ಮೋದಿ ದೇಶಕ್ಕೆ ಸ್ಕೀಂ ನೀಡಿದರೆ, ಕಾಂಗ್ರೆಸ ಸ್ಕ್ಯಾಮ್ ನೀಡಿದೆ

KannadaprabhaNewsNetwork | Updated : Apr 30 2024, 02:21 AM IST

ಸಾರಾಂಶ

ಕಾಂಗ್ರೆಸ್ ಪಕ್ಷ ತನ್ನ ೬೦ ವರ್ಷದಲ್ಲಿ ಒಂದಕ್ಕಿಂತ ಹಲವಾರು ಹಗರಣಗಳನ್ನು ಮಾಡಿ ಸ್ಕ್ಯಾಮ್‌ಗಳನ್ನು ನೀಡಿದ್ದ ಸರ್ಕಾರವಾಗಿತ್ತು. ಹೀಗಾಗಿ ದೇಶದ ಜನರು ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರ ಇಟ್ಟಿದೆ.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ೧೦ ವರ್ಷದಲ್ಲಿ ಹಲವು ಜನಪರ ಯೋಜನೆಗಳನ್ನು ನೀಡಿದರೆ, ಕಾಂಗ್ರೆಸ್ ಪಕ್ಷ ತನ್ನ ೬೦ ವರ್ಷದಲ್ಲಿ ಒಂದಕ್ಕಿಂತ ಹಲವಾರು ಹಗರಣಗಳನ್ನು ಮಾಡಿ ಸ್ಕ್ಯಾಮ್‌ಗಳನ್ನು ನೀಡಿದ್ದ ಸರ್ಕಾರವಾಗಿತ್ತು. ಹೀಗಾಗಿ ದೇಶದ ಜನರು ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರ ಇಟ್ಟಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಹೇಳಿದರು.

ಪಟ್ಟಣದ ಬಾಪುರಾವ ಕಲ್ಯಾಣ ಮಂಟಪದಲ್ಲಿ ನಡೆದ ಯುವ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ೬೦ ವರ್ಷಕ್ಕಿಂತ ಹೆಚ್ಚು ಕಾಲ ಕಾಂಗ್ರೆಸ್ ಅಧಿಕಾರ ನಡೆಸಿ ಹಗರಣಗಳ ಸರಮಾಲೆಯನ್ನೆ ಮಾಡಿತ್ತು. ಹಾಗಾಗಿ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ದೂರ ಇಟ್ಟಿದೆ ಎಂದರು.

ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಎಸ್ಸಿ, ಎಸ್ಟಿಗೆ ಮೀಸಲಾಗಿದ್ದ, ೨೫ ಸಾವಿರ ಕೋಟಿ ಎಸ್‌ಸಿಪಿ, ಟಿಎಸ್‌ಪಿ ಅನುದಾನ ದುರ್ಬಳಕೆ ಮಾಡಿಕೊಂಡು ಆ ಸಮಾಜಕ್ಕೆ ಅನ್ಯಾಯ ಮಾಡಿದೆ. ಆ ಕುರಿತು ಇಲ್ಲಿವರೆಗೆ ಚಕಾರ ಎತ್ತದೇ ಜಾಣ ಕುರುಡು ನೀತಿ ಅನುಸರಿಸುತ್ತಿದ್ದಾರೆ. ನಿಮಗೆ ಏನಾದರೂ ದಲಿತರ ಬಗ್ಗೆ ಕಾಳಜಿ ಇದ್ದರೆ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರದಿಂದ ಹೊರಗೆ ಬನ್ನಿ ಎಂದು ಸಾವಲು ಹಾಕಿದರು.

ಒಬ್ಬ ಸಚಿವರಾಗಿ ವಿಧಾನಸಭೆ ಅಧಿವೇನದಲ್ಲಿ ಪ್ರತಿಯೊಂದು ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿ ಸರ್ಕಾರವನ್ನು ಗುತ್ತಿಗೆ ಪಡೆದಂತೆ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರವನ್ನು ಇವರೇನು ಪವರ್ ಆಫ್ ಅಟರ್ನಿ ಪಡೆದಿದ್ದಾರೆಯೇ? ಮೊದಲು ಅವರ ಉಸ್ತುವಾರಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸತ್ತುಹೋಗಿದೆ. ಕಳೆದ ೭-೮ ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದ ಸಾವುಗಳಿಗೆ ಜವಾಬ್ದಾರಿ ಯಾರು ಎಂದು ಪ್ರಶ್ನಿಸಿದರು.

ಈ ಚುನಾವಣೆ ಮೋದಿ ಪರಿವಾರ ವರ್ಸೇಸ್ ಖರ್ಗೆ ಪರಿವಾರದ್ದಾಗಿದೆ, ಮೋದಿ ಪರಿವಾರದಲ್ಲಿ ಇಡೀ ೧೪೦ ಕೋಟಿ ಜನ ಇದ್ದರೆ, ಖರ್ಗೆ ಅವರ ಪರಿಹಾರದಲ್ಲಿ ಅವರ ಕುಟುಂಬ, ಅಳಿಯ, ಮಗ ಇದ್ದಾರೆ. ಅದಕ್ಕೆ ದೇಶದ ಹಿತಕ್ಕಾಗಿ ಮೋದಿಯನ್ನು ಗೆಲ್ಲಿಸುವ ಸಂಕಲ್ಪ ಮಾಡಿ ಎಂದು ಈ ವೇಳೆ ಸಿಟಿ ರವಿ ಮನವಿ ಮಾಡಿದರು.

ಲೊಕಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲ್, ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೆವಾಡಿ, ಯುವ ಜಿಲ್ಲಾಧ್ಯಕ್ಷ ಪ್ರವೀಣ ತೆಗನೂರ ಮಾತನಾಡಿದರು.

Share this article