ಜೀವನ ಬದ್ಧತೆ ಇಲ್ಲದಿದ್ದರೆ ಕಾರ್ಯಸಿದ್ಧಿಯಾಗದು: ಡಾ.ಸತೀಶ್ ಜಿಗಜಿನ್ನಿ

KannadaprabhaNewsNetwork |  
Published : Jun 04, 2024, 12:30 AM IST
ಕೆ.ಎಸ್.ಆರ್.ಟಿ.ಸಿ. ಕಾಲನಿಯಲ್ಲಿರುವ ಎಕ್ಸಲಂಟ್ ಪ. ಪೂ. ವಿಜ್ಞಾನ ಕಾಲೇಜಿನಲ್ಲಿ ೨೦೨೪-೨೫ ನೇ ಸಾಲಿನ ಪದವಿಪೂರ್ವ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಜೀವನ ಬದ್ಧತೆ ಇಲ್ಲದಿದ್ದರೆ ಕಾರ್ಯಸಿದ್ಧಿಯಾಗದು ಎಂದು ಬಿಎಲ್‌ಡಿಇ ವೈದ್ಯಕೀಯ ವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ.ಸತೀಶ ಜಿಗಜಿನ್ನಿ ಎಂದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕಲಿಕೆಯೆಂಬುದು ನಿರಂತರವಾದದ್ದು. ಅದಮ್ಯ ಆಸಕ್ತಿಯೇ ಕಲಿಕೆಗೆ ಪ್ರೇರಕ ಶಕ್ತಿ. ಕಾಲೇಜಿಗೆ ಬಂದ ಉದ್ದೇಶ ಮರೆತರೆ ಗುರಿ ಮುಟ್ಟಲಾಗದು. ಜೀವನ ಬದ್ಧತೆ ಇಲ್ಲದಿದ್ದರೆ ಕಾರ್ಯಸಿದ್ಧಿಯಾಗದು ಎಂದು ಬಿಎಲ್‌ಡಿಇ ವೈದ್ಯಕೀಯ ವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ.ಸತೀಶ ಜಿಗಜಿನ್ನಿ ಹೇಳಿದರು.

ನಗರದ ಕೆಎಸ್ಆರ್ಟಿಸಿ ಕಾಲನಿಯಲ್ಲಿನ ಎಕ್ಸಲಂಟ್ ಪ.ಪೂ ವಿಜ್ಞಾನ ಕಾಲೇಜಿನಲ್ಲಿ ೨೦೨೪-೨೫ ನೇ ಸಾಲಿನ ಪದವಿಪೂರ್ವ ತರಗತಿಗಳ ಪ್ರಾರಂಭೋತ್ಸವದಲ್ಲಿ ಮಾತನಾಡಿದರು. ಕೇವಲ ಯೋಚನೆಗಳಿಂದ ಗುರಿಮುಟ್ಟಲಾಗದು. ಶ್ರದ್ಧೆ, ಸಮರ್ಪಣಾಭಾವ, ಧೃಡ ನಿರ್ಧಾರ, ಉತ್ಕಟ ಬಯಕೆ, ಪ್ರಯತ್ನದಿಂಧ ಯಶಸ್ಸು ಕಾಣಬಹುದು. ಹಾಗೆಯೇ ವಿದ್ಯಾರ್ಥಿ ಜೀವನದಲ್ಲಿ ಕಷ್ಟ-ನಷ್ಟಗಳನ್ನು ತಾಳಿಕೊಂಡು ಸಹಿಷ್ಣುತಾ ಭಾವ ಹೊಂದಿ ಯಶಸ್ಸು ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.

ಯುವ ಬರಹಗಾರ ಮಂಜುನಾಥ ಜುನಗೊಂಡ ಮಾತನಾಡಿ, ಜ್ಞಾನ ಜಗತ್ತಿನ ಯಾವುದೇ ಮೂಲಗಳಿಂದ ಬಂದರೂ ನಾವು ಸ್ವೀಕರಿಸಬೇಕು. ಹಲವು ಹಳ್ಳಗಳು ಸೇರಿ ಸಮುದ್ರವಾದಂತೆ ಶಿಕ್ಷಕರು, ಪಾಲಕರು, ಹಿರಿಯರು ಹೇಳುವ ಅನುಭವಾಮೃತದ ನುಡಿಗಳನ್ನು ಪಾಲಿಸಿ ವಿದ್ಯಯ ಪರ್ವತವಾಗಿ ದೇಶಕ್ಕೆ ಒಳ್ಳೆಯ ನಾಗರಿಕರಾಗಬೇಕು. ಈ ಜಗತ್ತು ಇರುವುದು ನನ್ನ ಸಾಧನೆಗಾಗಿ ಎನ್ನುವ ಉತ್ಸಾಹ ಸದಾ ತುಂಬಿರಬೇಕು ಎಂದರು.

ದ್ರೋಣ ಕರಿಯರ್ ಅಕಾಡೆಮಿಯ ಮುಖ್ಯಸ್ಥ ಕಲ್ಮೇಶ ಆಸಂಗಿ ಮಾತನಾಡಿ, ಒತ್ತಾಯದಿಂದ ಯಾವುದನ್ನು ಕಲಿಯಲಾಗದು. ಕಲಿಕೆಗೆ ಸ್ವಪ್ರೇರಣೆಯೇ ಮುಖ್ಯ, ಕಾಲೇಜು ಶಿಕ್ಷಣವೆಂದರೆ ಅಲ್ಲಿ ಹಲವಾರು ಆಯ್ಕೆಗಳಿರುತ್ತವೆ. ಉತ್ತಮರ ಒಡನಾಟ ಹೊಂದಿ ಕಲಿತ ಶಾಲೆಗೆ, ತಂದೆ-ತಾಯಿಗೆ, ಬೆಳೆಸಿದ ಊರಿಗೆ ಹೂ-ತರುವ ಸಾಧನೆ ಮಾಡಬೇಕು ಎಂದು ಹೇಳಿದರು.

ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಮಾತನಾಡಿ, ಉತ್ತಮ ಆರಂಭವಾದರೆ ಅರ್ಧಕಾರ್ಯ ಮುಗಿದಂತೆಯೇ. ಗುರಿಯ ಜೊತೆಗೆ ಗುರಿಮುಟ್ಟುವ ಮಾರ್ಗವೂ ಕೂಡಾ ಪ್ರಾಮಾಣಿಕತೆಯಿಂದ ಕೂಡಿರಬೇಕು. ಗುರಿಯಿಂದ ವಿಚಲಿತರಾಗುವಂತೆ ಪ್ರೇರೇಪಿಸಲು ಅನೇಕ ವಿಷಯಗಳಿದ್ದರೂ ಅವುಗಳನ್ನು ಮೀರಿ ನಮ್ಮ ನಡೆ ನೇರವಾಗಿ ಗುರಿಯ ಕಡೆ ಇರಬೇಕು. ಪಠ್ಯಕ್ರಮದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯೂ ಕೂಡ ಕ್ರಮಬದ್ಧವಾಗಿರಬೇಕು ಎಂದರು.

ಈ ಸಂದರ್ಭದಲ್ಲಿ ಸೇತುಬಂಧ ವರ್ಗಗಳಲ್ಲಿ ಆಯೋಜಿಸಿದ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸಾನ್ನಿಧ್ಯ ಅಥರ್ಗಾ ಗುರುದೇವಾಶ್ರಮದ ಈಶಪ್ರಸಾದ ಮಹಾಸ್ವಾಮಿಜೀ ವಹಿಸಿದ್ದರು. ಪ್ರಾಚಾರ್ಯ ಶ್ರೀಕಾಂತ ಕೆ.ಎಸ್,ಶರಣಗೌಡ ಪಾಟೀಲ, ಎಂ.ಎಂ.ಮಲಘಾಣ, ರಮೇಶ ಬಾಗೇವಾಡಿ ಮುಂತಾದವರು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ