ಸ್ಮರಣೆ ಕಾರ್ಯಕ್ರಮ । ಫ್ಲಾರೆನ್ಸ್ ನೈಟಿಂಗೇಲ್ ಡೇ ದಿನ ಆಚರಣೆ
ತಾಯಿಯಂತೆ ಉದಾತ್ತವಾದ ಮನೋಭಾವ, ಮಾತೃ ಹೃದಯ, ತಾಯಿತನ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಇರಲೇಬೇಕು. ವೈದ್ಯಕೀಯ ಹಾಗೂ ನರ್ಸಿಂಗ್ ಸೇವೆಯಲ್ಲಿ ಇರುವಾಗ ಕರ್ತವ್ಯದಲ್ಲಿ ಒಲವು, ಕಲಿಕೆಯ ತುಡಿತದಿಂದ ಗಳಿಸಿದ ಜ್ಞಾನದ ಅನಾವರಣ ಮತ್ತು ಕರ್ತವ್ಯದಲ್ಲಿ ಬದ್ಧತೆ ಹಾಗೂ ನ್ಯಾಯ ಒದಗಿಸುವ ಮನೋಭಾವ ಇದ್ದಲ್ಲಿ ಶುಶ್ರೂಷಕ ವೃತ್ತಿಯಲ್ಲಿ ಆತ್ಮತೃಪ್ತಿ ಮತ್ತು ಸೇವಾ ಕಾರ್ಯದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಧನಶೇಖರ್ ಸಲಹೆ ನೀಡಿದರು.
ಪಟ್ಟಣದ ಚಿಟ್ಟನಹಳ್ಳಿ ಬಡಾವಣೆಯಲ್ಲಿ ಇರುವ ಸರ್ಕಾರಿ ಶುಶ್ರೂಷಕ ಕಾಲೇಜಿನಲ್ಲಿ ಆಯೋಜನೆ ಮಾಡಿದ್ದ ಫ್ಲಾರೆನ್ಸ್ ನೈಟಿಂಗೇಲ್ ಡೇ ದಿನದ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಶುಶ್ರೂಷಕ ವೃತ್ತಿಯಲ್ಲಿ ವಿಫುಲ ಅವಕಾಶಗಳು ಇದ್ದು, ಹಲವಾರು ವಿಭಾಗಗಳಲ್ಲಿ ಶುಶ್ರೂಷಕರ ಸೇವೆ ಅಗತ್ಯವಾಗಿದ್ದು, ಇವುಗಳಲ್ಲಿ ತೊಡಗಿಸಿಕೊಳ್ಳಲು ಕಲಿಕೆಯಲ್ಲಿ ತೋರುವ ತುಡಿತ ಮತ್ತು ಸಿಕ್ಕ ಅವಕಾಶದಲ್ಲಿ ಜ್ಞಾನದ ಅನಾವರಣ ಪ್ರಮುಖವಾಗಿರುತ್ತದೆ ಎಂದು ಹೇಳಿದರು.ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್ ಕುಮಾರ್ ಮಾತನಾಡಿ, ಪರಿಪೂರ್ಣ ವ್ಯಕ್ತಿ ನೀಡುವ ಹಿತನುಡಿಗಳು ಒಂದು ಪುಸ್ತಕ ಓದಿ ಗಳಿಸುವ ಜ್ಞಾನಕ್ಕೆ ಸಮನಾಗಿರುತ್ತದೆ. ವಿದ್ಯಾರ್ಥಿಗಳು ವ್ಯಾಸಂಗ ಮುಗಿಸುವ ತನಕ ಕಲಿಕೆಗೆ ಅಗತ್ಯವಾದ ಮಾಹಿತಿ ಪಡೆಯಲು ಮತ್ತು ಕೆಲವು ನಿಮಿಷಗಳು ಮಾತ್ರ ಮೊಬೈಲ್ ಬಳಸಬೇಕು, ಕಲಿಕೆಯ ಸಮಯದಲ್ಲಿ ಮೊಬೈಲ್ ಬಳಕೆ ಹೆಚ್ಚಾದಲ್ಲಿ ಯಶಸ್ಸುಗಳಿಸಲು ಅಸಾಧ್ಯ ಎಂದು ಹೇಳಿದರು.
ನರ್ಸಿಂಗ್ ಸಮಸ್ಯೆಗಳು ಮತ್ತು ಸವಾಲುಗಳನ್ನು ಕೇಳುವವರೇ ಇಲ್ಲ. ಇಂತಹ ಸನ್ನಿವೇಶದಲ್ಲಿ ನಮ್ಮಗಳ ಒಳಿತಿಗಾಗಿ ಮತ್ತು ಮುಂದಿನ ದಿನಗಳಲ್ಲಿ ಸಮಸ್ಯೆಗಳಾದ ಸಂದರ್ಭಕ್ಕೆ ಪ್ರಯೋಜನ ಬರುವಂತಹ ಒಂದು ರಾಷ್ಟ್ರ ಒಂದು ನರ್ಸಿಂಗ್ ನೋಂದಣಿ ಚಾಲ್ತಿಯಲ್ಲಿದ್ದು, ತಪ್ಪದೇ ಎಲ್ಲರೂ ನೋಂದಣಿ ಮಾಡಿಸಿಕೊಳ್ಳಿ ಎಂದರು.
ವಿದ್ಯಾರ್ಥಿನಿ ಅಕ್ಷತ ಸ್ವಾಗತಿಸಿದರು. ತೇಜಸ್ವಿನಿ ಮತ್ತು ಚೈತ್ರ ನಿರೂಪಿಸಿದರು