ವಿಶೇಷ ಅನುದಾನ ಬಿಡುಗಡೆಯಾಗಿದ್ದರೆ ರಾಜಕೀಯ ಬಿಟ್ಟುಬಿಡುವೆ

KannadaprabhaNewsNetwork | Published : Nov 5, 2024 12:33 AM

ಸಾರಾಂಶ

ರಾಜ್ಯಕ್ಕೆ ತೆರಿಗೆ ಹಣ ನೀಡುವಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದರೆ ಕಾಂಗ್ರೆಸ್‌ನವರು ರಾಜಕೀಯ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ. ಇದಕ್ಕೆ ಏನು ಹೇಳಬೇಕು?. ಐದು ವರ್ಷಗಳಿಗೊಮ್ಮೆ ಸಂವಿಧಾನದ ಪ್ರಕಾರ ಹಣಕಾಸಿನ ಆಯೋಗ ರಚನೆಯಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

ಹುಬ್ಬಳ್ಳಿ:

ಹಣಕಾಸು ಆಯೋಗವು ಶಿಫಾರಸು ಮಾಡಿದ್ದ ₹11,495 ವಿಶೇಷ ಅನುದಾನವನ್ನು ಕೇಂದ್ರ ಸರ್ಕಾರ ನೀಡಿರುವ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದರೆ ನಾನು ರಾಜಕೀಯ ಬಿಟ್ಟುಬಿಡುವೆ. ಒಂದು ವೇಳೆ ಕೊಡದೇ ಇದ್ದಿದ್ದರೆ ಜೋಶಿ ರಾಜಕೀಯ ಬಿಡುತ್ತಾರೆಯೇ? ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ? ಎಂದು ಪ್ರಶ್ನಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಣಕಾಸು ಆಯೋಗ ಶಿಫಾರಸು ಮಾಡಿದ್ದ ₹11,495 ಕೋಟಿ ವಿಶೇಷ ಅನುದಾನವನ್ನು ಈಗಾಗಲೇ ರಾಜ್ಯ ಸರ್ಕಾರಕ್ಕೆ ನೀಡಿದ್ದು, ಇದನ್ನು ಗ್ಯಾರಂಟಿಗೆ ಬಳಸಿಕೊಂಡಿದ್ದಾರೆ ಎಂಬ ಕೇಂದ್ರ ಸಚಿವ ಜೋಶಿ ಆರೋಪಕ್ಕೆ ತಿರುಗೇಟು ನೀಡಿದರು. ರಾಜ್ಯಕ್ಕೆ ತೆರಿಗೆ ಹಣ ನೀಡುವಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದರೆ ಕಾಂಗ್ರೆಸ್‌ನವರು ರಾಜಕೀಯ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ. ಇದಕ್ಕೆ ಏನು ಹೇಳಬೇಕು? ಐದು ವರ್ಷಗಳಿಗೊಮ್ಮೆ ಸಂವಿಧಾನದ ಪ್ರಕಾರ ಹಣಕಾಸಿನ ಆಯೋಗ ರಚನೆಯಾಗುತ್ತದೆ. ಅವರ ಶಿಫಾರಸಿನ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹೋಗಬೇಕಾದ ತೆರಿಗೆ ಬಗ್ಗೆ ನಿರ್ಧಾರವಾಗುತ್ತದೆ ಎಂದರು.

ವಿಶೇಷ ಅನುದಾನ ನೀಡಿಲ್ಲ:

15ನೇ ಹಣಕಾಸು ಆಯೋಗವು ಕೆಲವು ಶಿಫಾರಸು ಮಾಡಿ ರಾಜ್ಯಕ್ಕೆ ₹5495 ಕೋಟಿ ವಿಶೇಷ ಅನುದಾನ ಹಾಗೂ ರಾಜ್ಯಕ್ಕೆ ರಿಂಗ್ ರೋಡ್ ಹಾಗೂ ಕೆರೆಗಳ ಅಭಿವೃದ್ಧಿಗೆ ತಲಾ ₹3000 ಕೋಟಿ ಸೇರಿದಂತೆ ಒಟ್ಟು ₹11,495 ಕೋಟಿ ನೀಡಲು ಕೇಳಿದ್ದೆವು. ಆದರೆ, ಈ ವರೆಗೂ ಹಣ ಬಿಡುಗಡೆಗೊಳಿಸಿಲ್ಲ. ಇದನ್ನು ಕೇಂದ್ರ ಸಚಿವ ಜೋಶಿ ಕೇಂದ್ರಕ್ಕೆ ಕೇಳಬೇಕಲ್ಲವೆ? ಈ ವರೆಗೂ ಒಮ್ಮೆಯಾದರೂ ಅವರು ಕೇಳಿದ್ದಾರೆಯೇ ಎಂದು ಪ್ರಶ್ನಿಸಿದರು.

ತೆರಿಗೆ ಅನ್ಯಾಯದ ಬಗ್ಗೆ ಚರ್ಚೆ:

ತೆರಿಗೆ ವಿಚಾರದಲ್ಲಿ ಕೇಂದ್ರದಿಂದ ಅನ್ಯಾಯವಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, 16ನೇ ಹಣಕಾಸು ಆಯೋಗದ ತಂಡ ಬೆಂಗಳೂರಿಗೆ ಭೇಟಿ ನೀಡಿದಾಗ 15ನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ ಅನ್ಯಾಯವಾಗಿರುವ ಬಗ್ಗೆ ಗಮನ ಸೆಳೆದಿದ್ದೇವೆ. ಸುಮಾರು ₹4.50 ಲಕ್ಷ ಕೋಟಿಗೂ ಹೆಚ್ಚು ಮೊತ್ತವನ್ನು ವರ್ಷಕ್ಕೆ ತೆರಿಗೆ ನೀಡುತ್ತಿದ್ದೇವೆ. ಅದರಲ್ಲಿ ನಮಗೆ ವಾಪಸ್ ಬರುವುದು ₹55ರಿಂದ ₹60 ಸಾವಿರ ಕೋಟಿ ಮಾತ್ರ. ಇದು ನ್ಯಾಯವೇ ಎಂದು ಪ್ರಶ್ನಿಸಿದರು.

ಈ ರೀತಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ನಾವು ಹೋರಾಡುತ್ತಿದ್ದೇವೆ. ಬಿಜೆಪಿಯ ಪ್ರಹ್ಲಾದ್ ಜೋಶಿ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್‌ ಅವರು ಈ ಬಗ್ಗೆ ಒಮ್ಮೆಯಾದರೂ ಮಾತನಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಬಿಜೆಪಿ ಗ್ಯಾರಂಟಿ ವಿರೋಧಿ:

ಬಡವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ಬರಬಾರದೆಂಬ ತತ್ವದಲ್ಲಿ ಬಿಜೆಪಿಗೆ ನಂಬಿಕೆ ಇದೆ. ಬಿಜೆಪಿಯವರು ಗ್ಯಾರಂಟಿಗೆ ವಿರುದ್ಧವಾಗಿದ್ದಾರೆ. ಗ್ಯಾರಂಟಿ ಯೋಜನೆಗಳ ಮೂಲಕ ಎಲ್ಲ ಜಾತಿ-ಧರ್ಮದವರಿಗೆ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ತುಂಬುತ್ತಿದ್ದೇವೆ. ಬಿಜೆಪಿಯವರಿಗೆ ಸಮಾನತೆ ಬರಬಾರದು. ಬಡವರು ಬಡವರಾಗಿಯೇ ಉಳಿಯಬೇಕು. ಜನರಲ್ಲಿ ಶಕ್ತಿ ಇಲ್ಲದಿದ್ದರೆ ತಾನೇ ದುರುಪಯೋಗ ಮಾಡಿಕೊಳ್ಳಲು ಸಾಧ್ಯವಾಗುವುದು. ಆರ್ಥಿಕ, ಸಾಮಾಜಿಕ ಶಕ್ತಿ ಬಡವರಿಗೆ ಬರಬಾರದೆಂಬ ತತ್ವದಲ್ಲಿ ಬಿಜೆಪಿಗೆ ನಂಬಿಕೆ ಇದೆ ಎಂದರು.

ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದ ವೇಳೆ 600 ಭರವಸೆಗಳನ್ನು ನೀಡಿತ್ತು. ಅವುಗಳಲ್ಲಿ ಎಷ್ಟು ಈಡೇರಿಸಿದ್ದಾರೆ. ನಾವು 165 ಭರವಸೆ ಕೊಟ್ಟು 158 ಈಡೇರಿಸಿದ್ದಾಗಿ ಲೆಕ್ಕ ಕೊಡುತ್ತಿದ್ದೇವೆ. ಅವರು ಎಷ್ಟು ಭರವಸೆ ನೀಡಿ ಎಷ್ಟನ್ನು ಈಡೇರಿಸಿದ್ದಾರೆ ಎನ್ನುವ‌ ಲೆಕ್ಕ ಕೊಡುತ್ತಾರೆಯೇ? ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ಪ್ರತಾಪ್ ಸಿಂಹ ಕೋಮುವಾದಿ:

ಮುಖ್ಯಮಂತ್ರಿಗಳು ಸಂಪೂರ್ಣ ಮುಸ್ಲಿಂ ಆಗಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಪ್ರತಾಪ್‌ ಸಿಂಹ ಮಹಾನ್ ಕೋಮುವಾದಿ. ಇಂಥವರಿಂದ ಇನ್ನೇನು ನಿರೀಕ್ಷೆ ಮಾಡಲಾಗುತ್ತದೆ. ಅವರಿಗೆ ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಗೌರವವಿಲ್ಲ. ಕೋಮುವಾದ ಮಾಡುವುದೇ ಅವರ ಕಸಬು. ಸಮಾಜವನ್ನು ಜಾತಿ, ಧರ್ಮದ ಹೆಸರಿನಲ್ಲಿ ಒಡೆಯುವುದೇ ಅವರ ರಾಜಕಾರಣ. ಕೋಮುವಾದದಲ್ಲಿ ತೊಡಗಿ ರಾಜಕೀಯದಲ್ಲಿ ಬದುಕಲು ಹಾಗೂ ಮತ ಪಡೆಯಲು ಪ್ರಯತ್ನಿಸುತ್ತಾರೆ ಎಂದು ಕುಟುಕಿದರು.

Share this article