ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ । ರಾಮನ ದೇಗುಲದಲ್ಲಿ ವಿಶೇಷ ಪೂಜೆ
ಕನ್ನಡಪ್ರಭ ವಾರ್ತೆ ಹಾಸನರಾಹುಲ್ ಗಾಂಧಿ ರಾಜ್ಯಕ್ಕೆ ಪ್ರಚಾರಕ್ಕಾಗಿ ಬಂದರೆ ಕೇಂದ್ರದಲ್ಲಿ ಎನ್‌ಡಿಎ ನಾಲ್ಕು ನೂರಲ್ಲ, ಐನೂರು ಸ್ಥಾನವನ್ನು ಗೆಲ್ಲುತ್ತದೆ. ಅವರು ಬಂದರೆ ಏನೂ ಬದಲಾವಣೆ ಆಗುವುದಿಲ್ಲ ಎಂದು ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ರಾಜ್ಯದಲ್ಲಿ ರಾಹುಲ್ ಗಾಂಧಿ ಪ್ರವಾಸ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ಅವರು ಬಂದಿದ್ದು ಗೊತ್ತಾಗಲ್ಲ, ಹೋಗಿದ್ದೂ ಗೊತ್ತಾಗಲ್ಲ, ರಾಹುಲ್ ಗಾಂದಿ ಬಂದರೆ ನಾಲ್ಕು ನೂರು ಅಲ್ಲ, ನಾವು ಐನೂರು ಸ್ಥಾನ ಗೆಲ್ತೇವೆ. ನಾವು ಅವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಜನರು ಮೋದಿಯವರು ಮೂರನೇ ಬಾರಿಗೆ ಗೆಲ್ಲಬೇಕು ಎಂದು ಬಯಸಿದ್ದಾರೆ. ಹಾಗಾಗಿ ಅವರ ಸಹಕಾರದೊಂದಿಗೆ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇವೆ‘ ಎಂದು ಹೇಳಿದರು.ಮಂಡ್ಯದಲ್ಲಿ ರಾಹುಲ್ ಗಾಂಧಿ ಪ್ರವಾಸ ವಿಚಾರವಾಗಿ ಮಾತನಾಡಿ, ‘ಅವರು ಬಂದ ಕೂಡಲೇ ಬದಲಾಗುತ್ತೆ ಎನ್ನೋದು ಸುಳ್ಳು. ರಾಹುಲ್ ಗಾಂಧಿ ವರ್ಚಸ್ಸು ದಿನೇ ದಿನೇ ಕಡಿಮೆ ಆಗ್ತಿದೆ. ಅವರ ನಡವಳಿಕೆ, ಯೋಜನೆ, ಯೋಚನೆ ದೇಶಕ್ಕೆ ಪೂರಕವಾಗಿಲ್ಲ. ಜನರು ಎಲ್ಲವನ್ನು ನೋಡುತ್ತಿದ್ದು, ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗಲ್ಲ ಎನ್ನುವ ಪರಿಸ್ಥಿತಿ ಇಲ್ಲ. ರಾಜ್ಯಕ್ಕೆ ಯಾರು ಬೇಕು? ದೇಶಕ್ಕೆ ಯಾರು ಬೇಕು ಎಂದು ಜನರು ಯೋಚನೆ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಈ ರಾಜ್ಯ ಸರ್ಕಾರದ ವಿರುದ್ದ ನಿಲ್ಲುವ ಕಾಲ ಬರುತ್ತದೆ’ ಎಂದು ಭವಿಷ್ಯ ನುಡಿದರು.
‘ಲೋಕಸಭಾ ಚುನಾವಣೆಯಲ್ಲಿ ಹಾಸನದ ವಿವಿಧ ಭಾಗಗಳಲ್ಲಿ ಅದ್ಭುತವಾಗಿ ಪ್ರಚಾರ ನಡೆಯುತ್ತಿದ್ದು, ಹೆಣ್ಣು ಮಕ್ಕಳೇ ಸ್ವಯಂ ಸ್ಫೂರ್ತಿಯಿಂದ ಬಂದು ಪ್ರಚಾರ ಮಾಡುತ್ತಿದ್ದಾರೆ. ಖಂಡಿತಾ ನೂರಕ್ಕೆ ನೂರು ದೇವರು ಫಲ ಕೊಡುವ ವಿಶ್ವಾಸ ಇದೆ. ಕುಮಾರಣ್ಣ ಚನ್ನರಾಯಪಟ್ಟಣದಲ್ಲಿ ರೋಡ್ ಶೋ ಹಾಗೂ ಬೃಹತ್ ಸಬೆ ನಡೆಸುತ್ತಾರೆ. ಕೇಂದ್ರ ಸಚಿವ ನಾರಾಯಣಸ್ವಾಮಿ ಹಾಗೂ ಮಾಜಿ ಸಚಿವ ಮಾಧುಸ್ಚಾಮಿ ಅವರು ನನ್ನೊಟ್ಟಿಗೆ ಪ್ರಚಾರ ನಡೆಸುತ್ತಾರೆ’ ಎಂದು ಹೇಳಿದರು.‘ನರೇಂದ್ರ ಮೋದಿಯವರು ೨೦ ಅಥವಾ ೨೧ಕ್ಕೆ ಚಿಕ್ಕಬಳ್ಳಾಪುರ ಹಾಗೂ ಇತರೆಡೆ ಪ್ರವಾಸ ಮಾಡುತ್ತಾರೆ ಎಂದು ಹೇಳಿದ್ದಾರೆ. ಅವರ ಪ್ರವಾಸ ನೋಡಿಕೊಂಡು ಯಡಿಯೂರಪ್ಪ ಅವರು ನಮ್ಮ ಜಿಲ್ಲೆಯಲ್ಲಿ ಪ್ರಚಾರ ಮಾಡ್ತಾರೆ. ಮೋದಿಯವರ ಪ್ರವಾಸ ಕಾರ್ಯಕ್ರಮವು ಇನ್ನು ಅಂತಿಮ ಆಗಿಲ್ಲ. ಚಿಕ್ಕಬಳ್ಳಾಪುರ, ಅರಸೀಕೆರೆ ತುಮಕೂರು ಸೇರಿ ನಾಲ್ಕು ಸ್ಥಳದಲ್ಲಿ ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚೆ ಆಗುತ್ತಿದೆ’ ಎಂದು ಹೇಳಿದರು.
ಇದಕ್ಕೆ ಮೊದಲು ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಪ್ರಜ್ವಲ್ ರೇವಣ್ಣ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಪ್ರಚಾರಕ್ಕೆ ಬಂದಿದ್ದ ಮಹಿಳೆಯರೊಂದಿಗೆ ಕೆಲ ಸಮಯ ಚರ್ಚಿಸಿದರು.ಜೆಡಿಎಸ್ ಮುಖಂಡರಾದ ಗಿರೀಶ್ ಚನ್ನವೀರಪ್ಪ, ಮಾಧ್ಯಮ ವಕ್ತಾರ ಹೊಂಗೆರೆ ರಘು, ಗಿರೀಶ್, ಪ್ರೇಮಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಾಸನದ ಸೀತಾರಾಮಾಂಜನೇಯ ದೇವಸ್ಥಾನಕ್ಕೆ ತೆರಳಿದ್ದ ಸಂದರ್ಭದಲ್ಲಿ ಎದುರಿಗೆ ಸಿಕ್ಕ ಬಸವಣ್ಣನಿಗೆ ಪ್ರಜ್ವಲ್ ರೇವಣ್ಣ ನಮಸ್ಕರಿಸಿದರು.