ಸೊಳ್ಳೆ ನಿಯಂತ್ರಿಸಿದಲ್ಲಿ ಐದು ರೋಗಗಳು ದೂರ

KannadaprabhaNewsNetwork |  
Published : May 31, 2024, 02:16 AM IST
ನರಗುಂದ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಡೆಂಘೀ ಅಡ್ವೋಕೆಸಿ ಕಾರ್ಯಾಗಾರವನ್ನು ಡಾ. ಅನ್ನಪೂರ್ಣಾ ಶೆಟ್ಟರ ಗುರುವಾರ ಉದ್ಘಾಟಿಸಿದರು. | Kannada Prabha

ಸಾರಾಂಶ

ಸೊಳ್ಳೆ ನಿಯಂತ್ರಣ ಮಾಡಿದಲ್ಲಿ ಈ ಐದು ರೋಗಗಳನ್ನು ನಿಯಂತ್ರಣ ಮಾಡಬಹುದು

ನರಗುಂದ: ಜೂನ್‌ ತಿಂಗಳಿಂದ ಮಳೆಗಾಲ ಪ್ರಾರಂಭವಾಗುತ್ತದೆ. ಜನತೆ ತಮ್ಮ ಮನೆ ಸುತ್ತಲು ಸೊಳ್ಳೆಗಳು ವಾಸವಾಗದಂತೆ ಜಾಗ್ರತೆ ವಹಿಸಬೇಕು, ಸ್ವಚ್ಛತೆ ಕಾಪಾಡಬೇಕು ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಕೀಟತಜ್ಞೆ ಡಾ. ಅನ್ನಪೂರ್ಣಾ ಶೆಟ್ಟರ ಹೇಳಿದರು.

ಅವರು ಗುರುವಾರ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಡೆಂಘೀ ದಿನಾಚರಣೆ ಅಂಗವಾಗಿ ತಾಲೂಕು ಸರ್ಕಾರಿ ಮತ್ತು ಖಾಸಗಿ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಡೆಂಘೀ ಅಡ್ವೋಕೆಸಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಕೀಟಜನ್ಯ ರೋಗಗಳಾದ ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯಾ, ಮೆದುಳು ಜ್ವರ ಮತ್ತು ಆನೆಕಾಲು ರೋಗಗಳು ಸೋಂಕಿತ ಹೆಣ್ಣು ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ಸೊಳ್ಳೆ ನಿಯಂತ್ರಣ ಮಾಡಿದಲ್ಲಿ ಈ ಐದು ರೋಗಗಳನ್ನು ನಿಯಂತ್ರಣ ಮಾಡಬಹುದು ಎಂದು ಹೇಳಿದರು.

ಸೊಳ್ಳೆಗಳ ನಿಯಂತ್ರಣ ಮಾಡುವಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದೆ. ಮನೆಗಳಲ್ಲಿ ಇರುವ ಎಲ್ಲ ನೀರಿನ ಪರಿಕರಗಳನ್ನು ನಾಲ್ಕೈದು ದಿನಗಳಿಗೊಮ್ಮೆ ಚೆನ್ನಾಗಿ ತಿಕ್ಕಿ ತೊಳೆದು, ಒಣಗಿಸಿ ಹೊಸ ನೀರನ್ನು ತುಂಬಿಸಿ ಭದ್ರವಾಗಿ ಮುಚ್ಚಿಡಬೇಕು. ಮನೆಯ ಸುತ್ತ-ಮುತ್ತ ಮತ್ತು ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯ ಸುತ್ತ-ಮುತ್ತ ಘನತ್ಯಾಜ್ಯ ವಸ್ತುಗಳು, ಟೈರ್‌ಗಳಲ್ಲಿ ಮಳೆಗಾಲದಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಆಗುತ್ತದೆ. ಏಕೆಂದರೆ ನಿಂತ ತಂಪಾದ ನೀರಿನಲ್ಲಿ ಹೆಣ್ಣು ಸೊಳ್ಳೆ ಮೊಟ್ಟೆಗಳನ್ನಿಡುತ್ತದೆ. ಐದಾರು ದಿನಗಳಲ್ಲಿ ಈ ಮೊಟ್ಟೆಗಳು ಸೊಳ್ಳೆಗಳಾಗುತ್ತವೆ. ಆದ್ದರಿಂದ ಸೊಳ್ಳೆಗಳಿಗೆ ನಿಂತ ನೀರು ಸಿಗದಂತೆ ನೋಡಿಕೊಳ್ಳಬೇಕು. ಜತೆಗೆ ಸಾರ್ವಜನಿಕರು ಸೊಳ್ಳೆ ಕಚ್ಚದಂತೆ ಮೈತುಂಬಾ ಬಟ್ಟೆ ಧರಿಸುವುದು, ಮಾರ್ಕೆಟ್‌ಗಳಲ್ಲಿ ಸಿಗುವ ಸೊಳ್ಳೆ ನಿರೋಧಕಗಳಾದ ಲಿಕ್ವಿಡ್, ಸೊಳ್ಳೆಬತ್ತಿ, ಸೊಳ್ಳೆ ಬ್ಯಾಟ್, ಸೊಳ್ಳೆಪರದೆಗಳನ್ನು ಉಪಯೋಗಿಸಬೇಕು. ನಿಂತ ನೀರಿನ ತಾಣಗಳಿಗೆ ಲಾರ್ವಾಹಾರಿ ಮೀನುಗಳನ್ನು ಬಿಡಲಾಗುತ್ತದೆ. ಅದರಂತೆ ತಾಲೂಕಿನ ಎಲ್ಲ ಶಾಲೆಗಳ ಸುತ್ತಮುತ್ತ ಮಳೆನೀರು ನಿಲ್ಲದಂತೆ ಮತ್ತು ಘನತ್ಯಾಜ್ಯ ಸೂಕ್ತ ವಿಲೇವಾರಿ ಮಾಡುವಂತೆ ಕ್ರಮಕೈಗೊಳ್ಳಬೇಕು ಎಂದು ವಿವರಿಸಿದರು.

ಸೊಳ್ಳೆಗಳ ವಿಧಗಳು, ಬೆಳವಣಿಗೆ ಹಂತ, ಮಲೇರಿಯಾ, ಪೈಲೇರಿಯಾ, ಡೆಂಘೀ, ಚಿಕೂನ್‌ಗುನ್ಯಾ, ಮೆದುಳುಜ್ವರ ಹರಡುವ ಸೊಳ್ಳೆಗಳಾದ ಅನಾಫಿಲಿಸ್, ಇಡೀಸ್ ಇಜಿಪ್ತಿಯಾ, ಕ್ಯೂಲೆಕ್ಸ್ ಹೆಣ್ಣು ಗಂಡು ಸೊಳ್ಳೆಗಳ ಬಗ್ಗೆ ಮತ್ತು ಹೆಣ್ಣು ಸೊಳ್ಳೆಗಳ ರೋಗ ಹರಡುವ ವಿಧಾನಗಳನ್ನು ಸವಿಸ್ತಾರವಾಗಿ ಪ್ರಾತ್ಯಕ್ಷಿಕೆ ಮೂಲಕ ಎಲ್ಲ ಶಿಕ್ಷಕರಿಗೆ ವಿವರಿಸಿದರು.

ಡಾ. ರೇಣುಕಾ ಕೊರವನವರ, ಮುಖ್ಯೋಪಾಧ್ಯಾಯ ಎಸ್.ಎಸ್. ಹಿರೇಮಠ ಎನ್.ಆರ್. ನಿಡಗುಂದಿ, ಜಿ.ವಿ. ಕೊಣ್ಣೂರ, ಎನ್.ಐ. ವಿಠ್ಠಪ್ಪನವರ, ಎ.ಎಂ. ಕಾಡದೇವರಮಠ, ಸಿ.ಎಫ್‌. ಕುಂಬಾರ, ಈರಣ್ಣ ಗೂಳನ್ನವರ, ಸಂತೋಷ ಅಂಬಿಗೇರ, ಬಸವರಾಜ ಕೌಜಗೇರಿ, ಎಂ.ಪಿ. ಶಿಗ್ಗಾವಂಕರ, ರೇಖಾ ಹಿರೇಹೊಳಿ, ಎಸ್.ಎಚ್. ಕಲೂತಿ, ಎಸ್.ಬಿ. ಕುರಹಟ್ಟಿ, ಎಂ.ಎಂ. ಮಸೂತಿಮನಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಶಿಕ್ಷಕರು ಇದ್ದರು.

PREV

Recommended Stories

ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
ವಿಠಲಗೌಡ ತಲೆಬುರುಡೆ ತಂದ ಬಂಗ್ಲೆಗುಡ್ಡೆಯಲ್ಲಿ ಇಂದು ಮಹಜರು?