ಸಿಎಂ ಬದಲಾಗೋದಾದ್ರೆ ಖರ್ಗೆಗೆ ಆ ಸ್ಥಾನ ಮೀಸಲಿಡಲಿ

KannadaprabhaNewsNetwork |  
Published : May 03, 2026, 01:15 AM IST
ಚಿತ್ರದುರ್ಗ  ಎರಡನೇ ಪುಟದ ಲೀಡ್   | Kannada Prabha

ಸಾರಾಂಶ

ಪತ್ರಿಕಾಗೋಷ್ಠಿಯಲ್ಲಿ ದಲಿತ ಛಲವಾದಿ ಮಹಾಸಭಾ ಕರ್ನಾಟಕ ರಾಜ್ಯಾಧ್ಯಕ್ಷ ಎಚ್.ಕೆ.ಬಸವರಾಜ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಕೂಗು ಕೇಳಿ ಬಂದಿದ್ದು ಹಾಗೊಂದು ವೇಳೆ ಬದಲಾವಣೆಯಾಗುವುದಾದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ದಲಿತ ಛಲವಾದಿ ಮಹಾಸಭಾ ಕರ್ನಾಟಕದ ರಾಜ್ಯಾಧ್ಯಕ್ಷ ಎಚ್.ಕೆ.ಬಸವರಾಜ್ ಒತ್ತಾಯಿಸಿದರು.

ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 60 ವರ್ಷಗಳಿಂದಲೂ ಮಲ್ಲಿಕಾರ್ಜುನ ಖರ್ಗೆರವರು ಕಾಂಗ್ರೆಸ್‌ಗೆ ನಿಷ್ಟೆ, ಪ್ರಾಮಾಣಿಕತೆಯಿಂದಿದ್ದಾರೆ. ಇವರಿಗಿಂತಲೂ ಅನುಭವಿ ರಾಜಕಾರಣಿ ಕಾಂಗ್ರೆಸ್ ಪಕ್ಷಕ್ಕೆ ಬೇರೆ ಯಾರು ಸಿಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುವುದಾದರೆ ನನಗೂ ಸಂತೋಷ ಎಂದು ಹೇಳಿದ್ದಾರೆ. ಇಂತಹ ಅವಕಾಶ ಮತ್ತೆ ಸಿಗುವುದಿಲ್ಲ. ಹಿಂದೆ ಮುಂದೆ ನೋಡದೆ ಅವಕಾಶ ಬಳಸಿಕೊಂಡು ಧೈರ್ಯದಿಂದ ಹೊರಬನ್ನಿ, ಇಲ್ಲವಾದಲ್ಲಿ ದಲಿತರ ಶಾಪಕ್ಕೆ ಗುರಿಯಾಗುತ್ತೀರ ಎಂದರು.

ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್ ರಾಜ್ಯದಲ್ಲಿ ಎರಡು ಸಲ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾಗಿದ್ದಾರೆ. ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ಲೋಕೋಪಯೋಗಿ ಸಚಿವ ಸತೀಶ್‌ಜಾರಕಿಹೊಳಿ ಇವರ ಪೈಕಿ ಯಾರನ್ನಾದರೂ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲಿ ಎಂದರು.

ಮಲ್ಲಿಕಾರ್ಜುನ ಖರ್ಗೆರವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟರೆ ಎಲ್ಲರೂ ಒಪ್ಪುತ್ತಾರೆ. ಕಾಂಗ್ರೆಸ್‌ನಲ್ಲಿ ಖರ್ಗೆರವರಿಗೆ ಉತ್ತುಂಗ ಸ್ಥಾನ ಕೊಟ್ಟಿರಬಹುದು. ಆದರೆ ಸಂವಿಧಾನಾತ್ಮಕವಾಗಿ ನಿರ್ಣಾಯಕ ಸ್ಥಾನಮಾನಗಳನ್ನು ನೀಡಿದಾಗ ಮಾತ್ರ ಛಲವಾದಿ ಜನಾಂಗಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಿದಂತಾಗುತ್ತದೆ. ಒಂದು ವೇಳೆ ಮಲ್ಲಿಕಾರ್ಜುನ ಖರ್ಗೆರವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡದಿದ್ದರೆ ಶೀಘ್ರದಲ್ಲಿಯೇ ಚಿತ್ರದುರ್ಗ ಇಲ್ಲವೇ ದಾವಣಗೆಯಲ್ಲಿ ಐದು ಲಕ್ಷಕ್ಕಿಂತ ಹೆಚ್ಚು ದಲಿತ ಸಮುದಾಯವನ್ನು ಸೇರಿಸಿ ಸಮಾವೇಶದ ಮೂಲಕ ನಮ್ಮ ಕೂಗನ್ನು ಕಾಂಗ್ರೆಸ್ ನಾಯಕರುಗಳಿಗೆ ಮುಟ್ಟಿಸುವುದರ ಜೊತೆಗೆ ಕಾಂಗ್ರೆಸ್ ಮೇಲಿಟ್ಟಿರುವ ನಿಷ್ಠೆಯನ್ನು ತೊರೆಯಬೇಕಾಗುತ್ತದೆಂದು ಎಚ್ಚರಿಸಿದರು.

ಛಲವಾದಿ ಸಮಾಜದ ಜಿಲ್ಲಾಧ್ಯಕ್ಷ ಎಚ್.ಸಿ.ನಿರಂಜನಮೂರ್ತಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆಯಂತಹ ಸಮರ್ಥ ನಾಯಕರು ಮುಂದಿನ ಮುಖ್ಯಮಂತ್ರಿಯಾಗಲು ಸಿಗಲಿಕ್ಕಿಲ್ಲ. ಮುಖ್ಯಮಂತ್ರಿ ಬದಲಾವಣೆ ಆಗುವಾಗಲೆಲ್ಲ ಕರ್ನಾಟಕದಲ್ಲ ದಲಿತರಾಗಬೇಕೆಂಬ ಕೂಗು ಕೇಳಿಸುತ್ತಿದೆ. ಹಾಗಾಗಿ ಈ ಬಾರಿ ದಲಿತರ ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ನಿರ್ಣಯ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮುಖಂಡರಾದ ಎಚ್.ಅಣ್ಣಪ್ಪಸ್ವಾಮಿ, ದಯಾನಂದ್, ಎಸ್.ಎನ್.ರವಿಕುಮಾರ್, ಶಿವಪ್ರಸಾದ್ ಎಸ್. ಜಯರಾಂ ಕೆ, ಚಂದ್ರಪ್ಪ, ಪ್ರದೀಪ್‌ಕುಮಾರ್, ನವೀನ್‌ಕುಮಾರ್ ಎಂ, ರಂಸ್ವಾಮಿ ಚಿಕ್ಕಪುರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್ ಸಮಸ್ಯೆ ಮುಂದುವರಿದರೆ ಬೃಹತ್‌ ಪ್ರತಿಭಟನೆ
ಸಾಮಾಜಿಕ ಕ್ರಾಂತಿಗೆ ಚಾಲನೆ ನೀಡಿದ ಬಸವಣ್ಣ: ಮಾರನಗೆರೆ ಸಂಗಮೇಶ್