ಭಾಷೆ ಬೆಳೆದರೆ ಸಾಹಿತ್ಯ ಬೆಳೆಯಲು ಸಾಧ್ಯ: ಪ್ರೊ. ಕೊರಗಲ್ ವಿರೂಪಾಕ್ಷಪ್ಪ

KannadaprabhaNewsNetwork | Published : May 25, 2025 1:27 AM
ಹಾವೇರಿ ನಗರದ ಹೊರವಲಯದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಗಂಗಾಧರ ನಂದಿ ಸಾಹಿತ್ಯ ಭವನದಲ್ಲಿ ಹಾವೇರಿ ಹೋಬಳಿ ಘಟಕದ ಉದ್ಘಾಟನೆ ಮತ್ತು ಜಿಲ್ಲಾ ಮಟ್ಟದ ಕವಿಗೋಷ್ಠಿ ನಡೆಯಿತು. 30ಕ್ಕೂ ಹೆಚ್ಚು ಕವಿಗಳು ಕಾವ್ಯವಾಚನ ಮಾಡಿದರು.
Follow Us

ಹಾವೇರಿ: ಕನ್ನಡ ಕಲಿಕೆಯಲ್ಲಿ ಆಸಕ್ತಿ ಕಡಿಮೆಯಾಗಿರುವುದರಿಂದಲೇ ಕನ್ನಡ ಶಾಲೆಗಳು ಸೊರಗುತ್ತಿವೆ. ಭಾಷೆ ಬೆಳೆದರೆ ಸಾಹಿತ್ಯ ಬೆಳೆಯಲು ಸಾಧ್ಯ. ಕವಿಗಳಿಗೆ ನಿರಂತರವಾದ ಅಭ್ಯಾಸ ಬೇಕು. ಹಾಗಾದಾಗ ಮಾತ್ರ ಭಾವ ಜಗತ್ತಿನ ಕಾವ್ಯ ಸೃಷ್ಟಿಸಲು ಸಾಧ್ಯ ಎಂದು ಲೇಖಕ ಪ್ರೊ. ಕೊರಗಲ್ ವಿರೂಪಾಕ್ಷಪ್ಪ ಹೇಳಿದರು.

ನಗರದ ಹೊರವಲಯದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಗಂಗಾಧರ ನಂದಿ ಸಾಹಿತ್ಯ ಭವನದಲ್ಲಿ ಜರುಗಿದ ಹಾವೇರಿ ಹೋಬಳಿ ಘಟಕದ ಉದ್ಘಾಟನೆ ಮತ್ತು ಜಿಲ್ಲಾ ಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಅನೇಕ ಯುವ ಕವಿಗಳ ಅಶ್ಲೀಲ ಕವಿತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿಕಾರ ಭಾವವನ್ನು ಹುಟ್ಟಿಸುವ ಇಂತಹ ಕಾವ್ಯ ಸಲ್ಲ ಎಂದು ಹೇಳಿದರು. ಕುಮಾರವ್ಯಾಸನ ಸಭಾಪರ್ವದ ಕಾವ್ಯ ವಾಚಿಸಿ, ದ್ರೌಪದಿಯ ಶೃಂಗಾರ ವರ್ಣನೆಯ ಭಾಗಗಳನ್ನು ಓದಿ ತೋರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಹೊಸದಾಗಿ ನಿರ್ಮಾಣವಾಗುತ್ತಿರುವ ಸಾಹಿತ್ಯ ಭವನದಲ್ಲಿ ನಿರಂತರವಾಗಿ ಚಟುವಟಿಕೆ ನಡೆಯಬೇಕು. ಪರಿಷತ್ತು ಉಚಿತವಾಗಿ ವ್ಯವಸ್ಥೆ ಮಾಡಿಕೊಡುತ್ತಿದ್ದು, ಸದ್ಯದಲ್ಲಿಯೇ ಭವನದ ಉದ್ಘಾಟನೆ ನಡೆಯಲಿದೆ ಎಂದರು.

ಹೋಬಳಿ ಘಟಕದ ನೂತನ ಅಧ್ಯಕ್ಷರಾದ ಡಾ. ಗೀತಾ ಸುತ್ತಕೋಟಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಯುವ ಸಾಹಿತಿಗಳಿಗೆ ಪ್ರೋತ್ಸಾಹಿಸುವ ಉದ್ದೇಶ ಘಟಕದ್ದಾಗಿದ್ದು, ಈ ಕಾರಣದಿಂದಲೇ ಜಿಲ್ಲಾಮಟ್ಟದ ಕವಿಗೋಷ್ಠಿ ಜರುಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಕನ್ನಡ ಸೇವಾರ್ಥಿಗಳಾದ ವಾಣಿ ಮತ್ತು ಅಕ್ಕಮಹಾದೇವಿ ನೀರಲಗಿ ಅವರನ್ನು ಸನ್ಮಾನಿಸಲಾಯಿತು.

ಸಾಹಿತಿ ಹನುಮಂತಗೌಡ ಗೊಲ್ಲರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಬಿ. ಆಲದಕಟ್ಟಿ, ಜಿಲ್ಲಾಕೋಶಾಧ್ಯಕ್ಷ ಎಸ್.ಎನ್. ದೊಡ್ಡಗೌಡರ ಹಾಗೂ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿದರು. ಆನಂತರ ನಡೆದ ಕವಿಗೋಷ್ಠಿಯಲ್ಲಿ ಹಿರಿಕಿರಿ ಕವಿಗಳಾದ ಸಿ.ಎಸ್. ಮರಳಿಹಳ್ಳಿ, ಕೆ.ಆರ್. ಹಿರೇಮಠ, ಜುಬೇದಾ ನಾಯಕ್, ಶಿವಯೋಗಿ ಚರಂತಿಮಠ, ಅರುಣ ಬಂಕಾಪುರ, ಮಣಿಕಂಠ ಗೊದಮನಿ, ಅಕ್ಕಮಹಾದೇವಿ ನೀರಲಗಿ, ನೀಲಕಂಠಯ್ಯ ಓದಿಸೋಮಠ, ಗುಡ್ಡಪ್ಪ ಚಟ್ರಮ್ಮನವರ, ಶಶಿಕಲಾ ಅಕ್ಕಿ, ಸುರೇಖಾ ನೇರಳಿಕರ, ಮೇಘನಾ ಟಿ.ಎಸ್. ಅಕ್ಕಮಹಾದೇವಿ ಹಾನಗಲ್ಲ, ನೇತ್ರಾ ಅಂಗಡಿ, ಭಾರತಿ ಯಾವಗಲ್, ರೇಣುಕಾ ಗುಡಿಮನಿ, ಶಿವರಾಜ ಅರಳಿ, ಜಯಶ್ರೀ ಬುಡಪನಹಳ್ಳಿ, ಎಸ್.ವಿ. ಬಾರ್ಕಿ ಹಾಗೂ ಜ್ಯೋತಿ ಬಿಶೆಟ್ಟಿಯವರ ಸೇರಿದಂತೆ 30ಕ್ಕೂ ಹೆಚ್ಚು ಕವಿಗಳು ಕಾವ್ಯವಾಚನ ಮಾಡಿದರು.

ರಾಜಾಭಕ್ಷ ಕಾರ್ಯಕ್ರಮ ನಿರೂಪಿಸಿದರು. ರಾಜೇಂದ್ರ ಹೆಗಡೆ ವಂದಿಸಿದರು.