ವಕ್ಫ್‌ ಮಸೂದೆ ಸಂವಿಧಾನ ವಿರೋಧಿಯಾಗಿದ್ದರೆ ಒಪ್ಪಲಾಗದು: ಯು.ಟಿ. ಖಾದರ್‌

KannadaprabhaNewsNetwork |  
Published : Mar 16, 2025, 01:46 AM IST
ಯು.ಟಿ. ಖಾದರ್‌ | Kannada Prabha

ಸಾರಾಂಶ

ಕೇಂದ್ರ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಕರಡು ಮಸೂದೆ ಮೇಲ್ನೋಟಕ್ಕೆ ಸಂವಿಧಾನಕ್ಕೆ ವಿರುದ್ಧವಾಗಿದೆ ಅಂತ ಕಾಣುತ್ತದೆ. ಮಸೂದೆಯು ಸಂವಿಧಾನ ವಿರೋಧಿಯಾಗಿದ್ದರೆ ಯಾರೂ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ.

ಕೋಮುವಾದಿಗಳನ್ನು ನಿರ್ಲಕ್ಷ್ಯ ಮಾಡದಿದ್ದರೆ ಹೀರೋಗಳಾಗುತ್ತಾರೆ: ಸ್ಪೀಕರ್‌

ಕನ್ನಡಪ್ರಭ ವಾರ್ತೆ ಮಂಗಳೂರು

ಕೇಂದ್ರ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಕರಡು ಮಸೂದೆ ಮೇಲ್ನೋಟಕ್ಕೆ ಸಂವಿಧಾನಕ್ಕೆ ವಿರುದ್ಧವಾಗಿದೆ ಅಂತ ಕಾಣುತ್ತದೆ. ಮಸೂದೆಯು ಸಂವಿಧಾನ ವಿರೋಧಿಯಾಗಿದ್ದರೆ ಯಾರೂ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಂಟಿ ಸಂಸದೀಯ ಸಮಿತಿಯ ಕೆಲವು ಸದಸ್ಯರ ಪ್ರಕಾರ ಈ ತಿದ್ದುಪಡಿ ಮಸೂದೆಯು ಸಂವಿಧಾನ ವಿರೋಧಿಯಾಗಿದೆ. ಯಾವುದೇ ಸರ್ಕಾರ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಕಾನೂನು ರೂಪಿಸಬೇಕು. ಆಗ ಮಾತ್ರ ಶಾಂತಿ- ಸೌಹಾರ್ದತೆ ನೆಲೆಯಾಗಲು ಸಾಧ್ಯ ಎಂದರು.

ಯಾರನ್ನೋ ಗುರಿಯಾಗಿಸಿ ಪೂರ್ವಾಗ್ರಹದಿಂದ ಕಾನೂನು ರೂಪಿಸಿದರೆ ಸಮಾಜದ ಎಲ್ಲರಿಗೂ ತೊಂದರೆಯಾಗುತ್ತದೆ ಎಂಬುದು ಈ ಹಿಂದೆ ಧ್ವನಿವರ್ಧಕ ನಿಷೇಧ ಜಾರಿ ಮಾಡಿದ ಸಂದರ್ಭದಲ್ಲೇ ಗೊತ್ತಾಗಿದೆ. ರಾತ್ರಿ 10 ಗಂಟೆ ಬಳಿಕ ಧ್ವನಿವರ್ಧಕ ಬಳಕೆ ಬಂದ್‌ ಮಾಡಿ ಜನರಲ್ಲಿ ಗೊಂದಲ ಉಂಟುಮಾಡಿದ್ದರು. ಅದರ ಪರಿಣಾಮ ಅಧಿಕಾರಿಗಳು ಯಕ್ಷಗಾನವನ್ನೇ ನಿಲ್ಲಿಸುವ ಕೆಲಸಕ್ಕೆ ಮುಂದಾಗುವಂತೆ ಮಾಡಿತು. ಕಾನೂನು ಮಾಡುವಾಗಲೇ ಆಲೋಚಿಸಿದ್ದರೆ ಈ ಎಲ್ಲ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ ಎಂದು ಖಾದರ್‌ ಹೇಳಿದರು.

ಕೋಮುವಾದಿಗಳ ನಿರ್ಲಕ್ಷಿಸಿ:

ಬಂಟ್ವಾಳದ ದಿಗಂತ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಕೆಲ ಜನಪ್ರತಿನಿಧಿಗಳು ಕೋಮು ಪ್ರಚೋದನಕಾರಿ ಭಾಷಣ ಮಾಡಿದರೂ ಜನರು ಉದ್ವಿಗ್ನತೆಗೆ ಒಳಗಾಗದೆ ಕೊನೆವರೆಗೂ ಶಾಂತಿ ಕಾಪಾಡಿದ್ದರು. ಅದೇ ರೀತಿ ಚಕ್ರವರ್ತಿ ಸೂಲಿಬೆಲೆ ವಿಭಜಿಸುವ ಮಾತನಾಡಿದರೂ ಜನರು ಅದಕ್ಕೆ ಮಹತ್ವ ನೀಡಿಲ್ಲ. ಕೊರಗಜ್ಜನ ಕ್ಷೇತ್ರದಲ್ಲಿ ಚುನಾವಣೆ ಸಮಯದಲ್ಲಿ ಇದಕ್ಕಿಂತ ಪ್ರಚೋದನಕಾರಿಯಾಗಿ ಮಾತನಾಡಿದ್ದರು. ದೇವರೇ ಅದಕ್ಕೆ ಶಿಕ್ಷೆ ನೀಡಿದ್ದಾರೆ. ಇಂಥ ಕೋಮುವಾದಿಗಳನ್ನು ಜನರು ನಿರ್ಲಕ್ಷ್ಯ ಮಾಡಬೇಕು, ಇಲ್ಲದಿದ್ದರೆ ಅಂಥವರು ಹೀರೋಗಳಾಗಲು ಅವಕಾಶವಾಗುತ್ತದೆ ಎಂದು ಖಾದರ್‌ ಸಲಹೆ ನೀಡಿದರು.

--------------ತೊಂದರೆ ನೀಡಿದವರೂ ಸಹಾಯ ಕೋರಿ ಬಂದಿದ್ದಾರೆ!

ಈ ಹಿಂದೆ ನನಗೆ ತೊಂದರೆ ನೀಡಿದವರನ್ನೂ ಕ್ಷಮಿಸಿ ಅವರಿಗೂ ಸಹಾಯ ಮಾಡಿದ್ದೇನೆ. ಸಹಾಯ ಪಡೆದವರೇ ನಂತರ, ಜಾಲತಾಣಗಳಲ್ಲಿ ನನ್ನನ್ನು ಟೀಕೆ ಮಾಡುತ್ತಿದ್ದುದನ್ನು ಹೇಳಿಕೊಂಡಿದ್ದಾರೆ. ದ್ವೇಷ, ಅಸೂಯೆ ರಾಜಕಾರಣ ಯಾವುದಕ್ಕೂ ಪರಿಹಾರ ಅಲ್ಲ. ಸೌಹಾರ್ದತೆ ನೆಲೆಸಲು ಯಾವ ಹಂತಕ್ಕೂ ಹೋಗಲು ನಾನು ತಯಾರಾಗಿದ್ದೇನೆ ಎಂದ ಯು.ಟಿ. ಖಾದರ್‌, ಈಗ ಸ್ಪೀಕರ್‌ ಹುದ್ದೆಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದೇನೆ. ನಾಳೆ ದೊಡ್ಡ ಹುದ್ದೆ ದೊರೆತರೂ ಸಂತೋಷ. ಇನ್ನು ಸಾಕು ನಿವೃತ್ತಿಯಾಗಿ ಎಂದು ಜನರು ಹೇಳಿದರೆ ಅದನ್ನೂ ಪ್ರೀತಿಯಿಂದ ಸ್ವೀಕರಿಸುತ್ತೇನೆ ಎಂದು ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ