- ರಾಜ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಡಿಕೆಶಿ ಹೇಳಿಕೆ ಪುಷ್ಟಿ: ಶಾಸಕ ಹರೀಶ್ ಹೇಳಿಕೆ
- - - ಕನ್ನಡಪ್ರಭ ವಾರ್ತೆ, ದಾವಣಗೆರೆ
ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿಕೆಯೇ ಸಾಕ್ಷಿ. ಕಾಂಗ್ರೆಸ್ಸಿನ ಭಿಕ್ಷೆಯಲ್ಲಿ ಬಿ.ವೈ.ವಿಜಯೇಂದ್ರ ಗೆದ್ದಿದ್ದರೆ ಅಂತಹ ಭಿಕ್ಷೆಯ ರಾಜ್ಯಾಧ್ಯಕ್ಷರು ನಮಗೆ ಬೇಡ. ರಾಜೀನಾಮೆ ನೀಡಿ ಮತ್ತೊಮ್ಮೆ ವಿಧಾನಸಭೆ ಚುನಾವಣೆಗೆ ಬಿ.ವೈ.ವಿಜಯೇಂದ್ರ ನಿಂತು, ಗೆಲ್ಲಬೇಕು ಎಂದು ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ ಒತ್ತಾಯಿಸಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ನಿನ್ನ ಗೆಲುವು ಕಾಂಗ್ರೆಸ್ ಕೊಟ್ಟ ಭಿಕ್ಷೆಯೆಂದು, ಶಿಕಾರಿಪುರದಲ್ಲಿ ನಾಗರಾಜಗೌಡ ಅವರಿಗೆ ನಿಲ್ಲಿಸಿದ್ದರೆ ಗೊತ್ತಾಗುತ್ತಿತ್ತು ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಇದು ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿರುವುದಕ್ಕೆ ಸಾಕ್ಷಿ ಎಂದರು.
ಮುಡಾ, ವಾಲ್ಮೀಕಿ ನಿಗಮದ ಹಗರಣ ಹೀಗೆ ವಿಪಕ್ಷಗಳು ಆರೋಪ ಮಾಡುತ್ತಿದ್ದರೆ ಆಡಳಿತ ಪಕ್ಷದವರು ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀವು ಮಾಡಿಲ್ಲವೇ? ನಿಮ್ಮ ಸರ್ಕಾರವಿದ್ದಾಗ ಆಗಿಲ್ಲವೇ ಎಂಬುದಾಗಿ ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ 3-6ರ ಮುಚ್ಚಿಟ್ಟ ಸತ್ಯ ಹೊರಬರಬೇಕಾ ಅಂತಾ ಆಡಳಿತ ಪಕ್ಷದವರು ಬೆದರಿಸುತ್ತಿರುವುದು ಬ್ಲಾಕ್ ಮೇಲ್ ಅಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.
* ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ
ಮುಚ್ಚಿರುವ ಹಳ್ಳಗಳನ್ನು ಈಗ ಮತ್ತೆ ಮೂಲ ಸ್ವರೂಪಕ್ಕೆ ತರಲಾಗಿದೆ. ಸರ್ಕಾರಕ್ಕೆ ಸೇರಿದ 30-40 ಎಕರೆ ಗೋಮಾಳ ಜಾಗವನ್ನು ವಶಪಡಿಸಿಕೊಂಡಿದ್ದಾರೆ. ಸರ್ಕಾರಿ ಜಮೀನಿನಲ್ಲಿ ಕೆರೆಯನ್ನು ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಹಗರಣಗಳನ್ನು ಬಿಚ್ಚಿಡುತ್ತೇನೆ ಎಂದರು.
- ಬಿ.ಪಿ.ಹರೀಶ, ಬಿಜೆಪಿ ಶಾಸಕ, ಹರಿಹರ ಕ್ಷೇತ್ರ
ದಾವಣಗೆರೆಯಲ್ಲಿ ಸೋಮವಾರ ಹರಿಹರ ಕ್ಷೇತ್ರ ಬಿಜೆಪಿ ಶಾಸಕ ಬಿ.ಪಿ.ಹರೀಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.