ರಾಹುಲ್ ಗಾಂಧಿ ಭಸ್ಮಾಸುರರಾದ್ರೆ ಮೋದಿ ಅವರು ಏನು: ಸಚಿವ ಲಾಡ್ ಪ್ರಶ್ನೆ

KannadaprabhaNewsNetwork |  
Published : Apr 21, 2025, 12:55 AM IST
ಸಂತೋಷ ಲಾಡ್. | Kannada Prabha

ಸಾರಾಂಶ

ಕಳೆದ ಹನ್ನೊಂದು ವರ್ಷದಿಂದ ಈ ದೇಶ ನೆಗೆದು ಬಿದ್ದು ಹೋಗಿದೆಯಲ್ಲ, ಅದಕ್ಕೆ ಕೇಂದ್ರ ಸಚಿವರು ಏನು ಹೇಳುತ್ತಾರೆ. ಹನ್ನೊಂದು ವರ್ಷದಿಂದ ಅಧಿಕಾರದಲ್ಲಿದ್ದಾರಲ್ಲ ದೇಶಕ್ಕಾಗಿ ಏನು ಮಾಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ದಲಿತರ ಮೇಲೆ ಅಟ್ರಾಸಿಟಿ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕುರಿತು ಬಿಜೆಪಿಯವರು ಮಾತನಾಡುವುದಿಲ್ಲ. ಅವರಿಗೆ ಅನುಕೂಲವಾಗುವ ವಿಷಯಗಳ ಕುರಿತಷ್ಟೇ ಅವರು ಮಾತನಾಡುತ್ತಾರೆ.

ಹುಬ್ಬಳ್ಳಿ: ರಾಹುಲ್ ಗಾಂಧಿ ಭಸ್ಮಾಸುರರಾದರೆ ಮೋದಿ ಅವರು ಏನು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಭಸ್ಮಾಸುರ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ಕಿಡಿಕಾರಿದರು.

ರಾಹುಲ್ ಗಾಂಧಿ ಭಾಸ್ಮಾಸುರರಾದರೆ ಪ್ರಧಾನಿ ನರೇಂದ್ರ ಮೋದಿ ಅವರು ಏನಂತೆ ಎಂದು ಖಾರವಾಗೇ ಪ್ರಶ್ನಿಸಿದ ಅವರು, ಕಳೆದ ಹನ್ನೊಂದು ವರ್ಷದಿಂದ ಈ ದೇಶ ನೆಗೆದು ಬಿದ್ದು ಹೋಗಿದೆಯಲ್ಲ, ಅದಕ್ಕೆ ಕೇಂದ್ರ ಸಚಿವರು ಏನು ಹೇಳುತ್ತಾರೆ. ಹನ್ನೊಂದು ವರ್ಷದಿಂದ ಅಧಿಕಾರದಲ್ಲಿದ್ದಾರಲ್ಲ ದೇಶಕ್ಕಾಗಿ ಏನು ಮಾಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ದಲಿತರ ಮೇಲೆ ಅಟ್ರಾಸಿಟಿ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕುರಿತು ಬಿಜೆಪಿಯವರು ಮಾತನಾಡುವುದಿಲ್ಲ. ಅವರಿಗೆ ಅನುಕೂಲವಾಗುವ ವಿಷಯಗಳ ಕುರಿತಷ್ಟೇ ಅವರು ಮಾತನಾಡುತ್ತಾರೆ ಎಂದರು.

ರಾಹುಲ್ ಗಾಂಧಿ ಮಾತು ಕೇಳಿದರೆ ಸಿದ್ದರಾಮಯ್ಯ ನೆಗೆದು ಬಿದ್ದು ಹೋಗುತ್ತಾರೆ ಎಂಬ ಜೋಶಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಆಶೀರ್ವಾದದಿಂದಲೇ ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆಗಿದ್ದಾರೆ ಎಂದರು.

ಜನಿವಾರ ತೆಗೆಸಿದ ಪ್ರಕರಣ, ದೂರು ಕೊಟ್ಟರೆ ಕ್ರಮ: ಸಿಇಟಿ ಪರೀಕ್ಷೆ ವೇಳೆ ಧಾರವಾಡದಲ್ಲಿ ವಿದ್ಯಾರ್ಥಿ ಜನಿವಾರ ತೆಗೆಸಿದ ಪ್ರಕರಣದ ಕುರಿತು ದೂರು ಕೊಟ್ಟಲ್ಲಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.

ಜನಿವಾರ ತೆಗೆಸಿದವರ ಮನಸ್ಥಿತಿ ಸರಿಯಿಲ್ಲ ಎಂದು ಕಿಡಿಕಾರಿದ ಅವರು, ಈ ಕುರಿತು ಲಿಖಿತ ದೂರು ನೀಡಿದರೆ ಕ್ರಮಕೈಗೊಳ್ಳುತ್ತೇವೆ. ಸರ್ಕಾರಿ ನೌಕರರು ಭಾಗಿಯಾಗಿದ್ದರೆ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ. ಖಾಸಗಿ ಸಂಸ್ಥೆಯಲ್ಲಿ ಮಾಡಿದ್ದರೆ ಸಂಸ್ಥೆಗೆ ಮೊದಲು ನೋಟಿಸ್ ನೀಡಬೇಕು ಎಂದರು.

ಸಿಇಟಿ ಪರೀಕ್ಷೆ ಕುರಿತು ಸರ್ಕಾರ ಈಗಾಗಲೇ ಮಾರ್ಗಸೂಚಿ ಹೊರಡಿಸಿದೆ. ಹೀಗಿರುವಾಗ ಮತ್ತೆ ಹೊಸ ಮಾರ್ಗಸೂಚಿ ಅವಶ್ಯವಿಲ್ಲ ಎಂದರು.ಜನಿವಾರ ತೆಗಿಸಿದ ವಿದ್ಯಾರ್ಥಿಗಳಿಗೆ ಸೀಟ್‌ ಒದಗಿಸಲು ಆಗ್ರಹ

ಹುಬ್ಬಳ್ಳಿ: ಸಿಇಟಿ ಪರೀಕ್ಷೆ ನಡೆಯುವ ಮುನ್ನವೇ ಕೆಲವು ಬ್ರಾಹ್ಮಣ ವಿದ್ಯಾರ್ಥಿಗಳ ಧರಿಸಿದ್ದ ಪವಿತ್ರ ಜನಿವಾರವನ್ನೇ ತೆಗೆಸಿದ ಸಿಬ್ಬಂದಿಯನ್ನು ಕೆಲಸದಿಂದಲೇ ವಜಾ ಮಾಡಬೇಕು. ಅಲ್ಲದೇ, ಅವಮಾನಿತ ವಿದ್ಯಾರ್ಥಿಗಳಿಗೆ ಸೂಕ್ತ ಕಾಲೇಜಿನಲ್ಲಿ ಸೀಟ್‌ ಒಂದಗಿಸಬೇಕು ಎಂದು ಇಲ್ಲಿನ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜ ಆಗ್ರಹಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಸಮಾಜದ ಮುಖಂಡರು, ಬ್ರಾಹ್ಮಣ ಸಮಾಜ ಸಂವಿಧಾನ ಬದ್ಧವಾಗಿ ನಡೆದುಕೊಂಡು ಬರುತ್ತಿದ್ದರೂ ಕೆಲ ಕಿಡಿಗೇಡಿಗಳಿಂದ ದೌರ್ಜನ್ಯ, ಅಪಮಾನ, ಲೇವಡಿಗಳು ತಪ್ಪಿಯೇ ಇಲ್ಲ. ಮೇಲಾಗಿ ವಿರೋಧ ವ್ಯಕ್ತಪಡಿಸುತ್ತ ಬಂದಿರುವುದು ಸರ್ವೇಸಾಮಾನ್ಯವಾಗಿದೆ. ತೀರಾ ವೈಯಕ್ತಿಕ ಶ್ರದ್ಧೆ ಎನ್ನುವ ಜನಿವಾರಕ್ಕೂ ಕುತ್ತು ತಂದ ಹೊಲಸು ಮನಸ್ಸುಗಳನ್ನು ಸಮಾಜ ಎಚ್ಚರದಿಂದಲೇ ಗ್ರಹಿಸಬೇಕಿದೆ. ಅಲ್ಲದೇ ಸಮಸ್ತ ಹಿಂದುಗಳು ಇಂಥ ಅಪಮಾನಗಳನ್ನು ಸಹಿಸದೇ ಪ್ರತಿಭಟನೆ ನಡೆಸಬೇಕಿದೆ. ಜನಿವಾರ ಕಿತ್ತು ಹಾಕುವ ವಿಕೃತರ ವಿರುದ್ಧ ಪ್ರತಿಭಟನೆ ಮಾಡಲು ಹುಬ್ಬಳ್ಳಿಯ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜ ಸದಾವಕಾಲ ಬೆಂಬಲ ನೀಡುತ್ತದೆ. ಈಗಾಗಲೇ ಅಂಥವರ ವಿರುದ್ಧ ಕ್ರಮ ತೆಗೆದುಕೊಂಡಿರುವ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಅಲ್ಲದೇ ಇದಲ್ಲದೇ ರಾಜ್ಯದ ಮೂಲೆ ಮೂಲೆಗಳಿಂದ ಇಂಥ ಪ್ರಕರಣಗಳು ತಡವಾಗಿ ಬೆಳಕಿಗೆ ಬರುತ್ತಿವೆ. ಕರ್ನಾಟಕ ಪರೀಕ್ಷಾ ಮಂಡಳಿ ಇದನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ದೊರಕಿಸಬೇಕು ಎಂದು ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜ ಅಧ್ಯಕ್ಷ ಅನಂತ ಪದ್ಮನಾಭ ಐತಾಳ, ಶ್ರೀಕಾಂತ ಕೆಮ್ತೂರು, ಅನಂತರಾಜ ಭಟ್, ವಾದಿರಾಜ ಓಕಡೆ, ಕೃಷ್ಣರಾಜ ಕೆಮ್ತೂರು, ಎನ್. ರಾಮಚಂದ್ರ ಉಪಾಧ್ಯಾಯ, ರಾಘವೇಂದ್ರ ಭಟ್ ಎಡೆನೀರು, ಶ್ರೀಧರ ಅಲೆಯೂರು, ವ್ಯಾಸ ಉಚ್ಚಿಲ ಇತರರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ