ಸಾರ್ವಜನಿಕರಿಂದ ದೂರು ಬಂದರೆ ಅಧಿಕಾರಿಗಳ ವಿರುದ್ಧ ಕ್ರಮ: ಲೋಕಾಯುಕ್ತ ಇನ್ಸ್‌ಪೆಕ್ಟರ್ ಲೋಹಿತ್ ಕುಮಾರ್

KannadaprabhaNewsNetwork | Published : Nov 14, 2024 12:49 AM

ಸಾರಾಂಶ

ಒಂದೊಮ್ಮೆ ಸಾರ್ವಜನಿಕರಿಂದ ದೂರು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಇನ್ಸ್‌ಪೆಕ್ಟರ್ ಲೋಹಿತ್ ಕುಮಾರ್ ಎಚ್ಚರಿಕೆ ನೀಡಿದರು. ಹನೂರಿನಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹನೂರು

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿಗದಿತ ಸಮಯದಲ್ಲಿ ಮಾಡಿಕೊಡಬೇಕು, ಒಂದೊಮ್ಮೆ ಸಾರ್ವಜನಿಕರಿಂದ ದೂರು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಇನ್ಸ್‌ಪೆಕ್ಟರ್ ಲೋಹಿತ್ ಕುಮಾರ್ ಎಚ್ಚರಿಕೆ ನೀಡಿದರು.

ಹನೂರು ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ಲೋಕಾಯುಕ್ತ ಪೊಲೀಸರಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ಹನೂರು ತಾಲೂಕು ವ್ಯಾಪ್ತಿಯ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ನಿಗದಿತ ಕಾಲಕ್ಕೆ ಆಗದೆ ಇರುವ ಬಗ್ಗೆ ಹಲವಾರು ದೂರುಗಳು ಬರುತ್ತಿವೆ. ಮುಂದಿನ ದಿನಗಳಲ್ಲಿ ಕೆಲಸ ಕಾರ್ಯಗಳನ್ನು ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗುವುದು ಎಂದರು. ಪಟ್ಟಣದ ನಿವಾಸಿ ಶ್ರೀನಿವಾಸ್ ಗುಪ್ತ ಎಂಬವರು ದೂರು ನೀಡಿ ಪಪಂ ವ್ಯಾಪ್ತಿಯಲ್ಲಿ ನಮ್ಮ ನಿವೇಶನವಿದ್ದು ಖಾತೆ ಮಾಡಿಕೊಡಲು ಮುಖ್ಯಾಧಿಕಾರಿ ಅಶೋಕ್ 1ಲಕ್ಷ ರು.ಕೇಳುತ್ತಿದ್ದಾರೆ. ನಮಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು. ಈ ಸಂಬಂಧ ಸ್ಥಳದಲ್ಲಿದ್ದ ಪಪಂ ಅಧಿಕಾರಿಗಳಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಪಡೆದುಕೊಂಡು ಶೀಘ್ರವೇ ಇ-ಸ್ವತ್ತು ಮಾಡಿಕೊಡುವಂತೆ ಸೂಚನೆ ನೀಡಿದರು.

10ನೇ ವಾರ್ಡಿನ ನಿವಾಸಿ ಮಂಜೇಶ್ ಎಂಬವರು ಪಟ್ಟಣದ ಬಂಡಳ್ಳಿ ರಸ್ತೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಚರಂಡಿ ಮುಚ್ಚಿಕೊಂಡಿರುವುದರಿಂದ ಕೊಳಚೆ ನೀರು ಸರಾಗವಾಗಿ ಮುಂದೆ ಹೋಗದೆ ಸಾಂಕ್ರಾಮಿಕ ರೋಗ ಭೀತಿಯಲ್ಲಿ ನಿವಾಸಿಗಳು ಆತಂಕದಲ್ಲಿ ವಾಸ ಮಾಡುತ್ತಿದ್ದಾರೆ. ಈ ಬಗ್ಗೆ ಕಳೆದ ಎರಡು ವರ್ಷಗಳಿಂದ ದೂರು ನೀಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು. ಈ ಬಗ್ಗೆ ಪಪಂ ಆರೋಗ್ಯ ನಿರೀಕ್ಷಕರನ್ನು ತರಾಟೆಗೆ ತೆಗೆದುಕೊಂಡು ಇನ್ನು ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ನಿಮ್ಮ ಮೇಲೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಲೊಕ್ಕನಹಳ್ಳಿ ಗ್ರಾಪಂ ಪಿಡಿಒ ರಘುನಾಥ್ ಅವರು ನರೇಗಾ ಯೋಜನೆ ಅಡಿ ಕಾಮಗಾರಿ ಮಾಡದೆ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಕೃಷ್ಣ ಎಂಬವರು ದೂರು ನೀಡಿದರೆ, ಮತ್ತೊಬ್ಬರು ನರೇಗಾ ಯೋಜನೆಯಡಿ ಕಾಮಗಾರಿ ಪೂರ್ಣಗೊಳಿಸಿದ್ದರೂ ನಮಗೆ ಹಣ ಪಾವತಿ ಮಾಡಿಲ್ಲ ಎಂದು ದೂರು ನೀಡಿದರು. ಈ ವೇಳೆ ಪಿಡಿಒ ಮಾತನಾಡಿ, ಅಭಿಯಂತರರು ಬಿಲ್ ಬರೆದು ಕೊಟ್ಟರೆ ಹಣ ಪಾವತಿ ಮಾಡುವುದಾಗಿ ತಿಳಿಸಿದರು. ಪಪಂ ನಿವೃತ್ತ ನೀರು ಗಂಟಿ ವೆಂಕಟೇಗೌಡ ಮಾತನಾಡಿ, ನಾನು ಹನೂರು ಪಪಂಯಲ್ಲಿ 40 ವರ್ಷಗಳ ಸೇವೆ ಸಲ್ಲಿಸಿದ್ದೇನೆ. ನಿವೃತ್ತಿಯಾಗಿ 18 ತಿಂಗಳು ಕಳೆದರೂ ನನ್ನ ಪೆನ್ಷನ್ ಹಣ ಕೊಡದೆ ಸತಾಯಿಸುತ್ತಿದ್ದಾರೆ. ಜೀವನ ನಿರ್ವಹಣೆಗೆ ತೊಂದರೆ ಆಗಿದೆ. ಆರೋಗ್ಯ ಸಹ ಸರಿ ಇಲ್ಲದ ಕಾರಣ ಕಚೇರಿಗೆ ಅಲೆಯುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಮುಖ್ಯ ಅಧಿಕಾರಿಗಳು ನನಗೆ ಪೆನ್ಷನ್ ಹಣ ಮಾಡಿಕೊಡಲು. ಈ ಕೂಡಲೇ ನನಗೆ ನ್ಯಾಯ ಒದಗಿಸಿ ಕೊಡುವಂತೆ ಲೋಕಾಯುಕ್ತ ಅಧಿಕಾರಿಗಳಿಗೆ ಮನವಿ ಮಾಡಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಟ್ಟಡಕ್ಕೆ ವಿದ್ಯುತ್ ನಿರಪೇಕ್ಷಣ ಪತ್ರ ನೀಡಲು ಮುಖ್ಯಾಧಿಕಾರಿ ಅಶೋಕ್ ಸತಾಯಿಸುತ್ತಿದ್ದು ಸಂಬಂಧಪಟ್ಟ ದಾಖಲಾತಿಗಳನ್ನು ಒದಗಿಸಿಕೊಟ್ಟರೂ ಈವರೆಗೂ ನೀಡಿಲ್ಲ. ಈ ಕೂಡಲೇ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಿವೃತ್ತ ಪೊಲೀಸ್ ಅಧಿಕಾರಿ ದೂರು ನೀಡಿದರು.

ಮುಖ್ಯಾಧಿಕಾರಿ ಗೈರು ಹಾಜರಾಗಿದ್ದರಿಂದ ಕಾರಣ ಕೇಳಿ ನೋಟಿಸ್ ನೀಡಿ ಎಂದು ಲೋಕಾಯುಕ್ತ ಪೊಲೀಸ್ ಶ್ರೀನಿವಾಸ್ ಅವರಿಗೆ ಸೂಚನೆ ನೀಡಿದರು. ರೈತ ಮುಖಂಡ ಕೂಡ್ಲೂರು ವೆಂಕಟೇಶ್ ಮಾತನಾಡಿ, ನೆರೆಯ ಅಂತಾರಾಜ್ಯ ತಮಿಳುನಾಡಿನ ಈರೋಡ್ ಜಿಲ್ಲೆಗೆ ಕೆಎಸ್ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಿಕೊಡುವಂತೆ ಈ ಹಿಂದೆ ವೀರಪ್ಪನ್ ಪೋಲರ್ ಚೆಕ್ ಪೋಸ್ಟ್ ಸೇತುವೆ ಬಳಿ ಕರ್ನಾಟಕ ರಾಜ್ಯ ಸಾರಿಗೆ ವಾಹನವನ್ನು ಸುಟ್ಟು ಹಾಕಿದ್ದು ಅಲ್ಲಿಂದ ಇಲ್ಲಿಯವರೆಗೆ ಆ ವಾಹನವನ್ನು ಮತ್ತೆ ಸಾರಿಗೆ ಅಧಿಕಾರಿಗಳು ಬಿಟ್ಟಿರುವುದಿಲ್ಲ. ಈ ಭಾಗದ ರೈತರಿಗೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಮತ್ತೆ ಪುನರ್ ವಾಹನ ಪ್ರಾರಂಭಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದರು.

ಬೈರನತ್ತ ಗ್ರಾಮದ ಮಾದೇಶ ಸರ್ಕಾರಿ ಬಂಡಿ ದಾರಿ ಇದ್ದರೂ ನಮ್ಮ ಜಮೀನನ್ನು ಒತ್ತುವರಿ ಮಾಡಿಕೊಂಡು ಕೆಲವರು ತೊಂದರೆ ನೀಡುತ್ತಿದ್ದಾರೆ. ಈ ಸಂಬಂಧ ಕೋರ್ಟ್‌ನಲ್ಲಿ ಬಂಡಿದಾರಿ ಬಿಡಿಸಿ ಕೊಡುವಂತೆ ಆದೇಶವಿದ್ದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರು ನೀಡಿದರು. ಇನ್ನು ಮಂಗಲ ಗ್ರಾಪಂಗೆ ಸಂಬಂಧಿಸಿದಂತೆ 2 ದೂರುಗಳು, ಪಪಂ ಸಂಬಂಧಿಸಿದಂತೆ 4, ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ 2 ದೂರುಗಳು ದಾಖಲಾದವು.

ಪಟ್ಟಣ ಪಂಚಾಯಿತಿ ಹೆಚ್ಚು ದೂರುಗಳು:

ಪಟ್ಟಣದ ಕೇಂದ್ರ ಸ್ಥಾನದಲ್ಲಿ ಪಪಂಯಲ್ಲಿ ಸಾರ್ವಜನಿಕರಿಗೆ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಸಾರ್ವಜನಿಕರು ಮತ್ತು ಪಟ್ಟಣದ ನಾಗರಿಕರು ಲೋಕಾಯುಕ್ತ ಅಧಿಕಾರಿಗಳಿಗೆ ದೂರುಗಳ ಸರಮಾಲೆಯನ್ನೇ ತಿಳಿಸಿದರು. ಹಣ ನೀಡಿದರೆ ಮಾತ್ರ ಕೆಲಸ ಆಗುತ್ತದೆ. ಇಲ್ಲದಿದ್ದರೆ ಸಾರ್ವಜನಿಕರಿಗೆ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು 10 ಅರ್ಜಿ ಅಹವಾಲುಗಳನ್ನು ಲೋಕಾಯುಕ್ತ ಅಧಿಕಾರಿಗಳಿಗೆ ಸಲ್ಲಿಸಿದರು.

ತಹಸೀಲ್ದಾರ್ ವೈಕೆ ಗುರುಪ್ರಸಾದ್, ಶಿರಸ್ತೇದಾರ್ ನಾಗೇಂದ್ರ, ತಾಪಂ ವ್ಯವಸ್ಥಾಪಕ ರಮೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ್, ಅಬಕಾರಿ ಸಬ್ ಇನ್ಸ್‌ಪೆಕ್ಟರ್ ಸಿದ್ದಯ್ಯ, ಡಿಆರ್‌ಎಫ್‌ಒ ಗಿರೀಶ್, ಪಪಂ ಸಿಬ್ಬಂದಿ ಭರತ್, ಪ್ರತಾಪ್ , ಅಗ್ನಿಶಾಮಕ ಅಧಿಕಾರಿ ಪ್ರಸಾದ್ ನಾಯಕ್, ಲೋಕಾಯುಕ್ತ ಸಿಬ್ಬಂದಿ ನಾಗೇಂದ್ರ ಹಾಜರಿದ್ದರು.

Share this article