ಚಿಕ್ಕಮಗಳೂರು: ಸಾಹಿತ್ಯಾತ್ಮಕ ಚಟುವಟಿಕೆಗಳು ಜನಸಾಮಾನ್ಯರ ಮನಸ್ಸಿನಲ್ಲಿ ಅಚ್ಚಳಿಯದೇ ನೆಲೆಯೂರಿಸಿದರೆ, ಪರಸ್ಪರ ಪ್ರೀತಿ ಹೆಚ್ಚಾಗಿ ಜಾತೀಯತೆ ಮತ್ತು ಕೋಮುವಾದದ ವಿಷ ಬೀಜ ಕರಗಲಿದೆ ಎಂದು ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದರು.
ನಗರದ ಬಸವನಹಳ್ಳಿ ಬಾಲಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು ವಸ್ತಾರೆ ಹೋಬಳಿ ಸೇವಾಧೀಕ್ಷ ಸಮಾರಂಭದಲ್ಲಿ ಮಾತನಾಡಿದರು. ಬಡವರು, ಕೂಲಿ ಕಾರ್ಮಿಕರಲ್ಲಿ ಕನ್ನಡ ಭಾಷಾಭಿಮಾನ ಹೆಚ್ಚಿದೆ. ಆದರೆ, ಶ್ರೀಮಂತ ಕುಟುಂಬದಲ್ಲಿ ಆಂಗ್ಲಭಾಷೆ ವ್ಯಾಮೋಹದಿಂದ ಕನ್ನಡ ನಶಿಸುತ್ತಿದೆ. ಹೀಗಾಗಿ ಕನ್ನಡಾಭಿಮಾನಿಗಳು ಮೊದಲು ಉಳ್ಳ ವರ ಕುಟುಂಬಕ್ಕೆ ಭಾಷಾಭಿಮಾನ ಮೂಡಿಸುವ ಮೂಲಕ ನಾಡಿನ ಭಾಷಾ ಸಂಸ್ಕೃತಿ ಎತ್ತಿ ಹಿಡಿಯಬೇಕು ಎಂದು ಸಲಹೆ ಮಾಡಿದರು.ಮಾತೃ ಭಾಷೆ ಬಗ್ಗೆ ಅಪಾರ ಅಭಿಮಾನವಿರಬೇಕು. ದುರಭಿಮಾನ ಇರಕೂಡದು. ನೂರಾರು ಭಾಷೆ ಕಲಿಯುವುದರಲ್ಲಿ ತಪ್ಪಿಲ್ಲ. ಬೇರೆ ಭಾಷೆಗಳ ಅಬ್ಬರದಲ್ಲಿ ತಾಯ್ನುಡಿ ಕ್ಷೀಣಿಸದಿರಲಿ. ದೇಶ, ವಿದೇಶಗಳಲ್ಲಿ ಪ್ರವಾಸಕ್ಕೆ ತೆರಳಿದಲ್ಲಿ ಅಲ್ಲಿ ಕನ್ನಡಿಗರು ಸಿಕ್ಕರೆ ಅಪ್ಪ ಅಮ್ಮ ಸಿಕ್ಕಂತೆ ಎಂದ ಅವರು, ಹೆಚ್ಚಿನ ಪ್ರಾಮುಖ್ಯತೆ ಕನ್ನಡಗಿರಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಪಂಪ, ರನ್ನ, ಕನಕ ದಾಸರು, ಪುರಂದರ ದಾಸರು, ಕುವೆಂಪು, ಪೂರ್ಣಚಂದ್ರ ತೇಜಸ್ವಿ ಮಹಾನೀಯರ ಸಂಪೂರ್ಣ ಬದುಕು ಕನ್ನಡಕ್ಕೆ ಮುಡಿಪಾಗಿತ್ತು. ಆ ಕನ್ನಡ ಪರಂಪರೆ ಉಳಿಸಿ, ಬೆಳೆಸುವ ಜವಾಬ್ದಾರಿ ಹೊತ್ತಿರುವ ಹೋಬಳಿ ಅಧ್ಯಕ್ಷರು ಜಾಗೃತರಾಗಿ ಮುನ್ನಡೆಸಬೇಕು ಎಂದು ಹೇಳಿದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಎಂಟು ಜ್ಞಾನಪೀಠ ಪ್ರಶಸ್ತಿಗೆ ಕನ್ನಡನಾಡು ಭಾಜನವಾಗಿದೆ. ಹೀಗಾಗಿ ನಾಡಿ ನಲ್ಲಿ ವಾಸಿಸುವ ಅನ್ಯ ಭಾಷಿಗರಿಗೆ ಮೊದಲು ಕನ್ನಡ ಭಾಷೆ ಹಿರಿಮೆ, ಗರಿಮೆ ಕಲಿಸುವಂಥ ಕೆಲಸವನ್ನು ಕಸಾಪ ಮಾಡಬೇಕು. ಜೊತೆಗೆ ನಾಡು, ನುಡಿಗೆ ಧಕ್ಕೆಯಾದರೆ ಧೈರ್ಯವಾಗಿ ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.ವಸ್ತಾರೆ ಹೋಬಳಿ ನೂತನ ಅಧ್ಯಕ್ಷ ಡಾ.ಸತೀಶ್ ಜಕ್ಕನಹಳ್ಳಿ ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಹೋಬಳಿ ಮಟ್ಟದಲ್ಲಿ ಕಸಾಪ ಕಾರ್ಯಕ್ರಮ ಹಮ್ಮಿಕೊಂಡು ಕನ್ನಡ ತಾಯಿ ಸೇವೆಯಲ್ಲಿ ತೊಡಗಲಾಗುವುದು. ಜೊತೆಗೆ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಿ ಪ್ರೋತ್ಸಾಹಿಸುತ್ತೇನೆ ಎಂದು ಭರವಸೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ತಾಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಸೇವಾಧೀಕ್ಷೆ ಬೋಧಿಸಿದರು.ವಸ್ತಾರೆ ಹೋಬಳಿ ನೂತನ ಘಟಕ:
ಡಾ.ಸತೀಶ್ ಜಕ್ಕನಹಳ್ಳಿ (ಅಧ್ಯಕ್ಷ), ಎ.ಬಿ.ರುದ್ರೇಗೌಡ (ಗೌರವ ಅಧ್ಯಕ್ಷ), ವಿ.ಎನ್.ಸಂದೀಪ್, ಮಮತ ಯೋಗೀಶ್ (ಗೌರವ ಕಾರ್ಯದರ್ಶಿ), ಟಿ.ಜಿ.ಸುದೀಪ್ (ಕೋಶಾಧ್ಯಕ್ಷ), ತಮ್ಮಣ್ಣಗೌಡ, ವಿ.ಆರ್.ಪ್ರವೀಣ್‌ಕುಮಾರ್, ಕಾರ್ತೀಕ್ (ಸಹ ಕಾರ್ಯದರ್ಶಿ), ಚಂದ್ರಶೇಖರ್, ಬಸವರಾಜು, ಸಂದೇಶ್, ಮೋಹನ್ (ಸಂಘಟನಾ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.ಕಾರ್ಯಕ್ರಮದಲ್ಲಿ ಕಸಾಪ ನಿಕಟಪೂರ್ವ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಟಿ.ಸಂದೀಪ್, ನಗರಾಧ್ಯಕ್ಷ ಸಚಿನ್, ಅಂಬಳೆ ಹೋಬಳಿ ಕಸಾಪ ಅಧ್ಯಕ್ಷ ಮಾಸ್ತೇಗೌಡ ಉಪಸ್ಥಿತರಿದ್ದರು.6 ಕೆಸಿಕೆಎಂ 4ಚಿಕ್ಕಮಗಳೂರಿನ ಬಸವನಹಳ್ಳಿ ಬಾಲಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವಸ್ತಾರೆ ಹೋಬಳಿ ಸೇವಾಧೀಕ್ಷಾ ಸಮಾರಂಭ ನಡೆಯಿತು. ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಇದ್ದರು.