ಬೇಡಿಕೆ ಈಡೇರದಿದ್ದರೆ ಅಕ್ಟೋಬರ್‌ನಲ್ಲಿ ವಿಧಾನಸೌಧ ಮುತ್ತಿಗೆ: ಕರವೇ ಸ್ವಾಭಿಮಾನಿ ಬಣ ರಾಜ್ಯಾಧ್ಯಕ್ಷ ಕೃಷ್ಣೇಗೌಡ ಎಚ್ಚರಿಕೆ

KannadaprabhaNewsNetwork |  
Published : Jul 07, 2025, 12:17 AM IST
6ಕೆಆರ್ ಎಂಎನ್ 1.ಜೆಪಿಜಿರಾಮನಗರ ತಾಲೂಕಿನ ಕಣಮಿಣಿಕೆ ಬಳಿಯ ಕಲ್ಯಾಣ ಮಂಟಪದಲ್ಲಿ ನಡೆದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯ ಕಾರ್ಯಕಾರಣಿ ಸಮಿತಿ ಸಭೆಯನ್ನು ಸಂಘಟನೆ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ  ಉದ್ಘಾಟಿಸಿದರು. | Kannada Prabha

ಸಾರಾಂಶ

ಕಾರ್ಯಾಂಗ, ಶಾಸಕಾಂಗ ಹಾಗೂ ಸರ್ಕಾರ ಜಡ್ಡುಗಟ್ಟಿದ್ದು, ಅವುಗಳನ್ನು ಎಚ್ಚರಿಸುವ ಕೆಲಸವನ್ನು ಸಂಘಟನೆ ಮಾಡುತ್ತಾ ಬಂದಿದೆ. ರೈತರು, ಬಡವರು ಹಾಗೂ ಕಾರ್ಮಿಕರ ಸಮಸ್ಯೆ ಗಳ ನಿವಾರಣೆಗೆ ಕಠಿಣ ನಿರ್ಧಾರ ತೆಗೆದುಕೊಳ್ಳದ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಿದ್ದೇವೆ.

ಕನ್ನಡಪ್ರಭ ವಾರ್ತೆ ರಾಮನಗರ

ಯುವಕರು ಹೃದಯಾಘಾತದಿಂದ ಮೃತಪಟ್ಟಿರುವ ಪ್ರಕರಣಗಳ ಅಧ್ಯಯನ ನಡೆಸುವುದು ಸೇರಿದಂತೆ ಪ್ರಮುಖ 7 ಬೇಡಿಕೆಗಳನ್ನು ಎರಡು ತಿಂಗಳೊಳಗೆ ಈಡೇರಿಸದಿದ್ದರೆ ಅಕ್ಟೋಬರ್‌ನಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ ಎಚ್ಚರಿಕೆ ನೀಡಿದರು.

ತಾಲೂಕಿನ ಕಣಮಿಣಿಕೆ ಬಳಿಯ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯ ಕಾರ್ಯಕಾರಣಿ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ 31 ಜಿಲ್ಲೆಗಳ ಸಂಘಟನೆ ಸಮಿತಿಗಳು ಆಯಾಯ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ 7 ಬೇಡಿಕೆಗಳ ಮನವಿ ಸಲ್ಲಿಸಿವೆ. ಇದನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದಲ್ಲಿ ವಿಧಾನಸೌಧ ಮುತ್ತಿಗೆಯಂತಹ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.

ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು, ನರೇಗಾ ಹಣ ದುರ್ಬಳಕೆಗೆ ಕಡಿವಾಣ ಹಾಕಬೇಕು. ಕಳಪೆ ದಿನಸಿ ಪದಾರ್ಥ ಹಾಗೂ ಬೆಲೆ ಏರಿಕೆ ನಿಯಂತ್ರಿಸುವುದು, ಮೇಕೆದಾಟು ಯೋಜನೆ ಕೂಡಲೇ ಜಾರಿಗೊಳಿಸುವುದು, ಕಾವೇರಿ, ತುಂಗಭದ್ರಾ, ಕೃಷ್ಣ, ಮಹದಾಯಿ, ಭೀಮಾ ನದಿಯ ನೀರು ಕನ್ನಡ ನಾಡಿನ ರೈತರಿಗೆ ಮೀಸಲಿರಿಸುವ ಕುರಿತು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕಾರ್ಯಾಂಗ, ಶಾಸಕಾಂಗ ಹಾಗೂ ಸರ್ಕಾರ ಜಡ್ಡುಗಟ್ಟಿದ್ದು, ಅವುಗಳನ್ನು ಎಚ್ಚರಿಸುವ ಕೆಲಸವನ್ನು ಸಂಘಟನೆ ಮಾಡುತ್ತಾ ಬಂದಿದೆ. ರೈತರು, ಬಡವರು ಹಾಗೂ ಕಾರ್ಮಿಕರ ಸಮಸ್ಯೆ ಗಳ ನಿವಾರಣೆಗೆ ಕಠಿಣ ನಿರ್ಧಾರ ತೆಗೆದುಕೊಳ್ಳದ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಿದ್ದೇವೆ. ನಮ್ಮ ಬಣದ ಹೋರಾಟದ ಫಲವಾಗಿ ಬಾಗೇಪಲ್ಲಿ ಅನ್ನು ಭಾಗ್ಯ ನಗರವಾಗಿ ರಾಜ್ಯ ಸರ್ಕಾರ ಮರು ನಾಮಕರಣ ಮಾಡಿದೆ. ಇದು ಸಂಘಟನೆ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಕೃಷ್ಣೇಗೌಡ ಹೇಳಿದರು.

ಕುಂಬಳಗೋಡು ಗ್ರಾಪಂ ಅಧ್ಯಕ್ಷ ದೇವರಾಜು ಮಾತನಾಡಿ, ನೆರೆ ಹೊರೆಯ ರಾಜ್ಯಗಳ ಯಾವುದೇ ಮೂಲೆಯಲ್ಲಾಗಲಿ ಕನ್ನಡಿಗರ ಮೇಲೆ ದೌರ್ಜನ್ಯ ಕರವೇ ಸ್ವಾಭಿಮಾನಿ ಬಣ ಧ್ವನಿ ಎತ್ತುತ್ತದೆ. ಸ್ವಾಭಿಮಾನದ ಹೆಸರಿಗೆ ಹೋರಾಟದ ಶಕ್ತಿ ಇದೆ ಎಂಬುದನ್ನು ಸಂಘಟನೆ ತೋರಿಸಿಕೊಟ್ಟಿದೆ ಎಂದರು.

ಕಾಸರಗೋಡು, ತಮಿಳುನಾಡು ಹಾಗೂ ಗೋವಾ ಸೇರಿದಂತೆ ಅನೇಕ ಭಾಗಗಳಲ್ಲಿ ಕನ್ನಡಿಗರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಲೇ ಇದೆ. ಅದರ ವಿರುದ್ಧವೂ ಧ್ವನಿ ಎತ್ತಿ ನ್ಯಾಯ ಕೊಡಿಸುವ ಕೆಲಸವನ್ನು ಸಂಘಟನೆ ಮಾಡಿದೆ. ಕನ್ನಡಕ್ಕಾಗಿ ಹೋರಾಟ ಮಾಡುತ್ತಿರುವ ಈ ಸಂಘಟನೆಗೆ ನಮ್ಮ ಬೆಂಬಲ ಸದಾ ಇರಲಿದೆ. ಮುಂದಿನ ದಿನಗಳಲ್ಲಿ ಸಂಘಟನೆ ಮತ್ತಷ್ಟು ಶಕ್ತಿ ಯುತವಾಗಿ ಬೆಳೆಯಲಿ ಎಂದು ಹಾರೈಸಿದರು.

ಕುಂಬಳಗೋಡು ಗ್ರಾಪಂ ಉಪಾಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ, ದಿನ ನಿತ್ಯ ಹಲವಾರು ಹೋರಾಟಗಳನ್ನು ನೋಡುತ್ತಿದ್ದೇವೆ. ಆದರೆ, ನೆಲ ಜಲ ಭಾಷೆ ವಿಚಾರವಾಗಿ ತನು ಮನ ಅರ್ಪಿಸಿಕೊಂಡಿರುವ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರಿಗೆ ಸದಾ ಚಿರ ಋಣಿಗಳಾಗಿರುತ್ತೇವೆ ಎಂದು ತಿಳಿಸಿದರು.

ಕನ್ನಡಕ್ಕಾಗಿ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಕವಿ ವಾಣಿಯಂತೆ ಕನ್ನಡಿಗರು ನಡೆಯಬೇಕು. ಕನ್ನಡಕ್ಕಾಗಿ ಕೆಲಸ ಮಾಡುವುದು ಪುಣ್ಯದ ಕೆಲಸ. ಆ ರೀತಿ ಕನ್ನಡ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸಂಘಟನೆಯ ಹೋರಾಟದ ಹಾದಿ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘಟನೆ ಮುಖಂಡ ಹೇಮಂತ್ ಶೆಟ್ಟಿ ಮಾತನಾಡಿ, ಕನ್ನಡದ ಹೆಸರಿನಲ್ಲಿರುವ ಸಂಘಟನೆಗಳನ್ನು ಅದರ ನಾಯಕರು ಸ್ವಾರ್ಥಕ್ಕಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅಂತಹ ಸಂಘಟನೆಗಳ ಮಧ್ಯೆ ಕರವೇ ಸ್ವಾಭಿಮಾನಿ ಬಣ ಹೆಗ್ಗುರುತಾಗಿ ಬೆಳೆದಿದೆ. ಕನ್ನಡ ನಾಡು ನುಡಿ, ಜಲ ಹಾಗೂ ಕನ್ನಡಿಗರ ದೌರ್ಜನ್ಯ ಮಾತ್ರವಲ್ಲದೆ ಸಾಕಷ್ಟು ಹಗರಣಗಳ ವಿರುದ್ಧವೂ ಹೋರಾಟ ನಡೆಸಿ ಮುಂಚೂಣಿಯಲ್ಲಿ ನಿಂತಿದೆ ಎಂದು ಹೇಳಿದರು.

ಸಂಘಟನೆ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡರು ರಾಜ್ಯಾಧ್ಯಕ್ಷ ಕನ್ನಡ ಮತ್ತು ಕನ್ನಡಿಗರ ಪರ ಹೋರಾಡಿ ಜೈಲು ವಾಸ ಅನುಭವಿಸಿದವರು. ಈಗಲೂ ಅವರಲ್ಲಿ ಆ ಹೋರಾಟದ ಛಲ ಕಡಿಮೆಯಾಗಿಲ್ಲ. ಕನ್ನಡ ಸೇವೆಗಾಗಿ ಜೀವನವನ್ನೇ ಮುಡಿಪಾಗಿಟಿದ್ದಾರೆ. ಕಾರ್ಯಕರ್ತರು ಸಂಘಟನೆ ಬಗೆಗೆ ಅಭಿಮಾನ ಸ್ವಾಭಿಮಾನ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಘಟನೆ ರಾಜ್ಯ ಉಸ್ತುವಾರಿ ಅಧ್ಯಕ್ಷ ಶಿವುಗೌಡ, ಗೌರವಾಧ್ಯಕ್ಷ ಡಾ.ಬಿ.ಎಂ.ಉಮರ್ ಹಾಜಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭು, ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಶಿವಕುಮಾರ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮಿಜೋಷಿ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಕಿರಣ್ ಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಸುಬ್ರಮಣ್ಯ, ಉತ್ತರ ಕರ್ನಾಟಕ ವಿಭಾಗೀಯ ಅಧ್ಯಕ್ಷ ಲಕ್ಷ್ಮಣ ಕಂಬಾಗಿ, ರಾಜ್ಯ ಸಮಿತಿ ಸದಸ್ಯ ಶ್ರೀಧರ್, ಬಸವರಾಜ್ ಹವಲ್ದಾರ್ , ಬೆಟ್ಟೇಗೌಡ, ಸಮಾಜ‌ಸೇವಕ ಭರತ್ ಗೌಡ ಉಪಸ್ಥಿತರಿದ್ದರು.-------

ಹಾಸನ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಹೃದಯಾಘಾತಗಳಿಂದ ಸರಣಿ ಸಾವು ಸಂಭವಿಸುತ್ತಿವೆ. ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತಕ್ಕಿಡಾಗುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ತಜ್ಞರ ಮೂಲಕ ಅಧ್ಯಯನ ನಡೆಸಿ ಹೃದಯಾಘಾತಕ್ಕೆ ಕಾರಣ ಪತ್ತೆ ಹಚ್ಚಿ, ಇಂತಹ ಪ್ರಕರಣಗಳ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜೊತೆಗೆ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

- ಶಿವುಗೌಡ, ರಾಜ್ಯ ಉಸ್ತುವಾರಿ ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ

PREV