ಶೆಟ್ಟರ್ ಗೆದ್ದರೇ ಕೇಂದ್ರ ಸಚಿವರಾಗ್ತಾರೆ

KannadaprabhaNewsNetwork |  
Published : May 01, 2024, 01:19 AM ISTUpdated : May 01, 2024, 01:20 AM IST
ರಾಮದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಪರವಾಗಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಪ್ರಚಾರ ಮಾಡಿದರು | Kannada Prabha

ಸಾರಾಂಶ

ಜಗದೀಶ್ ಶೆಟ್ಟರ್ ಅವರನ್ನು ಗೆಲ್ಲಿಸಿದರೇ ಅವರು ಮೋದಿಯವರ ಜೊತೆಗೆ ಸೇರಿ ಕೇಂದ್ರ ಸಚಿವರಾಗಿ ಬೆಳಗಾವಿಯ ಸಮಗ್ರ ಅಭಿವೃದ್ಧಿ ಮಾಡುತ್ತಾರೆ ಎಂದು ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗಜಗದೀಶ್ ಶೆಟ್ಟರ್ ಅವರನ್ನು ಗೆಲ್ಲಿಸಿದರೇ ಅವರು ಮೋದಿಯವರ ಜೊತೆಗೆ ಸೇರಿ ಕೇಂದ್ರ ಸಚಿವರಾಗಿ ಬೆಳಗಾವಿಯ ಸಮಗ್ರ ಅಭಿವೃದ್ಧಿ ಮಾಡುತ್ತಾರೆ ಎಂದು ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ರಾಮದುರ್ಗ ಮತಕ್ಷೇತ್ರದ ಸುರೇಬಾನದಲ್ಲಿ ಲೋಕಸಭಾ ಚುನಾವಣೆ ಪ್ರಚಾರಾರ್ಥ ಮಂಗಳವಾರ ಜರುಗಿದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ 6 ಬಾರಿ ಶಾಸಕರಾಗಿ ಎಲ್ಲ ಹುದ್ದೆಗಳ ಅನುಭವ ಅವರಿಗಿದೆ. ಕಾಂಗ್ರೆಸ್ ಸರ್ಕಾರ ಪೊಳ್ಳು ಗ್ಯಾರಂಟಿಗಳಿಂದ ಅಧಿಕಾರಕ್ಕೆ ಬಂದಿದೆ.‌ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ.‌ ಅನೇಕ ವಸ್ತುಗಳ ಬೆಲೆ ಏರಿಕೆ ಆಗಿದೆ. ಈ ಮೂಲಕ ಕಾಂಗ್ರೆಸ್ ಸರ್ಕಾರ ಒಂದು ಕೈಯಿಂದ ಕೊಟ್ಟು ಮತ್ತೊಂದು ಕೈಯಿಂದ ಕಸಿದುಕೊಳ್ಳುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ದೂರಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಬ್ಬ ಮನುಷ್ಯ ಮರಣ ಹೊಂದಿದ ನಂತರ ಶೇ.55 ಆಸ್ತಿ ಸರ್ಕಾರದ ಪಾಲಾಗಲಿದೆ. ಹಾಗಾಗಿ ನಾವು ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಅವರ ಗ್ಯಾರಂಟಿಗಳಿಗೆ ನಾವು ಆಸೆ ಪಟ್ಟರೆ ನಿಮ್ಮ ಆಸ್ತಿ ಶೇ.55 ಕಿತ್ತುಕೊಳ್ಳುತ್ತಾರೆ. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಪಕ್ಷ ಜನರಿಗೆ ಸುಳ್ಳು ಭರವಸೆ ನೀಡುತ್ತಿದೆ ಎಂದು ದೂರಿದರು.

ಮಾಜಿ ಸಚಿವ ಶಂಕರ ಪಾಟೀಲ್ ಮುನೆನಕೊಪ್ಪ ಮಾತನಾಡಿ, ನರೇಂದ್ರ ಮೋದಿಯವರನ್ನು 3ನೇ ಸಲ ಪ್ರಧಾನಿ ಮಾಡಬೇಕು ಎಂದು ಎಲ್ಲರೂ ತೀರ್ಮಾನಕ್ಕೆ ಬಂದಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪ್ರಪಂಚದ ಪ್ರತಿಯೊಂದು ಹಳ್ಳಿಯಲ್ಲೂ ಮುಂದಿನ ಪ್ರಧಾನಿ ನರೇಂದ್ರ ಮೋದಿಯವರು ಆಗಬೇಕು ಎಂದು ಜನ ಬಯಸಿದ್ದಾರೆ.‌ ಸೂರ್ಯ ಚಂದ್ರ ಹುಟ್ಟುವುದು ಎಷ್ಟು ಸತ್ಯ ಇದೆ, ಅದೇ ರೀತಿ ನರೇಂದ್ರ ಮೋದಿ ಮೂರನೆ ಸಲ ಪ್ರಧಾನಿ ಆಗುವುದು ಅಷ್ಟೇ ಸತ್ಯ ಇದೆ ಎಂದರು.

ನರೇಂದ್ರ ಮೋದಿ ಪ್ರಧಾನಿಯಾದರೆ ಇಲ್ಲಿಂದ ಜಗದೀಶ್ ಶೆಟ್ಟರ್ ಗೆಲ್ಲಿಸಬೇಕು. ಶೆಟ್ಟರ್ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರು ರಾಜ್ಯಕ್ಕೆ ಅನೇಕ ಕೊಡುಗೆ ಕೊಟ್ಟಿದ್ದಾರೆ. ಬರಗಾಲ ಬಂದಾಗ ಹಾಗೂ ಹೆಚ್ಚು ಮಳೆ ಆದಾಗ ರೈತರ ಖಾತೆಗೆ ನೇರವಾಗಿ ₹25 ಸಾವಿರ ‌ವರ್ಗಾವಣೆ ಮಾಡಿದ ಕೀರ್ತಿ ಜಗದೀಶ್ ಶೆಟ್ಟರ್ ಹಾಗೂ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ರಾಜ್ಯದಲ್ಲಿ ಬರಗಾಲ ಬಂದರೂ ರೈತರಿಗೆ ಪರಿಹಾರ ನೀಡಲು ಈಗಿನ ಕಾಂಗ್ರೆಸ್ ಸರ್ಕಾರಕ್ಕೆ ಆಗುತ್ತಿಲ್ಲ. ಹಾಗಾಗಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಬೇಕು‌ ಎಂದು ಆಗ್ರಹಿಸಿದರು.

ಈ ವೇಳೆ ವಿಧಾನಪರಿಷತ್ ಮಾಜಿ ಸದಸ್ಯರಾದ ಎಂ.ಡಿ.ಲಕ್ಷ್ಮೀನಾರಾಯಣ, ಮಹಾಂತೇಶ ಕವಟಗಿಮಠ, ಮಾಜಿ ಶಾಸಕರಾದ ಮಹಾದೇವಪ್ಪ ಯಾದವಾಡ, ರಾಜ್ಯ ನೇಕಾರ ಪ್ರಕೋಷ್ಠ ಸಂಚಾಲಕ ಬಿ.ಎಸ್.ಸೋಮಶೇಖರ್, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಂಡಲ ಅಧ್ಯಕ್ಷ ರಾಜೇಶ ಬೀಳಗಿ, ಪ್ರಮುಖರಾದ ರಮೇಶ ದೇಶಪಾಂಡೆ, ರೇಣಪ್ಪ ಸೋಮಗೊಂಡ, ಪಿ.ಎಫ್. ಪಾಟೀಲ ಹಾಗೂ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ