ಸೇನೆ ಬಗ್ಗೆ ಕಾಂಗ್ರೆಸ್‌ ಇಲ್ಲಸಲ್ಲದ ಹೇಳಿಕೆ ನೀಡಿದರೆ ಹೋರಾಟ

KannadaprabhaNewsNetwork | Published : Feb 19, 2025 12:45 AM

ಸಾರಾಂಶ

ಭಾರತೀಯ ಸೇನಾ ಬಲದ ಬಗ್ಗೆ ತಮ್ಮ ರಾಜಕೀಯ, ಬಾಯಿ ಚಪಲಕ್ಕೆ ಇಲ್ಲಸಲ್ಲದ ಹೇಳಿಕೆ ನೀಡುವುದನ್ನು ಕಾಂಗ್ರೆಸ್ ಮುಖಂಡರು ನಿಲ್ಲಿಸಬೇಕು. ಇಲ್ಲದಿದ್ದರೆ ಅಂತಹ ಮುಖಂಡರ ಮನೆ ಮುಂದೆ ತೀವ್ರ ಸ್ವರೂಪ ಹೋರಾಟ ನಡೆಸುವುದಾಗಿ ಬಿಜೆಪಿ ಯುವ ಮುಖಂಡ, ಪಾಲಿಕೆ ಮಾಜಿ ಮೇಯರ್ ಎಸ್.ಟಿ.ವೀರೇಶ ಎಚ್ಚರಿಸಿದ್ದಾರೆ.

- ಪುಲ್ವಾಮಾ ದಾಳಿ ಬಿಜೆಪಿ ಷಡ್ಯಂತ್ರವೆಂಬ ದಿನೇಶ ಶೆಟ್ಟಿ ಹೇಳಿಕೆ ಖಂಡನೀಯ: ಎಸ್.ಟಿ.ವೀರೇಶ ಕಿಡಿ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಭಾರತೀಯ ಸೇನಾ ಬಲದ ಬಗ್ಗೆ ತಮ್ಮ ರಾಜಕೀಯ, ಬಾಯಿ ಚಪಲಕ್ಕೆ ಇಲ್ಲಸಲ್ಲದ ಹೇಳಿಕೆ ನೀಡುವುದನ್ನು ಕಾಂಗ್ರೆಸ್ ಮುಖಂಡರು ನಿಲ್ಲಿಸಬೇಕು. ಇಲ್ಲದಿದ್ದರೆ ಅಂತಹ ಮುಖಂಡರ ಮನೆ ಮುಂದೆ ತೀವ್ರ ಸ್ವರೂಪ ಹೋರಾಟ ನಡೆಸುವುದಾಗಿ ಬಿಜೆಪಿ ಯುವ ಮುಖಂಡ, ಪಾಲಿಕೆ ಮಾಜಿ ಮೇಯರ್ ಎಸ್.ಟಿ.ವೀರೇಶ ಎಚ್ಚರಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಫೆ.14ರಂದು ಸಂಜೆ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಪುಲ್ವಾಮಾ ಹುತಾತ್ಮ ಯೋಧರ ಸ್ಮರಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕೆಲ ಮುಖಂಡರು ಪುಲ್ವಾಮಾ ದಾಳಿ ಸಹ ಬಿಜೆಪಿ ಷಡ್ಯಂತ್ರವೆಂಬ ಹೇಳಿಕೆ ನೀಡಿದ್ದು ಖಂಡನೀಯ ಎಂದರು.

ಪುಲ್ವಾಮಾದಲ್ಲಿ 2019ರ ಫೆ.14ರಂದು ಭಾರತೀಯ ಸೈನಿಕರ ಘೋರ ಹತ್ಯೆಯಾಗಿತ್ತು. ಇದರ ಹಿಂದೆ ಪಾಕಿಸ್ತಾನದ ಕೈವಾಡ ಇರುವುದು ಜಗಜ್ಜಾಹಿರವಾಗಿದೆ. ಆದರೆ, ಕಾಂಗ್ರೆಸ್ಸಿನ ಕೆಲ ಮುಖಂಡರು ತಮ್ಮ ಬಾಯಿ ಚಪಲ, ರಾಜಕೀಯಕ್ಕಾಗಿ ಬಿಜೆಪಿ ವಿರುದ್ಧ ಮಿಥ್ಯಾರೋಪ ಮಾಡುತ್ತಿದ್ದಾರೆ. ಇನ್ನು ಮುಂದೆ ಭಾರತೀಯ ಸೇನೆಗಳು, ಸೈನಿಕರ ಬಗ್ಗೆ ಹೇಳಿಕೆ ನೀಡುವ ಮುನ್ನ ಮೈಮೇಲೆ ಜಾಗ್ರತೆ ಇರಲಿ ಎಂದು ತಾಕೀತು ಮಾಡಿದರು.

ಇಡೀ ದೇಶ‍ವೇ ಫೆ.14 ಅನ್ನು ಹುತಾತ್ಮ ಸೈನಿಕರ ದಿನವಾಗಿ ಆಚರಿಸುತ್ತದೆ. ಅಂತಹ ದಿನ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿ, ಸೇನೆ, ಯೋಧರ ಬಲಿದಾನ, ಸೇವೆ ಬಗ್ಗೆ ಮಾತನಾಡಬೇಕು. ಇದರ ಬದಲಿಗೆ ದಿನೇಶ ಕೆ. ಶೆಟ್ಟಿ, ಅದು ಬಿಜೆಪಿ ಷಡ್ಯಂತ್ರವೆಂಬ ಹೇಳಿಕೆ ನೀಡಿದ್ದು ಸರಿಯಲ್ಲ. ದಿನೇಶ ಶೆಟ್ಟಿ ಸೇರಿದಂತೆ ಯಾರೇ ಆಗಿರಲಿ ಭಾರತೀಯ ಸೇನೆ, ಭಾರತೀಯ ಯೋಧರ ಬಗ್ಗೆ ಹಗುರ ಮಾತುಗಳನ್ನಾಡಿದರೆ ಇನ್ನು ಸಹಿಸುವುದಿಲ್ಲ ಎಂದರು.

ಕಾಂಗ್ರೆಸ್ ಆಳ್ವಿಕೆಯಲ್ಲಿ ಕೇರಳ ಸೇರಿದಂತೆ ಬಹುತೇಕ ಕಡೆ ಸ್ಫೋಟ, ಸರಣಿ ಸಾವು ಸಂಭವಿಸುತ್ತಿದ್ದವು. ಎಲ್ಲಿ ಬಾಂಬ್ ಬೀಳುತ್ತದೋ, ಎಲ್ಲಿ ಸ್ಫೋಟವಾಗುತ್ತದೋ ಎಂಬ ಆತಂಕ ಮನೆ ಮಾಡಿರುತ್ತಿತ್ತು. ಅದರಲ್ಲೂ ಕಾಶ್ಮೀರದಲ್ಲಂತೂ ನಿತ್ಯ ನರಮೇಧವೇ ಆಗುತ್ತಿತ್ತು. ಆಗ ಇದೇ ಕಾಂಗ್ರೆಸ್ಸಿಗರು ಏನು ಮಾಡುತ್ತಿದ್ದರು? ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಾಂಬ್ ದಾಳಿ, ಸರಣಿ ಸ್ಫೋಟ, ಭಯೋತ್ಪಾದಕರ ದಾಳಿಗಳು ಶೇ.99 ಕಡಿಮೆಯಾಗಿವೆ ಎಂದರು.

ಪಕ್ಷದ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಂದ ರಾಜಕೀಯ ನೆಲೆ ಕಂಡ ಸಿದ್ದರಾಮಯ್ಯ ಅದೇ ಗೌಡರನ್ನು ಅಣಕಿಸುವಂತೆ ಮಾತನಾಡುತ್ತಿದ್ದಾರೆ. ನೀವು ದೈಹಿಕವಾಗಿ ಕುಗ್ಗಿದ್ದರೂ ಮಾನಸಿಕವಾಗಿ ಬಲವಾಗಿದ್ದೀರಿ ಎನ್ನುವ ಮೂಲಕ ದೇವೇಗೌಡರ ವ್ಯಕ್ತಿತ್ವವನ್ನೇ ಕೆಣಕಿ, ಚಿಯರ್‌ ಗರ್ಲ್‌ಗೆ ಹೋಲಿಸಿರುವುದು ಸಹ ಸಿಎಂ ಆಗಿರುವ ಸಿದ್ದರಾಮಯ್ಯ. ಅವರಿಗೆ ಇಂತಹ ಮಾತು ಶೋಭೆ ತರದು ಎಂದು ಟೀಕಿಸಿದರು.

ಮುಖಂಡರಾದ ಪಾಲಿಕೆ ಸದಸ್ಯ ಕೆ.ಎಂ.ವೀರೇಶ ಪೈಲ್ವಾನ, ಜಿ.ವಿ.ಗಂಗಾಧರ, ರಮೇಶ ನಾಯ್ಕ, ಟಿಂಕರ್ ಮಂಜಣ್ಣ, ಪೋತಲ ಶ್ರೀನಿವಾಸ, ನಾಗರಾಜ ಸುರ್ವೇ ಇತರರು ಇದ್ದರು.

- - -

ಕೋಟ್‌ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲೆಂದರಲ್ಲಿ ಸೈನಿಕರ ಹತ್ಯೆಯಾಗುತ್ತಿತ್ತು. ಪಾಕ್ ಸೈನಿಕರು ನಮ್ಮ ಸೈನಿಕರ ರುಂಡಗಳನ್ನೇ ಬೇರ್ಪಡಿಸಿ, ಅವುಗಳನ್ನೇ ಪುಟ್‌ಬಾಲ್‌ನಂತೆ ಕಾಲಲ್ಲಿ ಆಡಿದ ವೀಡಿಯೋ ಕಳಿಸಿದ್ದ ನಿದರ್ಶನಗ‍‍ಳಿವೆ. ಆದರೆ, ನರೇಂದ್ರ ಮೋದಿ ಆಡಳಿತದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಯಿತು. ಅದಕ್ಕೂ ಕಾಂಗ್ರೆಸ್ಸಿಗರು ಸಾಕ್ಷಿ ಕೇಳುವಮಟ್ಟಕ್ಕೆ ತಮ್ಮ ಸಣ್ಣತನ, ಬೌದ್ಧಿಕ ದಿವಾಳಿತನ ಪ್ರದರ್ಶಿಸಿದರು. ಇದು ಕಾಂಗ್ರೆಸ್ಸಿಗರ ಮನಸ್ಥಿತಿಗೆ ಸಾಕ್ಷಿ

- ಎಸ್.ಟಿ.ವೀರೇಶ, ಬಿಜೆಪಿ ಮುಖಂಡ, ಮಾಜಿ ಮೇಯರ್

- - - -17ಕೆಡಿವಿಜಿ7.ಜೆಪಿಜಿ:

ದಾವಣಗೆರೆಯಲ್ಲಿ ಮಾಜಿ ಮೇಯರ್, ಬಿಜೆಪಿ ಮುಖಂಡರಾದ ಎಸ್.ಟಿ.ವೀರೇಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿ.ಎಂ.ಸತೀಶ ಕೊಳೇನಹಳ್ಳಿ, ಕೆ.ಎಂ.ವೀರೇಶ ಪೈಲ್ವಾನ, ಜಿ.ವಿ.ಗಂಗಾಧರ ಇತರರಿದ್ದರು.

Share this article