ಬಿಪಿಎಲ್ ಕಾರ್ಡ್ ರದ್ದಾದರೆ ಬಡವರು ಉಪವಾಸ ಇರಬೇಕಾಸ

KannadaprabhaNewsNetwork | Published : Nov 23, 2024 12:31 AM

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ರಾಷ್ಟ್ರಭಕ್ತ ಬಳಗದ ಸಂಚಾಲಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿದರು.

ಕನ್ನಡಪಪ್ರಭ ವಾರ್ತೆ ಶಿವಮೊಗ್ಗ

ಬಿಪಿಎಲ್ ‌ಕಾರ್ಡ್ ನಚ್ಚಿಕೊಂಡು‌ ಲಕ್ಷಾಂತರ ಬಡ ಕುಟುಂಬ ಬದುಕುತ್ತಿವೆ. ಈಗ ಬಿಪಿಎಲ್ ಕಾರ್ಡ್ ರದ್ದಾದರೆ ಬಡವರು ಉಪವಾಸ ಇರಬೇಕಾ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಪಿಎಲ್ ಕಾರ್ಡ್‌ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಗೊಂದಲ ಹುಟ್ಟಿಸುತ್ತಿದೆ. ಗೊಂದಲ ಪರಿಹಾರ ಮಾಡುವ ನಿಟ್ಟಿನಲ್ಲಿ ವೇಗವಾಗಿ ಕೆಲಸ ಮಾಡಬೇಕಾಗಿದೆ. ಒಬ್ಬೊಬ್ಬ ಸಚಿವರು ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಸಚಿವ ಮುನಿಯಪ್ಪನವರು ವಾರದಲ್ಲಿ ಬಗೆಹರಿಸುವುದಾಗಿ ಹೇಳಿದ್ದಾರೆ. ಬಗೆಹರಿಸದಿದ್ದರೆ ಬಡವರನ್ನು ಸಂಘಟಿಸಿ ರಾಷ್ಟ್ರಭಕ್ತರ ಬಳಗದಿಂದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯ ಸರ್ಕಾರಿ ನೌಕರರು ಹಾಗೂ ಆದಾಯ ತೆರಿಗೆ ಪಾವತಿದಾರರ ಕಾರ್ಡ್ ರದ್ದುಮಾಡಿದರೆ ಬೇಸರವಿಲ್ಲ. ಆದರೆ ಬಡವರ ಕಾರ್ಡ್‌ ರದ್ದು ಸುದ್ದಿಗೆ ಬಂದರೆ ಪರಿಣಾಮ ಸರಿ ಇರುವುದಿಲ್ಲ. ರೇಷನ್ ಕಾರ್ಡ್ ರದ್ದುಮಾಡುವುದರಿಂದ ವೃದ್ಧಾಪ್ಯ ವೇತನ, ರೇಷನ್, ಆಸ್ಪತ್ರೆ ಸೇರಿದಂತೆ ಹಲವು ಸೌಲಭ್ಯಗಳಿಗೆ ತೊಂದರೆಯಾಗಲಿದೆ ಎಂದರು.

ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಕೂಡಲೇ ಗಮನಹರಿಸಬೇಕು. ಜಿಲ್ಲೆಯಲ್ಲಿ 3.80 ಲಕ್ಷ ಬಿಪಿಎಲ್ ಕಾರ್ಡ್‌ಗಳಿದ್ದು, 2 ಸಾವಿರಕ್ಕೂ ಅಧಿಕ ಬಿಪಿಎಲ್ ಕಾರ್ಡ್‌ ಎಪಿಎಲ್‌ಗೆ ಬದಲಾಗಿವೆ. ಕೇಂದ್ರ ಸರ್ಕಾರದ ನೀತಿಯಿಂದ ನಮಗೆ ಸಮಸ್ಯೆ ಆಗಿದೆ ಎಂದು ಕೇಂದ್ರದ ಮೇಲೆ ತಪ್ಪು ಹೊರಿಸುತ್ತಿದ್ದಾರೆ ಎಂದು ದೂರಿದರು.

ಎಂ.ಬಿ.ಪಾಟೀಲ್ ಇಲ್ಲಿ ಏಕೆ ಹೋರಾಟ ಮಾಡ್ತೀರಾ, ದೆಹಲಿಗೆ ಹೋಗಿ, ಮೋದಿ ಎದುರು ಪ್ರತಿಭಟನೆ ಮಾಡಿ ಅಂತಾರೆ. ಕಾಂಗ್ರೆಸ್‌ನವರು ಇಲ್ಲಿಯವರೆಗೆ ಏನು ಮಾಡುತ್ತಿದ್ದರು. ಗ್ಯಾರಂಟಿಗೆ ಹಣ ಬೇಕು ಎಂದರೆ ಶ್ರೀಮಂತರಿಂದ ತುಂಬಿಸಿಕೊಳ್ಳುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಬಡವರಿಂದ ಗ್ಯಾರಂಟಿ ಹಣ ತುಂಬುವ ಪ್ರಯತ್ನ ಕೈ ಬಿಡಿ ಎಂದು ಕುಟುಕಿದರು.

ಮಹಾನಗರ ಪಾಲಿಕೆಯಲ್ಲಿ ಈ ಸ್ವತ್ತು ಮಾಡಿಕೊಡಲು ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂಬ ಆರೋಪವಿದೆ. ಇದು ಕಮಿಷನರ್‌ಗೆ ತಿಳಿದಿದೆಯೋ ಎಂಬುದು ನನಗೆ ಗೊತ್ತಿಲ್ಲ. ಅಧಿಕಾರಿಗಳು ದುಡ್ಡು ಹಂಚಿಕೊಂಡು ಆರಾಮಾಗಿದ್ದಾರೆ. ಆದರೆ ಜನರು ಮಾತ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆಸ್ಪತ್ರೆಯ ಚಿಕಿತ್ಸಾ ದರ ಹೆಚ್ಚಳ ಮಾಡಿದ್ದು, ರಾಜ್ಯ ಸರ್ಕಾರ ದಿವಾಳಿಯಾಗಿದೆ ಎನ್ನುವುದರ ಸೂಚನೆ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕ್ಫ್‌ನ ವಿವಾದಗಳು ಮುಗಿದಂತೆ ಕಾಣುತ್ತಿಲ್ಲ. ಕೇಂದ್ರ ಸರ್ಕಾರ ಜಾರಿಗೆ ತರಲಿರುವ ವಕ್ಫ್ ಕಾಯಿದೆಗೆ ಕಾಂಗ್ರೆಸ್‌ನವರು ಬೆಂಬಲ ಕೊಡುತಿಲ್ಲ, ಮುಸ್ಲಿಂರಿಗೆ ಅನುಕೂಲವಾದರೆ ಅವರಿಗೆ ಹಾಲು ಕುಡಿದಷ್ಟು ಸಂತೋಷವಾಗುತ್ತದೆ. ವಕ್ಫ್ ಎನ್ನುವ ಪದವೇ ಈ ದೇಶದಲ್ಲಿ ಇರಬಾರದು. ಅದನ್ನು ಕಿತ್ತುಹಾಕಬೇಕು. ರೈತರು, ದೇವಸ್ಥಾನ ಮಠ ಮಂದಿರದ ಆಸ್ತಿಗಳು ಉಳಿಯಬೇಕು. ಒಂದು ವೇಳೆ ಕಾಂಗ್ರೆಸ್‌ನವರ ಶಾಲಾ ಕಾಲೇಜುಗಳು ವಕ್ಫ್ ಆಸ್ತಿ ಎಂದಾದರೆ ಅವರು ಬಿಟ್ಟುಕೊಡುತ್ತಾರಾ ಎಂದು ಪ್ರಶ್ನೆ ಮಾಡಿದರು.

ಪಾಲಿಕೆಯಲ್ಲಿ ಇ-ಖಾತೆ ಮಾಡಿಕೊಡಲು ಸಾವಿರಾರು ರು ಲಂಚಕೊಡಬೇಕಾದ ಸ್ಥಿತಿ ಇದೆ. ಅಲ್ಲದೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಹಳೆ ಪೈಪ್‌ನಲ್ಲಿ ನೀರು ಬಿಡುತ್ತಿಲ್ಲ. ಹೊಸ ಪೈಪ್‌ಗಳನ್ನು ಅಳವಡಿಸುವ ಕಾಮಗಾರಿ ಇನ್ನೂ ಮುಗಿಸಿಲ್ಲ. ಇದರಿಂದ ಸಾವಿರಾರು ಮನೆಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ಇದೆಲ್ಲ ನೋಡಿದರೆ ನಗರದ ಪಾಲಿಕೆ ಇದೆಯೇ ಎಂದು ಪ್ರಶ್ನೆ ಮೂಡಿದೆ. ಈ ಎಲ್ಲಾ ಸಮಸ್ಯೆಗಳನ್ನು ಪಾಲಿಕೆ ಬಗೆಹರಿಸದಿದ್ದರೆ ಮುಂದಿನ ಸೋಮವಾರದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಈ.ವಿಶ್ವಾಸ್, ಮಹಾಲಿಂಗಯ್ಯ ಶಾಸ್ತ್ರಿ, ರುದ್ರಯ್ಯ ಶಾಸ್ತ್ರಿ, ಮೋಹನ್‌ಜಾಧವ್, ಸತ್ಯನಾರಾಯಣ್, ಬಾಲು, ಸಾಕ್ರಾನಾಯ್ಕ, ಅ.ಮಾ.ಪ್ರಕಾಶ್ ಇದ್ದರು.

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪ್ರಕರಣ ದಾಖಲಿಸಿ

ನಾನು ಕಾಂಗ್ರೆಸ್‌ನವರಿಗೆ ಕೊಲ್ಲಿ ಎಂದಿರಲಿಲ್ಲ. ಕೊಲ್ಲುವ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಕೆ ಕೊಟ್ಟಿದ್ದೆ. ಅದಕ್ಕೆ ನನ್ನ ಮೇಲೆ ಎಫ್‌ಐಆರ್ ಹಾಕಿದರು. ಅದು ಜಾಮೀನು ರಹಿತ ಪ್ರಕರಣ ಹಾಕಿದ್ದಾರೆ. ಆದರೆ, ಮಲ್ಲಿಕಾರ್ಜುನ ಖರ್ಗೆಯವರು ಆರ್‌ಎಸ್‌ಎಸ್‌ನನ್ನು ಕೊಲ್ಲಿ ಎಂದು ನೇರವಾಗಿ ಹೇಳಿದ್ದಾರೆ. ಆದರೂ ಅವರ ವಿರುದ್ಧ ಇನ್ನೂ ಎಫ್‌ಐಆರ್ ಹಾಕಿಲ್ಲ. ಈ ರಾಜ್ಯದಲ್ಲಿ ಹಿಂದುಪರರಿಗೊಂದು, ಮುಸ್ಲಿಂ ಪರ ಮಾತನಾಡುವವರಿಗೊಂದು ಕಾನೂನು ಇದೆಯೇ? ನಾನು ಹೇಳಿದ್ದು ತಪ್ಪು ಎಂದು ಪ್ರಕರಣ ಹಾಕಿದ ಹಾಗೆ ಅವರ ವಿರುದ್ಧವೂ ಪ್ರಕರಣ ದಾಖಲಿಸಿ ಎಂದು ಕಿಡಿಕಾರಿದರು.

1500 ಜನರಿಂದ ಆಯೋಧ್ಯೆ, ಕಾಶಿ ಯಾತ್ರೆ

ಆಯೋಧ್ಯೆ ಮತ್ತು ಕಾಶಿಗೆ ನ.23ರಂದು ಬೆಳಗ್ಗೆ 6.15ಕ್ಕೆ ಶಿವಮೊಗ್ಗ ರೈಲು ನಿಲ್ದಾಣದಿಂದ ರಾಷ್ಟ್ರಭಕ್ತರ ಬಳಗದ ಸಹಯೋಗದಲ್ಲಿ 1500 ಯಾತ್ರಾತ್ರಿಗಳು ವಿಶೇಷ ರೈಲಿನಲ್ಲಿ ತೆರಳಲಿದ್ದು, ಬೆಕ್ಕಿನ ಕಲ್ಮಠದ ಮುರುಘರಾಜೇಂದ್ರ ಶ್ರೀಗಳು, ಬಸವಕೇಂದ್ರ ಶ್ರೀಗಳು, ಆದಿಚುಂಚನಗಿರಿ ಮಠದ ಸಾಯಿನಾಥ ಶ್ರೀಗಳು, ಹಸಿರು ನಿಶಾನೆ ತೋರಿಸಲಿದ್ದಾರೆ. ಯಾತ್ರಾರ್ಥಿಗಳು 5.30ಕ್ಕೆ ಸರಿಯಾಗಿ ರೈಲು ನಿಲ್ದಾಣದಲ್ಲಿ ಇರಬೇಕು ಎಂದು ತಿಳಿಸಿದರು.

Share this article