ರಾಮನಗರ: ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷ, ಮುಖ್ಯಮಂತ್ರಿ ಸ್ಥಾನಗಳನ್ನು ನೀಡಿದೆ. ಇದರಲ್ಲಿ ಬೇರೆಯವರು ಹೊಟ್ಟೆಕಿಚ್ಚು ಪಡುವಂತಹದ್ದು ಏನಿದೆ. ಹೊಟ್ಟೆಕಿಚ್ಚು ಇದ್ದಿದ್ದರೆ ಸಿದ್ದರಾಮಯ್ಯ ಸೇರಿದಂತೆ ನನ್ನನ್ನೂ ಕಾಂಗ್ರೆಸ್ ಗೆ ಸೇರಿಸಿಕೊಳ್ಳುತ್ತಿರಲಿಲ್ಲ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರಿಗೆ ಎಲ್ಲಾ ರೀತಿಯ ಅವಕಾಶ ಕೊಟ್ಟಿದೆ. ಪಕ್ಷದಿಂದ ಅವರಿಗೆ ಎಲ್ಲ ಅನುಕೂಲಗಳೂ ಆಗಿವೆ. ಇದರಲ್ಲಿ ಹೊಟ್ಟೆಕಿಚ್ಚು ಪಡುವ ಪ್ರಶ್ನೆ ಇಲ್ಲ. ಈಗ ಡಿ.ಕೆ. ಶಿವಕುಮಾರ್ ಕ್ಲೈಮ್ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಆಗಬೇಕೆಂದು ಕೇಳುವುದರಲ್ಲಿ ತಪ್ಪಿಲ್ಲ. ಅಂತಿಮವಾಗಿ ಹೈಕಮಾಂಡ್ ಎಲ್ಲವನ್ನು ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ನಾಯಕತ್ವ ಗೊಂದಲದ ಬಗ್ಗೆ ಹೈಕಮಾಂಡ್ ಮಧ್ಯಪ್ರವೇಶ ಮಾಡುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ನಮ್ಮಲ್ಲಿ ಯಾವುದೇ ಬಣ ಇಲ್ಲ, ಅವರವರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಒಂದು ತಾರ್ಕಿಕ ಅಂತ್ಯಬೇಕೆಂದು ನಾವೂ ಒತ್ತಡ ಹಾಕಿದ್ದೇವೆ. ಇಲ್ಲದಿದ್ದರೆ ಹೈಕಮಾಂಡ್ ಮುಂದಿನ ದಿನಗಳಲ್ಲಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಸಾಕಷ್ಟು ಕೆಲಸ-ಕಾರ್ಯ ಮಾಡುತ್ತಿದೆ. ಪಕ್ಷ ಬಡವರ ಪರವಾಗಿ ನಿಂತಿದೆ. ಆದರೆ ನಾಯಕತ್ವ ಬದಲಾವಣೆ ವಿಚಾರ ನಮಗೆ ಇರಿಸು-ಮುರಿಸು ತರುತ್ತಿದೆ.
ಸಿಎಂ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ ಹಾಗೂ ಸಚಿವ ಜಾರಕಿಹೊಳಿ ದೆಹಲಿ ಭೇಟಿ ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ ರಾಜಣ್ಣ ಸಿಎಂ ಸಿದ್ದರಾಮಯ್ಯರ ಬೆಂಬಲಿಗ ಹೌದು. ಆದರೆ, ಜಾರಕಿಹೋಳಿ ಆ ರೀತಿ ಅಲ್ಲ. ಎಲ್ಲರ ಪರವಾಗಿಯೂ ಅವರ ಅಭಿಪ್ರಾಯ ತಿಳಿಸುತ್ತಾರೆ. ಲೋಕೋಪಯೋಗಿ ಸಚಿವರಾಗಿರುವ ಅವರು ಇಲಾಖೆ ಕೆಲಸದ ಮೇಲೆ ಕೇಂದ್ರ ಸಚಿವ ಗಡ್ಕರಿ ಅವರನ್ನು ಭೇಟಿಮಾಡಲು ದೆಹಲಿಗೆ ಹೋಗಿದ್ದಾರೆ ಎಂದರು.
21ಕೆಆರ್ ಎಂಎನ್ 4.ಜೆಪಿಜಿ