ಬಿಡಾಡಿ ದನಗಳ ರಸ್ತೆಗೆ ಬಿಟ್ಟರೆ ಕ್ರಿಮಿನಲ್ ಕೇಸ್: ಡಿಸಿ

KannadaprabhaNewsNetwork |  
Published : Sep 11, 2024, 01:02 AM IST
ಪಟ್ಟಣ ಎ.ಪಿ.ಎಂ.ಸಿ ಸಭಾಂಗಣದಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ | Kannada Prabha

ಸಾರಾಂಶ

ಚನ್ನಗಿರಿ ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಎಲ್ಲ ರೀತಿಯ ವಾಹನ ಸವಾರರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಕೂಡಲೇ ಪುರಸಭೆ ಅಧಿಕಾರಿಗಳು ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ. ದನಗಳನ್ನು ರಸ್ತೆಗೆ ಬಿಡುವುದನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಚನ್ನಗಿರಿಯಲ್ಲಿ ಸೂಚಿಸಿದ್ದಾರೆ.

- ಚನ್ನಗಿರಿ ಎಪಿಎಂಸಿ ಸಭಾಂಗಣದಲ್ಲಿ ತಾಲೂಕು- ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಎಲ್ಲ ರೀತಿಯ ವಾಹನ ಸವಾರರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಕೂಡಲೇ ಪುರಸಭೆ ಅಧಿಕಾರಿಗಳು ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ. ದನಗಳನ್ನು ರಸ್ತೆಗೆ ಬಿಡುವುದನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಸೂಚಿಸಿದರು.

ಮಂಗಳವಾರ ಪಟ್ಟಣದ ಎ.ಪಿ.ಎಂ.ಸಿ. ಸಭಾಂಗಣದಲ್ಲಿ ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯಲ್ಲಿಯೇ ಚನ್ನಗಿರಿ ದೊಡ್ಡ ತಾಲೂಕು ಆಗಿದೆ. ಪ್ರತಿದಿನ ಸಾವಿರಾರು ಜನ ಕಚೇರಿಗಳ ಕೆಲಸಕ್ಕೆ ಪಟ್ಟಣಕ್ಕೆ ಬರುತ್ತಾರೆ. ಇಲ್ಲಿನ ಎಲ್ಲ ಕಚೇರಿಗಳ ಮುಖ್ಯ ರಸ್ತೆಯ ಬದಿಯಲ್ಲಿ ಮತ್ತು ನೃಪತುಂಗ ರಸ್ತೆಯಲ್ಲಿ ಬಿಡಾಡಿ ದನಗಳು ಓಡಾಡುತ್ತಿವೆ. ಇದರಿಂದ ವಾಹನಗಳ ಸವಾರರು ಅನೇಕ ಅಪಘಾತಗಳಿಗೆ ಈಡಾಗುತ್ತಿದ್ದಾರೆ. ಆದ್ದರಿಂದ ಕೂಡಲೇ ಬಿಡಾಡಿ ದನಗಳ ಮಾಲೀಕರನ್ನು ಶೀಘ್ರ ಪತ್ತೆ ಹಚ್ಚಬೇಕು. ಈ ಬಗ್ಗೆ ನಿರ್ಲಕ್ಷಿಸುವ ದನಗಳ ಮಾಲೀಕರ ವಿರುದ್ಧ ಮುಲಾಜಿಲ್ಲದೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ಆದೇಶಿಸಿದರು.

ಚನ್ನಗಿರಿ ತಾಲೂಕಿನಲ್ಲಿ ಅಡಕೆ ಬೆಳೆಗಾರ ರೈತರು ಹೆಚ್ಚಾಗಿ ಇದ್ದಾರೆ. ಪ್ರಸ್ತುತ ಅಡಕೆ ಬೆಳೆ ಕಟಾವಿನ ಸಮಯವಾಗಿದ್ದು, ರೈತರು ಅಡಕೆ ಸಿಪ್ಪೆಯನ್ನು ರಸ್ತೆಯಲ್ಲಿ ಹಾಕಬಾರದು. ಈ ಸಿಪ್ಪೆಯಿಂದ ಕಾಂಪೊಸ್ಟ್ ಗೊಬ್ಬರ ತಯಾರಿಸಬಹುದು. ಇದಕ್ಕಾಗಿ ಸರ್ಕಾರದಿಂದ ಸಹಾಯಧನವೂ ಸಿಗಲಿದೆ. ಅದನ್ನು ಬಳಸಿ, ತೋಟಗಳಿಗೆ ಬೇಕಾದ ಗೊಬ್ಬರ ತಯಾರು ಮಾಡಿಕೊಳ್ಳಿ ಎಂದು ಸಲಹೆ ಮಾಡಿದರು.

ಚನ್ನಗಿರಿ ಪಟ್ಟಣದಿಂದ ಶಿವಮೊಗ್ಗದವರೆಗೆ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆ ಕಾಮಗಾರಿ ಕೆಲಸ ಪ್ರಗತಿಯಲ್ಲಿದೆ. ಮುಂದಿನ ಒಂದೂವರೆ ತಿಂಗಳೊಳಗೆ ಈ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರ ಬಳಕೆಗೆ ನೀಡಲಾಗುವುದು ಎಂದರು.

ಸಭೆಯಲ್ಲಿ ತಹಸೀಲ್ದಾರ್ ರುಕ್ಮಿಣಿಬಾಯಿ, ಪುರಸಭೆಯ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ, ಪಿಡಬ್ಲ್ಯೂಡಿ ಅಭಿಯಂತರ ರವಿಕುಮಾರ್, ಜಿಲ್ಲಾ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್, ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ ಮೊದಲಾದವರು ಹಾಜರಿದ್ದರು.

- - -

ಕೋಟ್‌ ರೈತರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ. ನಾನು ಸಹಾ ರೈತನ ಮಗನಾಗಿದ್ದು, ನಮ್ಮಿಂದ ಇನ್ನೊಬ್ಬರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ

- ಜಿ.ಎಂ.ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ

- - - -10ಕೆಸಿಎನ್‌ಜಿ1:

ಚನ್ನಗಿರಿ ಪಟ್ಟಣ ಎಪಿಎಂಸಿ ಸಭಾಂಗಣದಲ್ಲಿ ನಡೆದ ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ