ಕನ್ನಡಪ್ರಭವಾರ್ತೆ ಚಿತ್ರದುರ್ಗಪ್ರಶಿಕ್ಷಣಾರ್ಥಿಗಳಲ್ಲಿ ದೃಢತೆಯಿದ್ದರೆ ಸಾಧನೆ ಕ್ಷಿತಿಜ ವಿಸ್ತಾರಗೊಳ್ಳುತ್ತದೆ. ಸಮಸ್ಯೆಗಳು ಎದುರಾದರೂ ಎದೆಗುಂದದೇ ಇದ್ದರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ ಎಂದು ಪ್ರವಚಕ ಎನ್.ಜೆ. ಗುರುಪ್ರಸಾದ್ ತಿಳಿಸಿದರು.ನಗರದ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಚಿನ್ಮಯ ಮಯೂರ ಯೋಗ ಕ್ರೀಡಾ ಸಾಂಸ್ಕೃತಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕರ್ನಾಟಕ ಸಂಭ್ರಮ-50 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರವಚಕ ಎ. ಹನುಮಂತರಾಯ ಮಾತನಾಡಿ, ಟಿ.ಎಸ್. ವೆಂಕಣ್ಣಯ್ಯ ಅವರು ಜ್ಞಾನಪೀಠ ಪ್ರಶಸ್ತಿ ಪರಸ್ಕೃತ ಕುವೆಂಪುರವರಿಗೆ ಗುರುಗಳಾಗಿದ್ದರು. ಶ್ರೀ ರಾಮಾಯಣ ದರ್ಶನಂ ಮಹಾಕೃತಿಯನ್ನು ಟಿ.ಎಸ್. ವೆಂಕಣ್ಣಯ್ಯನವರಿಗೆ ಅರ್ಪಿಸಿದ್ದಾರೆ. ಮುಂದೆಂದೂ ಕನ್ನಡಿಗರು ಮರೆಯಲಾರದ ಸಾಹಿತ್ಯ ರಚಿಸಿದ ಗುರುಶಿಷ್ಯರ ಸಂಬಂಧವನ್ನು ಗಟ್ಟಿಗೊಳಿಸಿದ್ದಾರೆ ಎಂದರು.
ಉಪನ್ಯಾಸಕ ಡಿ. ನರಸಿಂಹಪ್ಪ, ಟಿ. ಗೋವಿಂದಪ್ಪ, ಬಿ.ಜಿ. ಹೇಮಲತ, ಎಸ್.ಜಿ. ಸರಸ್ವತಿ, ದೈಹಿಕ ಶಿಕ್ಷಣ ಬೋಧಕ ಈ. ರಘುನಾಥ, ಶೈಕ್ಷಣಿಕ ತಂತ್ರಜ್ಞಾನದ ಬೋಧಕಿ ಕೆ.ಬಿ. ಪುಷ್ಪಲತ, ಚಿತ್ರಕಲಾ ಬೋಧಕಿ ಸವಿತಾ ಪೂಜಾರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ಯೋಗ ತರಬೇತುದಾರ ಎಂ.ಬಿ. ಮುರುಳಿ, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ, ಸಂಸ್ಥೆಯ ನಿರ್ದೇಶಕಿ ಹಾಗೂ ಯೋಗಶಿಕ್ಷಕಿ ಎಸ್.ಕೆ. ಸುನಿತ ತರಬೇತಿ ನೀಡಿದರು. ಮದಕರಿಪುರದ ಸ.ಹಿ.ಪ್ರಾ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿ ಸೈಯದ್ ಅಯಾನ್ ಕನ್ನಡನಾಡಿನ 224 ವಿಧಾನಸಭಾ ಕ್ಷೇತ್ರಗಳು, ಜಿಲ್ಲೆಗಳು, ಇಲ್ಲಿಯವರೆಗಿನ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗಳ ಹೆಸರುಗಳು, ನದಿಗಳು, ಕೇಂದ್ರಾಡಳಿತ ಪ್ರದೇಶಗಳು, ರಾಶಿ ನಕ್ಷತ್ರಗಳು, ಮಾಸ ಮತ್ತು ತಿಥಿಗಳು ಹಲವಾರು ವಿಷಯಗಳ ಬಗ್ಗೆ ಜ್ಞಾನಪೂರ್ಣ ವಿದ್ವತ್ತನ್ನು ಪ್ರದರ್ಶಿಸಿದನು.