ಪರಿವಾರ ಆರೋಗ್ಯವಾಗಿದ್ದರೆ ದೇಶ ಸದೃಢ: ಸಂಸದ ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Sep 18, 2025, 01:10 AM IST
ಸ್ವಸ್ಥ ನಾರಿ- ಸಶಕ್ತ ಪರಿವಾರ ಅಭಿಯಾನದಲ್ಲಿ ಜಾಗೃತಿ ಕರಪತ್ರ ಬಿಡುಗಡೆ ಮಾಡಲಾಯಿತು. | Kannada Prabha

ಸಾರಾಂಶ

ಸ್ವಸ್ಥ ನಾರಿ ಸಶಕ್ತ ಪರಿವಾರ ಎಂಬ ಅಭಿಯಾನ ಮಾಡುತ್ತಿದ್ದೇವೆ. ಇದರ ಉದ್ದೇಶ ನಮ್ಮ ತಾಯಂದಿರು ಆರೋಗ್ಯವಂತರಾಗಿ ಇರಬೇಕು. ಅವರು ಆರೋಗ್ಯವಾಗಿದ್ದರೆ ಇಡೀ ಪರಿವಾರ ಆರೋಗ್ಯವಾಗಿರುತ್ತದೆ. ಪರಿವಾರ ಆರೋಗ್ಯವಾಗಿದ್ದರೆ ಈ ಸಮಾಜ, ದೇಶ ಕೂಡ ಆರೋಗ್ಯವಾಗಿರುತ್ತದೆ.

ಹಾವೇರಿ: ತಾಯಂದಿರು ಮತ್ತು ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಮೇಲೆ ನಮ್ಮ ದೇಶದ ಭವಿಷ್ಯ ಇದೆ. ಪ್ರಧಾನಿ ನರೇಂದ್ರ ಮೋದಿಯವರು ಆರೋಗ್ಯ ಕ್ಷೇತ್ರಕ್ಕೆ ಬಹಳ ದೊಡ್ಡ ಒತ್ತು ನೀಡಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.ಇಲ್ಲಿನ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 75ನೇ ಜನ್ಮದಿನದ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಸ್ವಸ್ಥ ನಾರಿ- ಸಶಕ್ತ ಪರಿವಾರ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು. ಸ್ವಸ್ಥ ನಾರಿ ಸಶಕ್ತ ಪರಿವಾರ ಎಂಬ ಅಭಿಯಾನ ಮಾಡುತ್ತಿದ್ದೇವೆ. ಇದರ ಉದ್ದೇಶ ನಮ್ಮ ತಾಯಂದಿರು ಆರೋಗ್ಯವಂತರಾಗಿ ಇರಬೇಕು. ಅವರು ಆರೋಗ್ಯವಾಗಿದ್ದರೆ ಇಡೀ ಪರಿವಾರ ಆರೋಗ್ಯವಾಗಿರುತ್ತದೆ. ಪರಿವಾರ ಆರೋಗ್ಯವಾಗಿದ್ದರೆ ಈ ಸಮಾಜ, ದೇಶ ಕೂಡ ಆರೋಗ್ಯವಾಗಿರುತ್ತದೆ ಎಂದರು. ತಾಯಿ ಮತ್ತು ಮಗುವಿನ ಅಭಿವೃದ್ಧಿಗೆ ಈ ಯೋಜನೆಗಳನ್ನು ಮಾಡಿರುವುದು ಶ್ಲಾಘನೀಯ. ಆ ಸವಿನೆನಪಿಯಲ್ಲಿ ಹದಿನೈದು ದಿನ ಅಭಿಯಾನ ನಡೆಯುತ್ತಿದೆ. ಆರೋಗ್ಯ ಕೇಂದ್ರ, ತಾಲೂಕು ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಎಲ್ಲವೂ ಪ್ರಾಮಾಣಿಕವಾಗಿ ನಡೆದು ಸಾವಿರಾರು ಜನರಿಗೆ ಅನುಕೂಲವಾಗಲಿ. ಇಲ್ಲಿ ತಪಾಸಣೆ ಮಾಡುವ ದಾಖಲೆ ಇಟ್ಟುಕೊಂಡು ಅವರ ಆರೋಗ್ಯ ಇನ್ನಷ್ಟು ಸುಧಾರಣೆ ಮಾಡಲು ತಾವೆಲ್ಲ ಕೆಲಸ ಮಾಡಬೇಕೆಂದು ವಿನಂತಿ ಮಾಡುತ್ತೇನೆ ಎಂದರು. ಡಿಜಿಟಲ್ ಕ್ರಾಂತಿ: ಹಿಂದೆ ಹಣ ಬಹಳಷ್ಟು ದುರುಪಯೋಗ ಆಗುತ್ತಿತ್ತು. ಈಗ ಡಿಬಿಟಿ ಬಂದ ಮೇಲೆ ನೇರವಾಗಿ ಫಲಾನುಭವಿಗಳ ಅಕೌಂಟ್‌ಗೆ ಹಣ ಸಿಗುತ್ತಿದೆ. ಕಿಸಾನ್ ಸಮ್ಮಾನ್‌ನಿಂದ ಹಿಡಿದು ರಾಜ್ಯ ಸರ್ಕಾರ ಮಾಡಿರುವ ಗ್ಯಾರಂಟಿ ಯೋಜನೆಗಳು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಆಗುತ್ತದೆ. ಡಿಜಿಟಲ್ ಕ್ರಾಂತಿಯಿಂದ ಇದು ಸಾಧ್ಯವಾಗಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯೇ ಕಾರಣ ಎಂದರು.ಆಧುನಿಕ ಕಾಲದಲ್ಲಿ ಭಾರತ ಬಹಳ ಮುಂದಿದೆ. ವಿಶ್ವದ ಶೇ. 45ರಷ್ಟು ಜನರು ಡಿಜಿಟಲ್ ವ್ಯವಸ್ಥೆ ಮೂಲಕ ವ್ಯವಹಾರ ಮಾಡುತ್ತಾರೆ. ಕಾಯಿಪಲ್ಯೆ ಮಾರಾಟ ಮಾಡುವ ಒಬ್ಬ ವ್ಯಾಪಾರಸ್ಥನ ಬಳಿಯೂ ಫೋನ್ ಪೇ ಇದೆ. ಇದೊಂದು ದೊಡ್ಡ ಕ್ರಾಂತಿ. ಇಂಡಿಯಾದಲ್ಲಿ ಕೃತಕ ಬುದ್ಧಿಮತ್ತೆ ಮೂಲಕ ಮೂರನೇ ಕ್ರಾಂತಿ ನಡೆಯುತ್ತಿದೆ. ಇದು ನಮ್ಮ ಬದುಕಿನಲ್ಲಿ, ಕೃಷಿಯಲ್ಲಿ, ಕೈಗಾರಿಕೆಯಲ್ಲಿ ಎಲ್ಲ ರಂಗದಲ್ಲಿಯೂ ಬಹಳ ದೊಡ್ಡ ಬದಲಾವಣೆ ತರುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಬಸವರಾಜ ಶಿವಣ್ಣವರ, ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎಂ. ಹಿರೇಮಠ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ನಗರಸಭೆಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಮುಖಂಡರಾದ ಡಿ.ಎಸ್. ಮಾಳಗಿ, ಪರಮೇಶಪ್ಪ ಮೇಗಳಮನಿ, ಡಾ. ಬಸವರಾಜ ಕೇಲಗಾರ, ಜಿಪಂ ಸಿಇಒ ರುಚಿ ಬಿಂದಲ್, ಡಿಎಚ್‌ಒ ಡಾ. ಜಯಾನಂದ, ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ. ಪ್ರದೀಪ ಎಂ.ವಿ., ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಿ.ಆರ್. ಹಾವನೂರ ಸೇರಿದಂತೆ ಪ್ರಮುಖರು ಹಾಗೂ ವೈದ್ಯಕೀಯ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ