ಮಂಗಳೂರು : ಮಂಗಳೂರಿನ ಜನ ಯಾವುದೇ ಹಾಸ್ಯಕ್ಕೆ ಸುಲಭದಲ್ಲಿ ನಗುವುದಿಲ್ಲ. ಹಾಸ್ಯಕ್ಕೆ ನಕ್ಕರು ಎಂದರೆ ಆ ಹಾಸ್ಯ ಅವರಿಗೆ ತಲುಪಿದೆ ಎಂದರ್ಥ. ಇಲ್ಲಿ ಯಶಸ್ವಿಯಾದರೆ, ಎಲ್ಲಿ ಹೋದರೂ ಯಶಸ್ವಿ ಆಗಬಹುದು ಎಂದುಕೊಳ್ಳಬಹುದು. ನನ್ನ ಹಾಸ್ಯಗಳಿಗೆ ಮಂಗಳೂರಿನ ಜನ ನಗುತ್ತಿದ್ದರು ಎಂದು ಖ್ಯಾತ ಕವಿ, ವಾಗ್ಮಿ ಎಚ್. ಡುಂಡಿರಾಜ್ ಹೇಳಿದರು.
ನನ್ನ ಜನ್ಮಭೂಮಿ ಉಡುಪಿ. ನನ್ನ ಕರ್ಮಭೂಮಿ ಮಂಗಳೂರು. 36 ವರ್ಷದ ಬ್ಯಾಂಕ್ ಉದ್ಯೋಗದಲ್ಲಿ 13 ವರ್ಷ ಮಂಗಳೂರಿನಲ್ಲಿ ಕಳೆದಿದ್ದೇನೆ. ನನ್ನ ಮೊದಲ ಕವನ ಸಂಕಲನ ಪ್ರಕಟವಾಗಿದ್ದು ಮಂಗಳೂರಿನಲ್ಲಿ. ನನ್ನ ಸಾಹಿತ್ಯಕ್ಕೆ ಮಂಗಳೂರಿನ ಸಾಹಿತ್ಯಾಸಕ್ತರ ಪ್ರೋತ್ಸಾಹ ಸಿಕ್ಕಿದೆ ಎಂದರು.
‘ಮಂಗಳೂರಿನವರು ನಗೋದಿಲ್ಲ ಎಂದು ಹೇಳಿದವರು ಯಾರು, ಸದಾ ನಗುವ ಸದಾನಂದ ಗೌಡರು ಎಲ್ಲಿಯವರು? ‘ದಕ್ಷಿಣ ಕನ್ನಡ ಜಿಲ್ಲೆಯವರು. ಸದಾ ತೆರೆದಿರುತ್ತಾರೆ ತಮ್ಮ 32 ಹಲ್ಲು. ನಗು ನಗುತ್ತಾ ಮಾತನಾಡುತ್ತಾರೆ ಶ್ರದ್ಧಾಂಜಲಿ ಸಭೆಯಲ್ಲೂ’ ಮತ್ತಿತರ ಹನಿಗವನ ವಾಚಿಸಿ ರಂಜಿಸಿದರು.ನನ್ನ ಸಾಹಿತ್ಯದ ಬಗ್ಗೆ ತಿಳಿದಿರುವ ಭುವನೇಶ್ವರಿ ಹೆಗಡೆಯವರದು ಗದ್ಯದಲ್ಲಿ ಹಾಸ್ಯ, ನನ್ನದು ಪದ್ಯದಲ್ಲಿ ಹಾಸ್ಯ. ಕೆಲವರದು ‘ಮದ್ಯದಲ್ಲಿ’ (ಮದ್ಯ ಕುಡಿದುಕೊಂಡು) ಹಾಸ್ಯ ಎಂದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಮಾತನಾಡಿ, ಡುಂಡಿರಾಜರ ಆತ್ಮಕಾದಂಬರಿ ಶ್ರೀಮಂತ ಪುಸ್ತಕ ಇದಾಗಿದೆ. ಒಳಗಡೆ ಇರುವ ಶ್ರೀಮಂತಿಕೆ ಓದಿದ ಬಳಿಕ ತಿಳಿಯಬಹುದು. ಕನ್ನಡದ ಮನಸ್ಸುಗಳು ಅಸ್ವಾದಿಸಬಹುದಾದ ಶುದ್ಧ ಕನ್ನಡದ ಸಾಹಿತ್ಯ ಇದು. ಪದಗಳನ್ನು ಹಾಸ್ಯಮಯವಾಗಿ ಮೂಡಿಸುವಲ್ಲಿ ಡುಂಡಿರಾಜರು ಸಿದ್ದಹಸ್ತರು ಎಂದರು.ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ಘಟಕದ ಅಧ್ಯಕ್ಷ ಡಾ.ಮಂಜುನಾಥ ರೇವಣ್ಕರ್ ಅಧ್ಯಕ್ಷತೆ ವಹಿಸಿದ್ದರು.