕ್ಸೋ ಹೊರಬರುತ್ತೆ:ದಲಿತರ ಆಶಾಕಿರಣವಾದ ಪ್ರಿಯಾಂಕ ಖರ್ಗೆ ಅವರನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನ ನಡೆಸುವ ಕನಸನ್ನೂ ಕಾಣದಿರಲಿ. ಅವರ ಹಿಂದೆ ದಲಿತ ಸಂಘಟನೆಗಳ ಶಕ್ತಿಯೇ ಇದೆ. ಪ್ರಿಯಾಂಕ್ ಅವರ ರಾಜೀನಾಮೆ ಕೇಳುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ನೆನಪಿರಲಿ ಅವರ ತಂದೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮೇಲೆಯೂ ಸಾಕಷ್ಟು ಪ್ರಕರಣಗಳಿವೆ. ಪೋಕ್ಸೋ ದೂರು ಸಹ ದಾಖಲಾಗಿದ್ದಿದೆ, ನಾವದನ್ನು ಕೆದಕುವ ಪ್ರಯತ್ನ ಮಾಡಿಲ್ಲ ಎಂದು ಎಚ್ಚರಿಸಿದರು.ರಾಜು ಕಪನೂರ ಅವರು ಸಚಿನ್ ಅವರಿಗೆ ಲಕ್ಷಾಂತರ ರುಪಾಯಿ ಹಣ ನೀಡಿ ಟೆಂಡರ್‌ನಲ್ಲಿ ಹಣ ಹೂಡಲು ಹೇಳಿದ್ದರು ಅದಕ್ಕೆ ಮೋಸವಾಗಿದೆ, ಅಷ್ಟೇ ಅಲ್ಲ ಕಪನೂರ ಅವರ ಮನೆಯಲ್ಲೇ ಒಂದು ವರ್ಷ ಠಿಕಾಣಿ ಹೂಡಿದ್ದ ಸಚಿನ್ ಕೊನೆ ಘಳಿಗೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು ಅನುಮಾನಾಸ್ಪದವಾಗಿದೆ ಇದರ ತನಿಖೆಗೆ ಈಗಾಗಲೇ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿದ್ದು ಸಿಬಿಐ ತನಿಖೆಗೆ ಒಪ್ಪಿಸಿದರೂ ನಮ್ಮದೇನೂ ತಕರಾರಿಲ್ಲ ಎಂದರು.ಬಿಜೆಪಿಯವರು ಸಾವಿನ ಪ್ರಕರಣವನ್ನು ರಾಜಕೀಯಕ್ಕೆ ಬಳಸುತ್ತಿರುವುದು ಖೇದಕರ ಸಂಗತಿಯಾಗಿದೆ. ಕಪನೂರ ಇವರು ಮಹಾನಗರ ಪಾಲಿಕೆ ಚುನಾವಣೆ, ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ಆ ಅಭ್ಯರ್ಥಿಗಳು ವಿಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ಬಿಜೆಪಿಗರಿಗೆ ಸಹಿಸದಾಗಿದೆ ಎಂದರು.ಎರಡು ಬಾರಿ ಸೋಲುಂಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದು ಪಾಟೀಲ್, ಅಂದೋಲಾ ಸ್ವಾಮೀಜಿ, ಮಣಿಕಂಠ ರಾಠೋಡ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಇದೀಗ ಡೆತ್‌ನೋಟ್ ಹಿಡಿದುಕೊಂಡು ತಮ್ಮ ಕೊಲೆ ಮಾಡುವುದಕ್ಕಾಗಿ ರಾಜು ಕಪನೂರ ಸುಪಾರಿ ನೀಡಿರುತ್ತಾರೆಂದು ಆಪಾದಿಸುತ್ತಿದ್ದಾರೆ. ಆದರೆ ಇವರದ್ದೇ ಹಿನ್ನಲೆಯನ್ನು ಪರಿಶೀಲಿಸಿದರೆ ಇವರೆಂಥವರು ಎಂದು ಜನರಿಗೆ ಈಗಾಗಲೇ ಗೊತ್ತಿದೆ ಎಂದು ನಿರಾಟೆ ಕಿಡಿ ಕಾರಿದರು.
ಸದ್ದಿಗೋಷ್ಠಿಯಲ್ಲಿ ಮಹೇಶ ಗೋರನಾಳಕರ್, ವಿಷ್ಣುವರ್ಧನ ವಾಲದೊಡ್ಡಿ ಮಾತನಾಡಿದರು. ಒಕ್ಕೂಟದ ಇತರೆ ಪ್ರಮುಖರಾದ ರಾಜಕುಮಾರ ಗುನ್ನಳ್ಳಿ, ಸಂತೋಷ ಏಣಕುರೆ, ಅಮೃತ ಮುತ್ತಂಗಿಕರ್, ಬಾಬು ಕೌಟಾ, ಸುರೇಶ ಘಾಂಗರೆ ಸೇರಿದಂತೆ ಇತರರು ಸುದ್ದಿಗೋಷ್ಟಿಯಲ್ಲಿದ್ದರು.ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಿದ್ರೆಬಿಜೆಪಿ ಶಾಸಕ ಮನೆಗೂ ಮುತ್ತಿಗೆ
ದಲಿತ ಸಂಘಟನೆಗಳ ಮುಖಂಡರಾದ ರಾಜಕುಮಾರ ಮೂಲಭಾರತಿ ಮಾತನಾಡಿ, ಒಂದು ವೇಳೆ ಪ್ರಿಯಾಂಕ ಖರ್ಗೆಯವರ ನಿವಾಸಕ್ಕೆ ಮುತ್ತಿಗೆ ಹಾಕಿದರೆ ಬೀದರ್ ಜಿಲ್ಲೆಯ ಬಿಜೆಪಿ ಶಾಸಕರ ಮನೆಗೆ ಮುತ್ತಿಗೆ ಹಾಕುತ್ತೇವೆ, ಅವರು ತಿರುಗಾಡುವ ರಸ್ತೆ ಅಡ್ಡಗಟ್ಟಿ ಧಿಕ್ಕಾರ ಕೂಗುತ್ತೇವೆಂದು ಎಚ್ಚರಿಕೆ ನೀಡಿದರು.ಸತ್ಯಾಸತ್ಯತೆಯನ್ನು ಅರಿಯದ ಬಿಜೆಪಿ ಮುಖಂಡರು ಪ್ರಿಯಾಂಕ ಖರ್ಗೆ ಅವರ ರಾಜೀನಾಮೆಗೆ ಆಗ್ರಹಿಸಿ ಮನೆ ಮುತ್ತಿಗೆ ಪ್ರತಿಭಟನೆಗೆ ಮುಂದಾಗಲಿರುವದು ಮೂರ್ಖತನದ ಪರಮಾವಧಿಯಾಗಿದೆ ಇಂಥವರನ್ನು ಬಂಧಿಸಬೇಕು ಎಂದು ಮೂಲಭಾರತಿ ಆಗ್ರಹಿಸಿದರು.ಧನ್ನೂರ ಪೊಲೀಸ್ ಠಾಣೆಯ ಪಿಎಸ್ಸೈ ವಿಶ್ವಾರಾಧ್ಯ ವರ್ಗ
ಬೀದರ್: ದೂರು ದಾಖಲಿಸಲು ಹಿಂದೇಟು ಹಾಕಿದ್ದಾರೆ ಎಂದು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಗುತ್ತಿಗೆದಾರ ಸಚಿನ್ ಕುಟುಂಬಸ್ಥರ ಆರೋಪದ ಹಿನ್ನೆಲೆಯಲ್ಲಿ ಧನ್ನೂರ ಪೊಲೀಸ್ ಠಾಣೆಯ ಪಿಎಸ್‌ಐ ವಿಶ್ವಾರಾಧ್ಯ ಅವರನ್ನು ಕಲಬುರಗಿ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಬೀದರ್‌ನ ಗುತ್ತಿಗೆದಾರ ಸಚಿನ ಪಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಧನ್ನೂರ ಪೊಲೀಸರಿಂದ ಕರ್ತವ್ಯಲೋಪ ಕಂಡುಬಂದ ಹಿನ್ನೆಲೆಯಲ್ಲಿ ಧನ್ನೂರ ಪೊಲೀಸ್ ಠಾಣೆಯಿಂದ ಕಲಬುರಗಿ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದ್ದು, ಕಲಬುರಗಿ ಕೇಂದ್ರ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶಿಸಿಸಲಾಗಿದೆ ಎಂದು ತಿಳಿದುಬಂದಿದೆ.
ವಿಧಿವಿಜ್ಞಾನ ಕೇಂದ್ರದಿಂದ ಎಪ್‌ಎಸ್‌ಎಲ್ ವರದಿ ಸಲ್ಲಿಕೆಯಾಗಿದ್ದು, ವರದಿಯಲ್ಲಿ ಡೆತ್‌ನೋಟ್‌ನಲ್ಲಿರುವ ಕೈಬರಹ ಸಚಿನ್ ಅವರದ್ದಾಗಿದೆ ಎಂದು ದೃಢ ವಾಗಿದ್ದು, ರೈಲ್ವೆ ಪೊಲೀಸರು, ಸಚಿನ ಆತ್ಮಹತ್ಯೆ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿರುವುದರಿಂದ, ಸಾಕ್ಷ್ಯ ಹಾಗೂ ದಾಖಲೆಗಳನ್ನು ಸಿಐಡಿಗೆ ರೈಲ್ವೆ ಪೊಲೀಸರಿಂದ ಸಿಐಡಿ ಕಚೇರಿಗೆ ವರ್ಗಾವಣೆ ಮಾಡಲಾಗಿದ್ದು, ಬುಧವಾರ ಅಥವಾ ಗುರುವಾರ ಬೀದರ್‌ಗೆ ಸಿಐಡಿ ಅಧಿಕಾರಿಗಳ ತಂಡ ಬರಲಿದ್ದು, ತನಿಖೆ ಇನ್ನಷ್ಟು ಚುರುಕು ಹಿಡಿಯಲಿದೆ ಎನ್ನಲಾಗಿದೆ.ಸಿಬಿಐ ತನಿಖೆಗೆ ಕೋರಿ ಪ್ರಧಾನಿಗೆ ಪತ್ರ: ಸಚಿನ್ ಸಹೋದರಿ ಸುರೇಖಾಬೀದರ್: ಸಚಿನ್ ಪಂಚಾಳ ಆತ್ಮಹತ್ಯೆ ಕುರಿತಂತೆ ಸರ್ಕಾರ ದಿನಕ್ಕೊಂದು ಹೇಳಿಕೆ ನೀಡುತ್ತಿದೆ. ತನಿಖೆಯ ದಿಕ್ಕನ್ನೇ ಬದಲಿಸುವಂಥ ಪ್ರಯತ್ನವನ್ನು ಪೊಲೀಸರು ಮಾಡುತ್ತಿದ್ದರಿಂದ ರಾಜ್ಯ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ ಹೀಗಾಗಿ ಸಿಬಿಐ ತನಿಖೆಗೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ಮೃತ ಗುತ್ತಿಗೆದಾರ ಸಚಿನ್ ಪಂಚಾಳ ಸಹೋದರಿ ಸುರೇಖಾ ಪಂಚಾಳ ತಿಳಿಸಿದರು.
ಅವರು ಬುಧವಾರ ಗ್ರಾಮದಲ್ಲಿ ಭೇಟಿಯಾದ ಮಾಧ್ಯಮದವರಿಗೆ ಮಾತನಾಡಿ, ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದು ಕೊಳ್ಳುತಿದ್ದು, ಈಗ ಸಚಿನ್ ಗುತ್ತಿಗೆದಾರನೇ ಅಲ್ಲ ಎಂಬ ಮಾತು ಗುತ್ತಿಗೆದಾರರ ಸಂಘದಲ್ಲಿ ಕೇಳಿ ಬರುತ್ತಿದೆ. ನಾವೆಂದೂ ಸಚಿನ್ ಗುತ್ತಿಗೆದಾರ ಎಂದು ಹೇಳಿಲ್ಲ ನಮಗೆ ಅದು ಗೊತ್ತೂ ಇಲ್ಲ. ಆತನ ಎಲ್ಲ ದಾಖಲೆಗಳು ಕಲಬುರಗಿ ಕಚೇರಿಯಲ್ಲಿದ್ದು, ಅವುಗಳನ್ನೀಗ ನಾಶಪಡಿಸಲಾಗಿದೆ ಎಂದರು.ರಾಜ್ಯ ಸರ್ಕಾರದಿಂದ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ. ಇವತ್ತು ಗುತ್ತಿಗೆದಾರನೇ ಇಲ್ಲ ಅಂತಾರೆ, ನಾಳೆ ಕಲಬುರಗಿ ಕಚೇರಿ ಇಲ್ಲ, ಕಲಬುರಗಿಯಲ್ಲಿ ಕೆಲಸ ಮಾಡಿಲ್ಲ, ಆತ ನಮಗೆ ಭೇಟಿನೇ ಆಗಿಲ್ಲ, ಸಚಿನ್ ಡೆತ್‌ನೋಟ್ ಬರೆದೇ ಇಲ್ಲ, ಮೃತದೇಹ ಸಚಿನದ್ದು ಅಲ್ಲ, ಸಚಿನ ಹುಟ್ಟೇ ಇಲ್ಲ ಎಂಬಿತ್ಯಾದಿಗಳನ್ನು ಹುಟ್ಟು ಹಾಕ್ತಾರೆ ಎಂಬ ಭಯ ಕಾಡ್ತಿದೆ ಎಂದರು.ಡೆತ್‌ನೋಟ್‌ನಲ್ಲಿ ಸ್ಪಷ್ಟವಾಗಿ ಕಿರುಕುಳ ನೀಡಿದವರ ಹೆಸರು ಬರೆಯಲಾಗಿದೆ. ಆದರೆ ಆರೋಪಿಗಳಿಗೆ ಇನ್ನೂವರೆಗೆ ಪಶ್ನೆನೇ ಮಾಡಿಲ್ಲ. ತನಿಖಾ ಅಧಿಕಾರಿ ಗಳು ನಮಗೆ ಮಾತ್ರ ವಿಚಾರಣೆ ಮಾಡುತ್ತಿದ್ದಾರೆ. ಎಫ್‌ಎಸ್‌ಎಲ್ ವರದಿ ಬಂದಿರುವ ಬಗ್ಗೆ, ಶವಪರೀಕ್ಷೆಯ ವರದಿ ಬಗ್ಗೆ ಏನೂ ಮಾಹಿತಿ ಹೇಳುತ್ತಿಲ್ಲ. ಈ ಸರ್ಕಾರಕ್ಕೆ ನಾವು ಹೇಗೆ ನಂಬಬೇಕು, ನಮಗೆ ಸರ್ಕಾರದ ಮೇಲೆ ನಂಬಿಕೆ ಇಲ್ಲ ಕೂಡಲೇ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆಯಲು ಪ್ರಯತ್ನಿಸುತ್ತೇವೆ ಎಂದು ಸಚಿನ ಸಹೋದರಿ ಸುರೇಖಾ ಹೇಳಿದ್ದಾರೆ.