ಕನ್ನಡಪ್ರಭ ವಾರ್ತೆ ಹಾಸನ
ಕಾಂಪೌಂಡ್ ಗೋಡೆಗಳು ಮನೆಗಳ ಅಂಗಳವರೆಗೂ ಬಂದಿವೆ. ರೈತರು ತಮ್ಮ ಹೊಲಗಳಿಗೆ ಹೋಗುತ್ತಿದ್ದ ಕಾಲುದಾರಿಗಳು, ಬಂಡಿದಾರಿಗಳು ಬಂದ್ ಆಗಿವೆ. ದ್ಯಾವಲಾಪುರ ಮತ್ತು ಬೂವನಹಳ್ಳಿ ನಡುವಿನ ರಸ್ತೆ ಕೂಡ ಬಂದ್ ಆದರೆ ಸುತ್ತಮುತ್ತಲ ಗಾಡೇನಹಳ್ಳಿ, ಮೆಳಗೋಡು, ಚೌರಿ ಕೊಪ್ಪಲು, ಚಟ್ಟನಹಳ್ಳಿ ಹಳ್ಳಿಗಳ ಜನರಿಗೆ ಹಾಸನ ನಗರ ತಲುಪುವುದು ಕನಸಾಗುತ್ತದೆ. ಮೈಲನಹಳ್ಳಿಯ ನೀರಿನ ಕಟ್ಟೆಯ ಮೂಲೆಯನ್ನು ಪ್ರಾಧಿಕಾರವು ಕಬಳಿಸಿ ಗೋಡೆ ಕಟ್ಟಿದ ಪರಿಣಾಮ ನೀರಿನ ಸಂಚಾರವೇ ನಿಂತು, ರೈತರು ಬೆಳೆ ಬೆಳೆಯಲಾಗದ ಸ್ಥಿತಿಗೆ ತಲುಪಿದ್ದಾರೆ. ದ್ಯಾವಲಾಪುರದ ರೈತರು ತಮ್ಮ ಹೊಲಗಳಿಗೆ ಹೋಗಲು ಮಳೆನೀರಿನ ಗುಂಡಿಯ ಕಾಲುವೆಯಲ್ಲಿ ಬಗ್ಗಿ ತೆವಳುತ್ತಾ ಹೋಗಬೇಕಾದ ದುಸ್ಥಿತಿ ಎದುರಿಸುತ್ತಿದ್ದಾರೆ. ದನಕರುಗಳು ಸಹ ಆ ಗುಂಡಿಯಲ್ಲಿ ಬೆನ್ನು ಬಗ್ಗಿಸಿ ನುಸುಳುವಂತಾಗಿದೆ. ಅಭಿವೃದ್ಧಿಯ ಈ ದೃಶ್ಯವು ಕಣ್ಣೀರು ತರಿಸುತ್ತದೆ. ಹಿಂದಿನ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಪರ್ಯಾಯ ರಸ್ತೆ ನಿರ್ಮಾಣ ಅಗತ್ಯವಿದ್ದು, ಗೋಡೆಗೆ ದಾರಿ ಬಿಡಬೇಕು ಎಂದು ಸೂಚಿಸಿದ್ದರೂ, ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಕಿವಿಗೊಡಲಿಲ್ಲ. ಅವರು ನಮ್ಮ ಮಾತನ್ನು ಕೇಳಲಿಲ್ಲ, ನೋವನ್ನು ಅರ್ಥ ಮಾಡಿಕೊಳ್ಳಲಿಲ್ಲ ಎಂದು ಗ್ರಾಮಸ್ಥರು ಕೋಪ ವ್ಯಕ್ತಪಡಿಸಿದ್ದಾರೆ.ರೈತರು ಸರ್ಕಾರ ಮತ್ತು ಜಿಲ್ಲಾಡಳಿತದ ಮುಂದೆ ಮೂರು ಸ್ಪಷ್ಟ ಬೇಡಿಕೆಗಳನ್ನು ಇಟ್ಟಿದ್ದಾರೆ ವಿಮಾನ ನಿಲ್ದಾಣ ಕಾಂಪೌಂಡ್ ಹೊರಭಾಗದಲ್ಲಿ ಕನಿಷ್ಠ ೩೦ ಅಡಿ ಅಗಲದ ರಸ್ತೆ ನಿರ್ಮಿಸಬೇಕು. ಇನ್ನು ೧೫ ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ, ರೈತರು ಹಳ್ಳಿಗರ ಸಹಕಾರದಿಂದ ತಮ್ಮ ಹಕ್ಕಿನ ದಾರಿಯಲ್ಲಿ ನಿರ್ಮಿಸಲಾದ ಗೋಡೆಗಳನ್ನು ಸ್ವತಃ ಒಡೆದು ಹಾಕುವಂತಾಗುತ್ತದೆ. ಬೆಳೆ ನಷ್ಟ ಅನುಭವಿಸಿದ ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದಲ್ಲದೇ ನಮ್ಮ ಭೂಮಿ, ನಮ್ಮ ಬೆವರು, ನಮ್ಮ ಹಕ್ಕು. ಇವುಗಳೆಲ್ಲಾ ಗೋಡೆಯ ಒಳಗೆ ಬಂಧಿಯಾಗಿವೆ. ಈಗ ನಾವು ಮೌನವಾಗಿರುವುದಿಲ್ಲ ಎಂದು ರೈತರು ಎಚ್ಚರಿಸಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರಾದ ಪ್ರಮೀಳಾ, ನಾಗರಾಜು, ಹೊನ್ನೇಗೌಡ, ಶಂಕರ್ ಇತರರು ಉಪಸ್ಥಿತರಿದ್ದರು.