ಕನ್ನಡಪ್ರಭ ವಾರ್ತೆ ಬಳ್ಳಾರಿ
ಪರಿಣಾಮಕಾರಿಯಾಗಿ ಗ್ರಾಮ ಸಭೆ ನಡೆಸುವ ಮೂಲಕ ಗ್ರಾಮ ಸ್ವರಾಜ್ ಉದ್ದೇಶವನ್ನು ಸಾಕಾರಗೊಳಿಸಬೇಕು ಎಂದು ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ರಾಜ್ಯ ಕಾರ್ಯಾಧ್ಯಕ್ಷ ವೆಂಕಟರಾವ್ ಘೋರ್ಪಡೆ ತಿಳಿಸಿದರು.ನಗರದ ಜಿಪಂ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ಪಂಚಾಯತ್ ರಾಜ್ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಯಾವುದೇ ಯೋಜನೆಯ ಪ್ರಕ್ರಿಯೆಯು ತಳಹಂತದಿಂದಲೇ ಶುರುಗೊಳ್ಳಬೇಕು. ಹೀಗಾಗಿ ಗ್ರಾಮಸಭೆ ಸದೃಢಗೊಳಿಸಬೇಕು. ಯೋಜನೆ ರೂಪಿಸುವ ಮೊದಲು ಹಣಕಾಸಿನ ಲಭ್ಯತೆ ತಿಳಿದಿರಬೇಕು. ರಾಜ್ಯದ ಆಯವ್ಯಯದಂತೆಯೇ ಗ್ರಾಪಂವಾರು ಹಣಕಾಸಿನ ಲಭ್ಯತೆಯ ಮಾಹಿತಿಯನ್ನು ಸಂಬಂಧಿಸಿದ ಇಲಾಖೆಗಳು ಪ್ರಕಟಿಸಬೇಕು ಎಂದರು. ಇದೇ ವೇಳೆ ರಾಜ್ಯದ ಪ್ರಗತಿ ನೆಲೆಯಲ್ಲಿ ಗ್ರಾಪಂಗಳ ಪಾತ್ರ ಕುರಿತು ಘೋರ್ಪಡೆ ಅವರು ಪಂಚಾಯತಿ ಸದಸ್ಯರು ಗ್ರಾಮೀಣ ಅಭಿವೃದ್ಧಿ ನೆಲೆಯಲ್ಲಿ ಮುತುವರ್ಜಿ ಕಾರ್ಯನಿರ್ವಹಿಸಿ, ಪ್ರಗತಿಯತ್ತ ಮುನ್ನಡೆ ಸಾಧಿಸಬೇಕು ಎಂದು ಕರೆ ನೀಡಿದರು.ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಮತ್ತು ಎಂ.ವೈ. ಘೋರ್ಪಡೆ ವಿಷಯ ಕುರಿತು ಉಪನ್ಯಾಸ ನೀಡಿದ ಮಾಜಿ ಶಾಸಕ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಪರಿಷತ್‌ನ ಉಪಾಧ್ಯಕ್ಷ ಡಿ.ಆರ್. ಪಾಟೀಲ್, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸಿದ ಕೀರ್ತಿ ಎಂ.ವೈ. ಘೋರ್ಪಡೆ ಅವರಿಗೆ ಸಲ್ಲುತ್ತದೆ. ರಾಜವಂಶಸ್ಥರಾಗಿ ಅಧಿಕಾರ ವಿಕೇಂದ್ರೀಕರಣದ ಪರವಾಗಿ ನಿಂತ ಅಪರೂಪದ ವ್ಯಕ್ತಿತ್ವ ಘೋರ್ಪಡೆಯವರದಾಗಿತ್ತು ಎಂದು ತಿಳಿಸಿದರು. ಗ್ರಾಮಸಭೆಗಳ ಸಬಲೀಕರಣಕ್ಕಾಗಿ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ನಡೆಸುತ್ತಿರುವ ಅಭಿಯಾನದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ ಜನಾಧಿಕಾರ ಕನಸನ್ನು ನನಸಾಗಿಸಬೇಕು ಎಂದರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಗ್ರಾಪಂ ವ್ಯಾಪ್ತಿಯ ಅಧಿಕಾರ ಶಾಸಕ ಕೇಂದ್ರೀಕೃತಗೊಳ್ಳುತ್ತಿದ್ದು ಅಧಿಕಾರ ವಿಕೇಂದ್ರೀಕರಣಗೊಳ್ಳಬೇಕು. ಸ್ಥಳೀಯವಾಗಿ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಅಧಿಕಾರ ನೀಡುವಂತಾಗಬೇಕು. ಈ ಮೂಲಕ ಸ್ಥಳೀಯ ಸರ್ಕಾರವಾಗಿ ಕಾರ್ಯನಿರ್ವಹಿಸುವಂತಾಗಬೇಕು ಎಂದು ತಿಳಿಸಿದರು.ಪರಿಷತ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಪ್ರಾಸ್ತಾವಿಕ ಮಾತನಾಡಿದರು.ಜಿಪಂ ಮಾಜಿ ಅಧ್ಯಕ್ಷ ಬಾವಿ ಬೆಟ್ಟಪ್ಪ, ಮಾಜಿ ಶಾಸಕ ಶಿವಾರೆಡ್ಡಿ, ಬಳ್ಳಾರಿ ಜಿಲ್ಲಾ ಗ್ರಾಪಂ ಸದಸ್ಯರ ಒಕ್ಕೂಟದ ಅಧ್ಯಕ್ಷ ಬಾಣಾಪುರ ನಾಗರಾಜ್, ಪ್ರಧಾನ ಕಾರ್ಯದರ್ಶಿ ಶ್ರೀಧರ್, ಬಳ್ಳಾರಿ ತಾಲೂಕು ಅಧ್ಯಕ್ಷ ಅರಕೇರಿ ಸದಾಶಿವಪ್ಪ, ರಾಜ್ಯ ಮಹಾ ಒಕ್ಕೂಟದ ಖಜಾಂಚಿ ಹೇಮಾ ಮಂಜುನಾಥ್, ಪರಿಷತ್‌ನ ಜಂಟಿ ಕಾರ್ಯದರ್ಶಿ ಮಮತಾ ತಳವಾರ, ಜಿಲ್ಲಾ ಕಾನೂನು ಸಲಹೆಗಾರ ಸಿ.ಎಚ್. ಸುಬ್ರಮಣ್ಯೇಶ್ವರ ರಾವ್, ಸಾಹಿತಿ ಜಮಾದಾರ್ ಹಾಗೂ ಗ್ರಾಪಂ ಪ್ರತಿನಿಧಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವೃಂದ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ತಿಮ್ಮಪ್ಪ ಕಾರ್ಯಕ್ರಮ ನಿರ್ವಹಿಸಿದರು.