ರೈತರಿಗೆ ನೋಟಿಸ್‌ ಕೊಟ್ಟಿದ್ರೆ ವಾಪಸ್‌: ಸಚಿವ ಜಮೀರ್‌ ಅಹ್ಮದ್ ಖಾನ್

KannadaprabhaNewsNetwork | Published : Nov 2, 2024 1:33 AM

ಸಾರಾಂಶ

ರೈತರ ಜಮೀನುಗಳಿಗೆ ನೋಟಿಸ್‌ ಕೊಟ್ಟರೆ ವಾಪಸ್‌ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಹೊಸಪೇಟೆ: ರೈತರ ಜಮೀನುಗಳಿಗೆ ನೋಟಿಸ್‌ ಕೊಟ್ಟರೆ ವಾಪಸ್‌ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ರೈತರು ಭಯ ಪಡುವ ಪ್ರಶ್ನೆಯೇ ಇಲ್ಲ ಎಂದು ವಕ್ಫ್‌ ಮತ್ತು ವಸತಿ ಸಚಿವ ಜಮೀರ್‌ ಅಹಮದ್ ಖಾನ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಎಲ್ಲರನ್ನೂ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಸುಮ್ಮನೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲೂ ವಕ್ಫ್ ಆಸ್ತಿ ತೆಗೆದುಕೊಂಡವರಿಗೆ ನೂರಾರು ನೋಟಿಸ್ ಕೊಟ್ಟಿದ್ದಾರೆ. ರೈತರಿಗೆ ನೋಟಿಸ್‌ ಕೊಟ್ಟಿದರೆ ವಾಪಸ್‌ ಪಡೆಯಲಾಗುತ್ತದೆ. ನ. 5 ಇಲ್ಲವೇ 6ರಂದು ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ಕರೆದು ಈ ಬಗ್ಗೆ ಮಾತನಾಡುವೆ ಎಂದು ಸ್ಪಷ್ಟಪಡಿಸಿದರು.

ಲವ್ ಜಿಹಾದ್ ರೀತಿ ಲ್ಯಾಂಡ್ ಜಿಹಾದ್ ನಡೀತಿದೆ ಎಂಬ ಸಿ.ಟಿ. ರವಿ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಸಿ.ಟಿ. ರವಿ ರಾಜಕಾರಣ ಮಾಡಲು ಹೇಳಿಕೆ ಕೊಡುತ್ತಿದ್ದಾರೆ. ಸಿ.ಟಿ. ರವಿ ಅವರೇ ಸಚಿವರಾಗಿದ್ದಾಗ ನೋಟಿಸ್‌ ಕೊಡಲಾಗಿದೆ. ಬಿಜೆಪಿ ಸರ್ಕಾರದಲ್ಲೇ ರೈತರಿಗೆ ಸಾವಿರಾರು ನೋಟಿಸ್‌ ಕೊಡಲಾಗಿದೆ. ವಕ್ಫ್ ಆಸ್ತಿಯನ್ನು ಖಬರಸ್ತಾನಕ್ಕೆ, ಸ್ಮಶಾನಕ್ಕೆ ಕೊಡಲು ಅಭ್ಯಂತರ ಇಲ್ಲ ಎಂದರು.

ಹಾವೇರಿಯ ಸವಣೂರಿನ ಕಡಕೋಳದಲ್ಲಿ ಘಟನೆ ನಡೆದಿದೆ. ಇದರಿಂದ ನಮಗೂ ಬೇಸರ ಇದೆ. ಆ ಗ್ರಾಮದ ಜನರು ಎಲ್ಲರೂ ಅಣ್ಣ-ತಮ್ಮಂದಿರಂತೆ ಇದ್ದಾರೆ. ಒದೆ ತಿಂದವರೇ ದೂರು ಕೊಡಲು ಮುಂದೆ ಬರುತ್ತಿಲ್ಲ. ಸರ್ಕಾರ ಪರಿಸ್ಥಿತಿ ನಿಭಾಯಿಸಲಿದೆ ಎಂದರು.

ರೈತರ ಜಮೀನು ಯಾರು ತೆಗೆದುಕೊಳ್ಳಲು ಸಾಧ್ಯ ಇಲ್ಲ. ಸಚಿವರು ಹೇಳಿದಾರೆ ಅಂತ ಅಧಿಕಾರಿಗಳು ಯಾರದೋ‌ ಆಸ್ತಿಯನ್ನು ವಕ್ಫ್‌ಗೆ ತೆಗೆದುಕೊಳ್ಳಲು ಸಾಧ್ಯನಾ? ವಿಜಯಪುರದ ಹಳ್ಳಿಯೊಂದರಲ್ಲಿ 1200 ಎಕರೆ ರೈತರ ಜಮೀನು ವಕ್ಫ್ ಆಸ್ತಿ ಮಾಡಿಕೊಳ್ತಿದ್ದಾರೆ ಎಂದು ಬಿಜೆಪಿಯವರು ಆರೋಪಿಸಿದರು. ಅಲ್ಲಿ ವಕ್ಫ್ ಆಸ್ತಿ ಇರುವುದೇ 11 ಎಕರೆ. ಸುಖಾಸುಮ್ಮನೆ 1200 ಎಕರೆ ಅಂತ ಆರೋಪ ಮಾಡಿದ್ದಾರೆ. ಬಿಜೆಪಿಯವರು ಎಲ್ಲ ಕಡೆ ಜನರನ್ನು ಎತ್ತಿ ಕಟ್ಟುವ ಕೆಲಸ‌ ಮಾಡ್ತಿದ್ದಾರೆ ಎಂದರು.

ಬಿಜೆಪಿ ಸ್ನೇಹಿತರಿಗೆ ಕೈ ಜೋಡಿಸಿ ಮನವಿ ಮಾಡಿಕೊಳ್ಳುವೆ. ರಾಜಕೀಯ ಮಾಡುವಾಗ ರಾಜಕೀಯ ಮಾಡಿ, ಜನಗಳಿಗೆ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ರೈತರು ಯಾವ ಕಾರಣಕ್ಕೂ ಭಯ ಬೀಳಬಾರದು. ಹಾಗೇನಾದ್ರೂ ನೋಟಿಸ್ ಕೊಟ್ಟಿದ್ದರೆ ವಾಪಸ್ ಪಡಿತೀವಿ ಎಂದರು.

ರಾಜ್ಯದಲ್ಲಿ ಶಕ್ತಿ ಯೋಜನೆ ಸ್ಥಗಿತಗೊಳಿಸಲಾಗುವುದಿಲ್ಲ. ಐದು ಗ್ಯಾರಂಟಿಗಳನ್ನು ಮುಂದುವರಿಸಲಾಗುವುದು. ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದ್ದಾರೆ. ಸಚಿವ ಸಂತೋಷ್‌ ಲಾಡ್‌ ಹಾಗೂ ಸಂಸದ ತುಕಾರಾಂ ಉತ್ತಮ ಕೆಲಸ ಮಾಡಿದ್ದಾರೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಬಗ್ಗೆ ಜನರಿಗೆ ಗೊತ್ತಿದೆ. ನಾನೇನು ಅವರ ಹೇಳಿಕೆ ಕುರಿತು ಹೆಚ್ಚಿಗೆ ಹೇಳಬೇಕಿಲ್ಲ ಎಂದರು.

Share this article