ಬಿಕ್ಕೋಡು ರಸ್ತೆಯಲ್ಲಿರುವ ಜೆ.ಎಂ.ಎಫ್. ಸಿ ನ್ಯಾಯಾಲಯದ ಆವರಣದಲ್ಲಿ ನೂತನ ಹಿರಿಯ ಸಿವಿಲ್ ನ್ಯಾಯಾಧೀಶ ಪೀಠವನ್ನು ಉದ್ಘಾಟಿಸಿ ಮಾತನಾಡಿದರು. ಆಲೂರು ತಾಲೂಕಿನ ಜನತೆ ಹಾಗೂ ವಕೀಲರ ಸಂಘವು ದೀರ್ಘಕಾಲದಿಂದ ಹಿರಿಯ ಸಿವಿಲ್ ನ್ಯಾಯಾಧೀಶರ ಪೀಠಕ್ಕಾಗಿ ಬೇಡಿಕೆ ಇಟ್ಟಿದ್ದರು. ಇಂದಿನ ಈ ನೂತನ ಪೀಠದ ಆರಂಭದಿಂದಾಗಿ ಸ್ಥಳೀಯ ಸಾರ್ವಜನಿಕರು ಮತ್ತು ವ್ಯಾಜ್ಯದಾರರು ಸಣ್ಣಪುಟ್ಟ ಅಥವಾ ಗಂಭೀರ ಸ್ವರೂಪದ ಸಿವಿಲ್ ಹಾಗೂ ಇತರೆ ಪ್ರಕರಣಗಳ ವಿಚಾರಣೆಗಾಗಿ ಜಿಲ್ಲಾ ಕೇಂದ್ರಕ್ಕೆ ಅಲೆಯುವ ಕಷ್ಟ ತಪ್ಪಲಿದೆ. ನ್ಯಾಯಾಂಗ ಸೇವೆಯು ಜನರ ಮನೆ ಬಾಗಿಲಿಗೆ ಮತ್ತಷ್ಟು ಹತ್ತಿರವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಆಲೂರು
ಸಮಾಜದಲ್ಲಿ ಪ್ರತಿಯೊಬ್ಬರೂ ಕಾನೂನುಗಳ ಕುರಿತಂತೆ ಅಗತ್ಯವಾದ ಅರಿವು ಮೂಡಿಸಿಕೊಂಡಾಗ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ ಮತ್ತು ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳವುದು ಹೇಗೆ ಎಂಬುದು ಸಹ ಸರಳವಾಗಿ ತಿಳಿಯುತ್ತದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಎಚ್. ಪಿ ಸಂದೇಶ ಹೇಳಿದರು.ತಾಲೂಕಿನ ಬಿಕ್ಕೋಡು ರಸ್ತೆಯಲ್ಲಿರುವ ಜೆ.ಎಂ.ಎಫ್. ಸಿ ನ್ಯಾಯಾಲಯದ ಆವರಣದಲ್ಲಿ ನೂತನ ಹಿರಿಯ ಸಿವಿಲ್ ನ್ಯಾಯಾಧೀಶ ಪೀಠವನ್ನು ಉದ್ಘಾಟಿಸಿ ಮಾತನಾಡಿದರು. ಆಲೂರು ತಾಲೂಕಿನ ಜನತೆ ಹಾಗೂ ವಕೀಲರ ಸಂಘವು ದೀರ್ಘಕಾಲದಿಂದ ಹಿರಿಯ ಸಿವಿಲ್ ನ್ಯಾಯಾಧೀಶರ ಪೀಠಕ್ಕಾಗಿ ಬೇಡಿಕೆ ಇಟ್ಟಿದ್ದರು. ಇಂದಿನ ಈ ನೂತನ ಪೀಠದ ಆರಂಭದಿಂದಾಗಿ ಸ್ಥಳೀಯ ಸಾರ್ವಜನಿಕರು ಮತ್ತು ವ್ಯಾಜ್ಯದಾರರು ಸಣ್ಣಪುಟ್ಟ ಅಥವಾ ಗಂಭೀರ ಸ್ವರೂಪದ ಸಿವಿಲ್ ಹಾಗೂ ಇತರೆ ಪ್ರಕರಣಗಳ ವಿಚಾರಣೆಗಾಗಿ ಜಿಲ್ಲಾ ಕೇಂದ್ರಕ್ಕೆ ಅಲೆಯುವ ಕಷ್ಟ ತಪ್ಪಲಿದೆ. ನ್ಯಾಯಾಂಗ ಸೇವೆಯು ಜನರ ಮನೆ ಬಾಗಿಲಿಗೆ ಮತ್ತಷ್ಟು ಹತ್ತಿರವಾಗಲಿದೆ ಎಂದು ಅಭಿಪ್ರಾಯಪಟ್ಟರು.ಶಾಸಕ ಸಿಮೆಂಟ್ ಮಂಜು ಮಾತನಾಡಿ, ನ್ಯಾಯಾಲಯಗಳು ಬಡವರ ಮತ್ತು ನೊಂದವರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತವೆ ಎಂಬುದು ಪ್ರಜಾಪ್ರಭುತ್ವದ ಅತ್ಯಂತ ಪವಿತ್ರವಾದ ನಂಬಿಕೆಯಾಗಿದೆ. ಆಲೂರು ತಾಲೂಕಿನಲ್ಲಿ 27 ವರ್ಷಗಳ ಬಳಿಕ ಈ ಕನಸು ನನಸಾಗಿದೆ, ಸಾರ್ವಜನಿಕರು ಮತ್ತು ವಕೀಲರು ಸಣ್ಣಪುಟ್ಟ ಸಿವಿಲ್ ವ್ಯಾಜ್ಯಗಳಿಗೂ ಅಥವಾ ಹಿರಿಯ ನ್ಯಾಯಾಲಯದ ವಿಚಾರಣೆಗಾಗಿ ಹಾಸನ ಜಿಲ್ಲಾ ಕೇಂದ್ರಕ್ಕೆ ಅಲೆಯಬೇಕಾದ ಅನಿವಾರ್ಯತೆ ಇತ್ತು. ಇವತ್ತು ತಾಲೂಕಿನ ಜನತೆಯ ಬಹುದಿನಗಳ ಈ ಮಹತ್ವದ ಬೇಡಿಕೆ ಈಡೇರಿದೆ. ಇದರಿಂದ ನ್ಯಾಯಾಂಗ ಸೇವೆಯು ಜನರ ಮನೆ ಬಾಗಿಲಿಗೆ ಮತ್ತಷ್ಟು ಹತ್ತಿರವಾಗಲಿದೆ, ಸಮಾಜದಲ್ಲಿ ದುರ್ಬಲರು, ಶೋಷಿತರು ಮತ್ತು ಬಡವರಿಗೆ ಅನ್ಯಾಯವಾದಾಗ, ಅವರಿಗೆ ನ್ಯಾಯ ಒದಗಿಸುವ ಕೊನೆಯ ಭರವಸೆಯ ನ್ಯಾಯಾಂಗ ಹಾಗಾಗಿ ಪ್ರತಿಯೊಬ್ಬರು ನ್ಯಾಯಾಂಗದ ಮುಂದೆ ತಲೆಬಾಗಲೇ ಎಂದು ಅಭಿಪ್ರಾಯಪಟ್ಟರು.ವಕೀಲರ ಸಂಘದ ಅಧ್ಯಕ್ಷ ಎಂ.ಎಸ್ ಮಹೇಶ್ ಮಾತನಾಡಿ, ಹೈಕೋರ್ಟ್ ನ್ಯಾಯಾಧೀಶರಾದ ಎಚ್.ಪಿ. ಸಂದೇಶ್ ಹಾಗೂ ನಮ್ಮ ಹಾಸನ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ಅಶೋಕ್ ಎಸ್. ಕಿಣಗಿ ಅವರ ವಿಶೇಷ ಕಾಳಜಿ ಮತ್ತು ಮುತುವರ್ಜಿಯಿಂದ ಆಲೂರು ತಾಲೂಕಿನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರ ಪೀಠ ಪ್ರಾರಂಭಗೊಂಡಿದೆ ಇದರಿಂದ ಆಲೂರು ಭಾಗದ ಜನರಿಗೆ ತ್ವರಿತ ಹಾಗೂ ಸುಲಭವಾಗಿ ನ್ಯಾಯ ದೊರಕಲಿದೆ, ಸಮಯ ಮತ್ತು ಹಣದ ಉಳಿತಾಯವಾಗಲಿದೆ. ಕಕ್ಷಿದಾರರಿಗೆ ಕಡಿಮೆ ಆವಧಿ ಮತ್ತು ಕಡಿಮೆ ಖರ್ಚಿನಲ್ಲಿ ನ್ಯಾಯ ದೊರಕುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಅಶೋಕ್ ಎಸ್. ಕಿಣಗಿ, ಜಿಲ್ಲಾ ನ್ಯಾಯಾಧೀಶರಾದ ಶ್ರೀಮತಿ ಹೇಮಾವತಿ, ಸಿವಿಲ್ ಜಡ್ಜ್ ಜೆಎಂಎಫ್ ನ್ಯಾಯಾಧೀಶರಾದ ಎಂ. ಸ್ನೇಹ, ತಹಸೀಲ್ದಾರ್ ಎಚ್. ಮಲ್ಲಿಕಾರ್ಜುನ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಜಯಣ್ಣ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಮಹೇಶ್, ಉಪಾಧ್ಯಕ್ಷ ಶಂಕರ್, ಕಾರ್ಯದರ್ಶಿ ಆರ್. ಬಿ. ಸುರೇಶ್, ಖಜಾಂಚಿ ಮೋಹನ್, ಸಹ ಕಾರ್ಯದರ್ಶಿ ಕವಿತಾ, ಕಾಂಗ್ರೆಸ್ ಮುಖಂಡ ಮುರಳಿಮೋಹನ್ ಸೇರಿದಂತೆ ತಾಲೂಕಿನ ಎಲ್ಲಾ ಹಿರಿಯ ಕಿರಿಯ ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.