ವಿಜಯೇಂದ್ರ ರಾಜ್ಯಾಧ್ಯಕ್ಷನಾದರೆ ಹಿಂದುತ್ವದ ಆಧಾರದಲ್ಲಿ ಹೊಸ ಪಕ್ಷ ಗ್ಯಾರಂಟಿ: ಯತ್ನಾಳ

KannadaprabhaNewsNetwork |  
Published : Jul 24, 2025, 12:53 AM IST
4565 | Kannada Prabha

ಸಾರಾಂಶ

ಮತ್ತೆ ವಿಜಯೇಂದ್ರ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿದರೆ ರಾಜ್ಯದಲ್ಲಿ ಪಕ್ಷಕ್ಕೆ ಭವಿಷ್ಯವಿಲ್ಲ. ಹೈಕಮಾಂಡ್ ವಿಜಯೇಂದ್ರ ಅವರನ್ನು ತಲೆ ಮೇಲೆ ಕೂಡ್ರಿಸಿಕೊಂಡರೆ ರಾಜ್ಯದಲ್ಲಿ ಬಿಜೆಪಿ ಹಾಳಾಗುತ್ತದೆ. ಅವರನ್ನು ಬದಲಾವಣೆ ಮಾಡುವುದು, ಬಿಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು.

ಕೊಪ್ಪಳ:

ಬಿಜೆಪಿ ಬಹುತೇಕ ನಾಯಕರು ಒಪ್ಪದ ಹಾಗೂ ರಾಜ್ಯದ ಜನರು ಸಹ ತಿರಸ್ಕರಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನೇ ಮತ್ತೆ ಅಧ್ಯಕ್ಷರನ್ನಾಗಿ ಮಾಡಿದರೆ ಹಿಂದುತ್ವದ ಆಧಾರದಲ್ಲಿ ಹೊಸಪಕ್ಷ ಕಟ್ಟುವುದು ಗ್ಯಾರಂಟಿ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.

ನಗರದ ಗವಿಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಪ್ರಾಮಾಣಿಕ ನಾಯಕತ್ವ ಬೇಕು ಎನ್ನುವುದು ಎಲ್ಲರ ಆಶಯವಾಗಿದೆ ಎಂದರು.ಮತ್ತೆ ವಿಜಯೇಂದ್ರ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿದರೆ ರಾಜ್ಯದಲ್ಲಿ ಪಕ್ಷಕ್ಕೆ ಭವಿಷ್ಯವಿಲ್ಲ ಎಂದ ಅವರು, ಹೈಕಮಾಂಡ್ ವಿಜಯೇಂದ್ರ ಅವರನ್ನು ತಲೆ ಮೇಲೆ ಕೂಡ್ರಿಸಿಕೊಂಡರೆ ರಾಜ್ಯದಲ್ಲಿ ಬಿಜೆಪಿ ಹಾಳಾಗುತ್ತದೆ. ಅವರನ್ನು ಬದಲಾವಣೆ ಮಾಡುವುದು, ಬಿಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು. ಆದರೆ, ವಿಜಯೇಂದ್ರ ಹೊರತುಪಡಿಸಿ ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ನಮ್ಮ ಸಮ್ಮತಿ ಇದೆ. ಆದರೆ, ಅದನ್ನು ಬಿಜೆಪಿ ಹೈಕಮಾಂಡ್ ಮಾಡಬೇಕು ಎಂದರು.

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಭವಿಷ್ಯ ಇರುವುದೇ ಕರ್ನಾಟಕದಲ್ಲಿ ಮಾತ್ರ. ಹೀಗಿರುವಾಗ ಸೂಕ್ತ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ನಾವು ಹೇಳಿದೆವು. ಆದರೆ, ಪಕ್ಷ ಕೇಳಲಿಲ್ಲ ಎಂದ ಅವರು, ಶ್ರೀರಾಮುಲು ಅವರು ಒಡೆದ ಮನಸ್ಸುಗಳು ಒಂದಾಗುತ್ತವೆ ಎಂದಿದ್ದಾರೆ. ಆದರೆ, ಇದು ವಿಜಯೇಂದ್ರ ಇರುವಾಗ ಸಾಧ್ಯವಿಲ್ಲ. ಶ್ರೀರಾಮುಲು ಅವರು ವಿಜಯೇಂದ್ರ ಜತೆಗೆ ಏಕೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ನನಗೆ ಗೊತ್ತಿಲ್ಲ ಎಂದರು.ಯಡಿಯೂರಪ್ಪ ಅವರನ್ನು ಅಪ್ಪಾಜಿ ಎನ್ನಬೇಕು. ಅಂಥವರಿಗೆ ಮಾತ್ರ ಮಣೆ ಹಾಕಲಾಗುತ್ತದೆ. ಯಾರಿಗೋ ಹುಟ್ಟಿ, ಇನ್ಯಾರಿಗೋ ಅಪ್ಪಾಜಿ ಅನ್ನುವುದಿಲ್ಲ ಎಂದರು.

ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ರಚಿಸಿರುವುದನ್ನು ಧರ್ಮಸ್ಥಳ ಧರ್ಮಾಧಿಕಾರಿಗಳೇ ಸ್ವಾಗತಿಸಿದ್ದಾರೆ. ಆದರೆ, ಹಿಂದೂ ಧರ್ಮವನ್ನು ಟಾರ್ಗೆಟ್ ಮಾಡುವವರೇ ಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಹಿಂದೆ ಅಯ್ಯಪ್ಪ ಸ್ವಾಮೀಜಿ ದೇವಸ್ಥಾನ ಟಾರ್ಗೆಟ್ ಮಾಡಿದ್ದರು. ಈಗ ಧರ್ಮಸ್ಥಳ ಮಾಡಿದ್ದಾರೆ ಎಂದ ಅವರು, ಧರ್ಮಸ್ಥಳಕ್ಕೆ ಧಕ್ಕೆಯಾದರೆ ಹಿಂದೂ ಸಮಾಜ ಸುಮ್ಮನೇ ಇರುವುದಿಲ್ಲ ಎಂದು ಎಚ್ಚರಿಸಿದರು.ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿಗೆ ವಿಷಪ್ರಾಸನ ಮಾಡಿರುವುದು ನನಗೆ ಗೊತ್ತಿಲ್ಲ. ಆದರೆ, ಸ್ವಾಮೀಜಿಗಳು ಸಮಾಜಕ್ಕಾಗಿ ಮನೆಬಿಟ್ಟು ಕೆಲಸ ಮಾಡಿದ್ದಾರೆ. ಅಂಥವರ ವಿರುದ್ಧ ಈ ರೀತಿ ಮಾಡುವುದು ಸರಿಯಲ್ಲ. ನಮ್ಮಲ್ಲಿಯೂ ಅಯೋಗ್ಯರಿದ್ದು ಈ ರೀತಿ ಮಾಡುತ್ತಿದ್ದಾರೆ. ಅವರ ಹೆಸರು ತೆಗೆದುಕೊಳ್ಳಬೇಡಿ ಎಂದು ನಮ್ಮ ಹಿರಿಯರು ಹೇಳಿದ್ದಾರೆ ಎಂದರು.

ಯಾರು ಮಠಕ್ಕೆ ಬೀಗ ಹಾಕಿದ್ದಾರೆ. ಯಾರು ಹಣ ತಿಂದಿದ್ದಾರೆ. ಅವರ ಮನೆ ಬಾಗಿಲು ಬಂದಾಗುವ ದಿನಗಳು ದೂರವಿಲ್ಲ ಎಂದ ಅವರು, ನಾನು ಸಹ ಒಂದು ಸಂಸ್ಥೆ ನಡೆಸುತ್ತಿದ್ದೇನೆ. ಆದರೂ ಒಂದು ರುಪಾಯಿ ತಿಂದಿಲ್ಲ. ಮಠದ ಹಣ ತಿಂದವರು ಉದ್ಧಾರ ಆಗಲ್ಲ ಎಂದರು.ವೀರಶೈವ ಲಿಂಗಾಯತ ಎರಡೂ ಒಂದೇ, ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ಎಂದು ಶ್ರೀಶೈಲ ಪೀಠದ ಜಗದ್ಗುರಗಳ ಹೇಳಿಕೆಗೆ, ಸ್ವಾಮಿಜಿಗಳು ದೊಡ್ಡ ದೊಡ್ಡ ಶ್ರೀಮಂತರ ಮನೆಗೆ ಹೋಗುತ್ತಾರೆ. ಬಡವರ ಮನೆಗೆ ಹೋಗುವುದಿಲ್ಲ. ಪೂಜೆಗೆ ₹ 11 ಲಕ್ಷ ಫಿಕ್ಸ್ ಮಾಡಿದ್ದಾರೆ. ಇಂಥವರಿಗೆ ಯಡಿಯೂರಪ್ಪ ಹಾಗೂ ಶಾಮನೂರು ಶಿವಶಂಕರಪ್ಪ ಅಂಥವರೇ ಮಾತ್ರ ಭಕ್ತರು ಎಂದರು.

PREV

Recommended Stories

ನವೆಂಬರ್‌-ಡಿಸೆಂಬರ್‌ನಲ್ಲಿ 5 ಪಾಲಿಕೆ ಚುನಾವಣೆ: ಡಿಸಿಎಂ
ಹಿಪ್ಪರಗಿ ಜಲಾಶಯಕ್ಕೆ ೧,೧೯,೨೦೦ ಕ್ಯುಸೆಕ್‌ ಒಳಹರಿವು