- ಬಿಜೆಪಿಯಿಂದ ₹100 ಕೋಟಿ ಆಫರ್ ಬಗ್ಗೆ ತನಿಖೆ ನಡೆಸಲು ತಾಕೀತು
- - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಬಿಜೆಪಿಯಿಂದ ₹100 ಕೋಟಿ ಆಫರ್ ಯಾರಾದರೂ ನೀಡಿದ್ದರೆ, ಅದು ಯಾರೆಂಬುದನ್ನು ಬಹಿರಂಗಪಡಿಸಿ. ನಿಮಗೆ ತಾಕತ್ತಿದ್ದರೆ ₹100 ಕೋಟಿಗಳ ಆಫರ್ ಬಗ್ಗೆ ತನಿಖೆ ಮಾಡಿಸಿ ಎಂದು ಮಂಡ್ಯ ಶಾಸಕ ಪಿ.ರವಿಕುಮಾರ (ಗಣಿಗ ರವಿ) ಅವರಿಗೆ ಹೊನ್ನಾಳಿಯ ಮಾಜಿ ಸಚಿವ ಎಂ.ಪಿ. ರೇಣುಕಾರ್ಯಚಾರ್ಯ ಸವಾಲು ಹಾಕಿದರು.ಹೊನ್ನಾಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮವರೇ ಮುಖ್ಯಮಂತ್ರಿ, ಗೃಹ ಮಂತ್ರಿಗಳಿದ್ದಾರೆ. ತನಿಖೆ ಮಾಡಿಸಿ, ಬೇಕಾದರೆ ಇಡಿ, ಸಿಬಿಐ ತನಿಖೆಗಾದರೂ ಒಪ್ಪಿಸಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಆಫರ್ ನೀಡಿದ್ದು ಯಾರೆಂಬುದನ್ನು ಗಣಿಗ ರವಿಯವರು ಬಹಿರಂಗಪಡಿಸಲಿ. ಯಾವುದೇ ಇಲಾಖೆ, ತನಿಖಾ ಸಂಸ್ಥೆಯಿಂದಲಾದರೂ ಈ ಬಗ್ಗೆ ತನಿಖೆ ಮಾಡಿಸಲಿ ಎಂದರು.
ಶೋಭಾ ಕರಂದ್ಲಾಜೆ, ಪ್ರಹ್ಲಾದ ಜೋಷಿ ಸೇರಿದಂತೆ ಬಿಜೆಪಿ ಮುಖಂಡರು ಇದ್ದಾರೆಂದು ಹೇಳುವ ನೀವು ಗಾಳಿಯಲ್ಲಿ ಗುಂಡು ಹೊಡೆಯಬೇಡಿ. ನಿಷ್ಪಕ್ಷಪಾತ ತನಿಖೆಗೆ ಕ್ರಮ ಕೈಗೊಳ್ಳಿ. ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಭೆಯ ನಂತರ ರವಿ ಗಣಿಗ ಅವರಿಗೆ ಸೂಚನೆ ಬಂದಿದೆ. ಹಾಗಾಗಿ ಬಿಜೆಪಿ ಮೇಲೆ ಮಿಥ್ಯಾರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಮೈಸೂರಿನ ಮುಡಾ ನಿವೇಶನ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳೇ ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಸಾಕ್ಷಿ. ಮುಡಾದಲ್ಲಿ ಸುಮಾರು ₹4 ಸಾವಿರ ಕೋಟಿ ಹಗರಣ ನಡೆದಿದೆ. ವಾಲ್ಮೀಕಿ ನಿಗಮದಲ್ಲಿ ₹184 ಕೋಟಿ ಭ್ರಷ್ಟಾಚಾರವಾಗಿದ್ದು, ಸ್ವತಃ ಸಿಎಂ ಸಿದ್ದರಾಮಯ್ಯ ಸದನದಲ್ಲಿ ₹87 ಕೋಟಿ ಭ್ರಷ್ಟಾಚಾರ ಎಂಬುದನ್ನು ಒಪ್ಪಿಕೊಂಡಿದ್ದಾರೆ. ನಮ್ಮದು ಭ್ರಷ್ಟಾಚಾರದ ವಿರುದ್ಧ ಹೋರಾಟವೇ ಹೊರತು, ಸಿದ್ದರಾಮಯ್ಯ, ಶ್ರೀಮತಿ ಸಿದ್ದರಾಮಯ್ಯ ವಿರುದ್ಧದ ಹೋರಾಟ ಅಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.
- - - -ಫೋಟೋ: