ಹಣವಿಲ್ಲದಿದ್ದರೆ ಸಚಿವರು ಶಬರಿಮಲೆಯಲ್ಲಿ ಭಿಕ್ಷೆ ಬೇಡಲಿ

KannadaprabhaNewsNetwork | Published : Nov 16, 2024 12:36 AM

ಸಾರಾಂಶ

ರಾಜ್ಯ ಸರ್ಕಾರದ ಬಳಿ ಹಣವಿಲ್ಲ ಎಂಬ ಕಾರಣಕ್ಕೆ ಅವೈಜ್ಞಾನಿಕವಾಗಿ ಜನರ ಮೇಲೆ ಸೆಸ್ ವಿಧಿಸಲಾಗುತ್ತಿದೆ. ಇದರ ಬದಲು ಸಚಿವರು ಶಬರಿಮಲೈಗೆ ಹೋಗಿ ಭಿಕ್ಷೆ ಬೇಡಲಿ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯ ಸರ್ಕಾರದ ಬಳಿ ಹಣವಿಲ್ಲ ಎಂಬ ಕಾರಣಕ್ಕೆ ಅವೈಜ್ಞಾನಿಕವಾಗಿ ಜನರ ಮೇಲೆ ಸೆಸ್ ವಿಧಿಸಲಾಗುತ್ತಿದೆ. ಇದರ ಬದಲು ಸಚಿವರು ಶಬರಿಮಲೈಗೆ ಹೋಗಿ ಭಿಕ್ಷೆ ಬೇಡಲಿ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯದ ನಡುವೆ ಹರಿಯುವ ನದಿ ನೀರು ಅರಣ್ಯ ಸಂಪತ್ತು. ಅದನ್ನು ಉಪಯೋಗಿಸಿಕೊಂಡರೆ ಮೂರು ಪರ್ಸೆಂಟ್ ಸೆಸ್ ವಿಧಿಸಲಾಗುತ್ತದೆ ಎಂದು ಅರಣ್ಯ ಸಚಿವರು ಹೇಳಿದ್ದಾರೆ. ಗಿಡ, ಮರಗಳಿಂದಾಗಿಯೇ ನಾವೆಲ್ಲ ಉಸಿರಾಡುತ್ತಿದ್ದೇವೆ. ಕೊನೆಗೆ ಗಾಳಿ ಸೇವನೆಗೂ ಸೆಸ್ ವಿಧಿಸಿಬಿಡಿ ಎಂದು ಕಿಡಿಕಾರಿದರು.ಕಾಂಗ್ರೆಸ್ ಪಕ್ಷ ಜನಪರವಾಗಿ ಎಂದಿಗೂ ಯೋಚನೆ ಮಾಡುವುದಿಲ್ಲ. ರಾಜ್ಯ ಸರ್ಕಾರದಲ್ಲಿ ಹಣವಿಲ್ಲ ಎಂಬ ಕಾರಣಕ್ಕೆ ಈ ರೀತಿ ಆದೇಶಿಸುವುದು ಸರಿಯಲ್ಲ. ಇದರ ಬದಲು ರಾಜ್ಯದ ಸಚಿವರು ಭಿಕ್ಷೆ ಬೇಡಲಿ. ಡಿಸೆಂಬರ್‌ನಿಂದ ಶಬರಿಮಲೈ ಯಾತ್ರೆ ಶುರುವಾಗಲಿದೆ. ಕೋಟ್ಯಂತರ ಭಕ್ತರು ಅಲ್ಲಿಗೆ ಬರುತ್ತಾರೆ. ಸಚಿವರು ಅಲ್ಲಿ ಹೋಗಿ ಭಿಕ್ಷೆ ಬೇಡಲಿ. ಜನರು ಹಣ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಮೀರ್ ಗಡಿಪಾರಿಗೆ ಆಗ್ರಹರೈತರಿಗೆ ಯಾವುದೇ ಧರ್ಮ ಇಲ್ಲ ಎಲ್ಲರೂ ರೈತರೇ. ಜಮೀರ್ ಅವರಿಗೆ ನಾನು ನಾಲ್ಕಾರು ಬಾರಿ ಕರೆದು ಬಂದಿದ್ದೇನೆ. ವಕ್ಫ್ ಬಗ್ಗೆ ಶಿವಮೊಗ್ಗಕ್ಕೆ ಬರುವವರು ಆಶ್ರಯ ಬಡಾವಣೆ ಬಗ್ಗೆ ಕರೆದರೆ ಬರಲ್ವ? ಹೀಗಾಗಿ ಜಮೀರ್ ಅವರನ್ನು ಗಡಿಪಾರು ಮಾಡಬೇಕು. ರಾಜ್ಯದಲ್ಲಿ ಓಡಾಡಬೇಡ ಮಗನೇ ಎನ್ನಬೇಕಾಗುತ್ತದೆ. ಜಮೀರ್ ಬಂದರೆ ಹಿಂದೂ ಮುಸ್ಲಿಂ ಗಲಾಟೆ ನಡೆಯುತ್ತದೆ. ಹಾಗಾಗಿ ಗಡಿಪಾರು ಮಾಡಬೇಕು ಎಂದು ಹೇಳಿದರು.

ನಾನೆಂದು ಸಚಿವ ಜಮೀರನ್ನು ಶಿವಮೊಗ್ಗಕ್ಕೆ ಬರಬೇಡಿ ಎಂದು ಹೇಳಿಲ್ಲ. ರೈತರು ಮಠ ಮಂದಿರಗಳ ಆಸ್ತಿಗಳನ್ನು ವಕ್ಫ್ ಬೋರ್ಡ್ ಗೆ ಸೇರಿಸಿ ಬಂದರೆ ಹೊಡೆಯುತ್ತಾರೆ ಎಂದಿದ್ದೇನೆ. ಮುಸ್ಲಿಂ ರೈತ ಬಂಧುಗಳಿಗೂ ಜಮೀರ್ ಅಹ್ಮದ್ ಈ ರೀತಿ ತೊಂದರೆ ಮಾಡಿದ್ದಾರೆ. ತುಂಗಾ ನದಿಯ ಹಳೆಯ ಸೇತುವೆಯಿಂದ ಹೊಸ ಸೇತುವೆ ವರೆಗೆ ವಕ್ಫ್ ಆಸ್ತಿ ಎಂದು ಘೋಷಣೆ ಮಾಡಲು ಹೊರಟಿದ್ದಾರೆ ಎಂಬ ಸುದ್ದಿ ಬಂದಿದೆ. ಈ ಸುದ್ದಿ ನಿಜ ಆಗದಿರಲಿ. ಈ ಬಗ್ಗೆ ಅಧಿಕೃತವಾಗಿ ನನಗೆ ಮಾಹಿತಿ ಇಲ್ಲ. ಜಮೀರ್ ಅಹ್ಮದ್ ಬಗ್ಗೆ ಗೌರವವಿದೆ. ಹಾಗಂತ ನಿಮ್ಮ ಮನಸ್ಸಿಗೆ ಬಂದಂತೆ ಮಾಡಲು ಬಿಜೆಪಿ ಬಿಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Share this article