ಕೂಡ್ಲಿಗಿ: ಜಗತ್ತಿಗೆ ಆಧ್ಯಾತ್ಮಿಕ ಸಿಂಚನ, ಜ್ಞಾನ ನೀಡಿದ ನಮ್ಮ ದೇಶದಲ್ಲಿ ದೇವರೆಂಬ ಕಲ್ಪನೆ ಇದ್ದು, ನೋಡುವ ದೃಷ್ಟಿ ಪರಿಶುದ್ಧವಾಗಿದ್ದರೆ ದೇವರ ಮೂರ್ತಿ ಕಲ್ಲಾಗಿ ಕಾಣದೇ ದೇವರಾಗಿ ಕಾಣಬಹುದಾಗಿದೆ ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರು ತಿಳಿಸಿದರು.
ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಮಾತನಾಡಿ, ಜನರು ಧಾರ್ಮಿಕ ನಂಬಿಕೆಯಿಂದ ಇರುವುದರಿಂದ ಸಮಾಜದಲ್ಲಿ ಶಾಂತಿ, ಸಹನೆ, ಸಹಬಾಳ್ವೆ ನೆಲೆಸಿದೆ. ಎಲ್ಲ ಸಮುದಾಯದವರು ಸಹೋದರಂತೆ ಜೀವನ ಮಾಡುವಂತಾಗಬೇಕು ಎಂದರಲ್ಲದೆ, ಉಜ್ಜಯಿನಿ ಸದ್ಧರ್ಮ ಪೀಠಕ್ಕೆ ಸಂಪರ್ಕಕ್ಕೆ ನಿಂಬಳಗೆರೆ ಮತ್ತು ಮಂಗಾಪುರದಿಂದ ಉಜ್ಜಯಿನಿ ವರೆಗೆ ₹15 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ನನ್ನ ಧ್ಯೇಯವಾಗಿದೆ ಎಂದರು.
ಕೂಡ್ಲಿಗಿ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷ ಪ್ರಶಾಂತಸಾಗರ ಶಿವಾಚಾರ್ಯ, ಮಾಜಿ ಸಚಿವ ಬಿ. ಶ್ರೀರಾಮುಲು, ಸಂಡೂರು ಶಾಸಕಿ ಅನ್ನಪೂರ್ಣಾ ಇ. ತುಕಾರಾಮ್ ಮಾತನಾಡಿದರು. ಕೊಟ್ಟೂರಿನ ಡೋಣೂರು ಚಾನುಕೋಟಿ ಮಠದ ಪೀಠಾಧ್ಯಕ್ಷ ಡಾ. ಸಿದ್ಧಲಿಂಗ ಶಿವಾಚಾರ್ಯ, ಕಾನಾಮಡುಗು ದಾಸೋಹ ಮಠದ ಧರ್ಮಾಧಿಕಾರಿ ಶ್ರೀ ಐಮಡಿ ಶರಣಾರ್ಯರು, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ. ತಿಪ್ಪೇಸ್ವಾಮಿ, ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಹೊಸಮನೆ ಚಿದಾನಂದಪ್ಪ, ಮುಖಂಡರಾದ ಎಂ. ಗುರುಸಿದ್ಧನಗೌಡ, ಜಿಂಕಲ್ ನಾಗಮಣಿ, ಮಾಲತಿ ನಾಯಕ್, ಎಂ.ಬಿ. ಅಯ್ಯನಹಳ್ಳಿ ನಾಗಭೂಷಣ, ಅಜ್ಜನಗೌಡ, ಎನ್.ಎಂ. ರವಿಕುಮಾರ್, ಕರೇಗೌಡ ಸೇರಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ದೈವಸ್ಥರು ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಕೂಡ್ಲಿಗಿ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷ ಪ್ರಶಾಂತಸಾಗರ ಶಿವಾಚಾರ್ಯರಿಂದ ಗೋಪುರ ಕಳಸಾರೋಹಣ ನೆರವೇರಿದ್ದಲ್ಲದೆ, ಪುರೋಹಿತರ ನೇತೃತ್ವದಲ್ಲಿ ಹೋಮ, ಹವನ, ಪೂಜಾ ವಿಧಿ ವಿಧಾನಗಳು ಜರುಗಿದವು.ಅಡ್ಡಪಲ್ಲಕ್ಕಿ ಉತ್ಸವ: ಎಂ.ಬಿ. ಅಯ್ಯನಹಳ್ಳಿಯಲ್ಲಿ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ನಡೆಯಿತು.