ಕುಷ್ಟಗಿ: ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ನಿಯಂತ್ರಣಕ್ಕೆ ಕಾನೂನಿನ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಮಂಜುನಾಥ ಹೇಳಿದರು.
ಕೆಲಸದ ಸ್ಥಳದಲ್ಲಿ ಮಹಿಳೆ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಕಠಿಣ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ದೌರ್ಜನ್ಯ ಪ್ರಕರಣಗಳು ನಡೆದಾಗ ಮಹಿಳೆಯರು ಧೈರ್ಯದಿಂದ ದೂರು ನೀಡಬೇಕು. ಮಹಿಳೆಯರ ರಕ್ಷಣೆಗಿರುವ ಕಾನೂನುಗಳ ಬಗ್ಗೆ, ಧೈರ್ಯದಿಂದ ದೂರು ನೀಡುವ ನಿಟ್ಟಿನಲ್ಲಿ ಅರಿವು ಮೂಡಿಸಲು ಅಧಿಕಾರಿ ವರ್ಗ ಕಾರ್ಯಪ್ರವೃತ್ತರಾಗಬೇಕು ಎಂದರು.
ಸಿಡಿಪಿಒ ಯಲ್ಲಮ್ಮ ಹಂಡಿ, ಸುಶೀಲಾ ಮಂಗಳೂರು ಮಾತನಾಡಿದರು. ಗ್ರೇಡ್-2 ತಹಸೀಲ್ದಾರ್ ರಜನಿಕಾಂತ, ವಕೀಲರ ಸಂಘದ ಅಧ್ಯಕ್ಷ ಎಚ್.ಆರ್. ನಾಯಕ, ಕಾರ್ಯದರ್ಶಿ ಶಶಿಧರ ಶೆಟ್ಟರ, ಲತಾ ಸ್ಥಾವರಮಠ, ಎಂ.ಬಿ. ಕೋನಸಾಗರ, ಮೇಲ್ವಿಚಾರಕಿ ಭುವನೇಶ್ವರಿ ಸಂಕಾನಟ್ಟಿ ಇದ್ದರು. ಸಿಡಿಪಿಒ ಇಲಾಖೆಯ ಮೇಲ್ವಿಚಾರಕಿ ಅನ್ನಪೂರ್ಣಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಕುಂತಲಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕಲಾವತಿ ಭಕ್ತನಕೊಪ್ಪ ವಂದಿಸಿದರು.