ಕನ್ನಡಪ್ರಭ ವಾರ್ತೆ ಹಾನಗಲ್ಲ
ನಮಗೆ ನಾವೇ ಅಂಗೀಕರಿಸಿದ ಸಂವಿಧಾನವನ್ನು ಪೂಜ್ಯತೆಯಿಂದ ಕಾಣುವ ಜೊತೆಗೆ ಸಮಾನತೆಗಾಗಿ ಆಚರಿಸಿ ಅಳವಡಿಸಿಕೊಳ್ಳುವ ಇಚ್ಛಾಶಕ್ತಿ ನಮ್ಮದಾದರೆ ಸಂವಿಧಾನದ ಆಶಯಕ್ಕೆ ದೊಡ್ಡ ಗೌರವ ಸಿಕ್ಕಂತಾಗುತ್ತದೆ ಎಂದು ಹಾನಗಲ್ಲ ಪೊಲೀಸ್ ವೃತ್ತ ನಿರೀಕ್ಷಕ ಎಸ್.ಆರ್. ಶ್ರೀಧರ ನುಡಿದರು.ಭಾನುವಾರ ಹಾನಗಲ್ಲಿನ ಹ್ಯುಮ್ಯಾನಿಟಿ ಫೌಂಡೇಶನ್‌ನ ಪರಿವರ್ತನಾ ಕಲಿಕಾ ಕೇಂದ್ರ ಆಯೋಜಿಸಿದ ಭಾರತದ ಸಂವಿಧಾನ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಸರ್ವ ಜನಾಂಗ, ಬಹುಭಾಷೆ ಸಂಸ್ಕೃತಿಯಿಂದ ಕೂಡಿದ ಒಂದೇ ರಾಷ್ಟ್ರ. ಇಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ಇದೆ. ತತ್ವಜ್ಞಾನಿ, ಸಮಾಜ ಸುಧಾರಕ, ಹತ್ತು ಕಷ್ಟಗಳನ್ನು ಎದುರಿಸಿ ಸಮರ್ಥವಾಗಿ ದೇಶದ ಸಂವಿಧಾನ ರಚನೆಯ ರೂವಾರಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಶ್ರಮ ಸಂವಿಧಾನವನ್ನು ಇಡೀ ಭಾರತ ಗೌರವಿಸಿ ಆಚರಿಸಿದಾಗ ಮಾತ್ರ ಸಾರ್ಥಕವಾಗುವುದು. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲಿದೆ. ಸಮಾಜವಾದಿ, ಜಾತ್ಯತೀತ ಈ ದೇಶದಲ್ಲಿ ಎಲ್ಲರೂ ಒಂದಾಗಿ ಗೌರವದಿಂದ ಬಾಳೋಣ. ಅಭಿವೃದ್ಧಿಯ ಕಡೆ ಸಾಗಬೇಕು ಎಂಬುದೇ ನಮ್ಮ ಸಂವಿಧಾನದ ಆಶಯ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಅಂಜುಮನ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರೊ. ಕುಮಾರ ಸೋಮಸಾಗರ, ಇಡೀ ಜಗತ್ತೇ ಗೌರವಿಸುವ ಸಂವಿಧಾನವನ್ನು ಡಾ. ಬಿ.ಆರ್. ಅಂಬೇಡ್ಕರ್ ನೀಡಿದ್ದಾರೆ. ದೇಶದ ಭವಿಷ್ಯದ ಅರಿವಿನ ಅಭಿವ್ಯಕ್ತ ಈ ಸಂವಿಧಾನವಾಗಿದೆ. ಜಗತ್ತಿನ ಅಗ್ರಗಣ್ಯ ಸಂವಿಧಾನ ಎಂದು ಭಾರತದ ಸಂವಿಧಾನ ಹೆಸರಾಗಿದೆ. ಒಳ್ಳೆಯ ರಾಷ್ಟ್ರ ನಿರ್ಮಾಣದ ಶಕ್ತ ಸಂಗತಿಗಳು ಇಲ್ಲಿವೆ. ಸಮಾಜವಾದಿ, ಜಾತ್ಯತೀತ ರಾಷ್ಟ್ರದ ಯಶಸ್ಸು ಈ ಸಂವಿಧಾನದ ಆಚರಣೆಯಲ್ಲಿದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪೂರ, ನಮ್ಮ ಸಂವಿಧಾನವನ್ನು ಗೌರವಿಸುವುದೆಂದರೆ ಭಾರತೀಯತೆಯನ್ನು ಗೌರವಿಸಿದಂತೆ. ಜಗತ್ತಿನಲ್ಲೇ ಪ್ರಜಾಪ್ರಭುತ್ವವನ್ನು ಸಮರ್ಥವಾಗಿ ಆಡಳಿತಾರೂಢವಾಗಿಸಲು ಎಲ್ಲ ನೀತಿ, ನಿಯಮಗಳನ್ನು ಸಮಾನತೆಯ ನೆಲೆಯಲ್ಲಿ ರೂಪಿಸಿದ ಆರೋಗ್ಯಕರ ಸಂವಿಧಾನ ನಮ್ಮದು. ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳ ಪಾಲನೆ, ಅವರ ದೇಶಪ್ರೇಮದ ಅನುಕರಣೆ ಇಂದಿನ ಅಗತ್ಯ. ಸಂವಿಧಾನ ದಿನವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಬೇಕು ಎಂದರು.
ಶಿಕ್ಷಣಾರ್ಥಿ ಅಣ್ಣಪ್ಪ ಶಿಡ್ರೊಳ್ಳಿ ಆಶಯ ನುಡಿ ನುಡಿದರು. ಪರಿವರ್ತನಾ ಕಲಿಕಾ ಕೇಂದ್ರದ ಸಂಪನ್ಮೂಲ ವ್ಯಕ್ತಿ ಕಿಶೋರಕುಮಾರ ಕಾಮನಹಳ್ಳಿ, ಮಂಜು ಬಾರ್ಕಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಪಲ್ಲವಿ ಬೆಳಗಲಿ ಪ್ರಾರ್ಥನೆ ಹಾಡಿದರು. ರೇಣುಕಾ ಅಕ್ಕಿವಳ್ಳಿ ಸ್ವಾಗತಿಸಿದರು. ಅಂಜುಶ್ರೀ ಯಳ್ಳೂರ ಕಾರ್ಯಕ್ರಮ ನಿರೂಪಿಸಿದರು. ಸಂಗೀತಾ ಬಳೆಗಾರ ವಂದಿಸಿದರು.