ತ್ಯಾಜ್ಯ ಸಂಸ್ಕರಿಸಿ ನೀಡದಿದ್ದರೆ ವಿದ್ಯುತ್‌, ನೀರು ಕಟ್‌

KannadaprabhaNewsNetwork |  
Published : May 22, 2026, 02:15 AM IST
21ಕೆಪಿಎಲ್ 22 ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಮತ್ತು ಇತರೆ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆ | Kannada Prabha

ಸಾರಾಂಶ

ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆ ತಮ್ಮ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಸ್ತುಗಳ ನಿರ್ವಹಣಾ ನಿಯಮ ಸಮರ್ಪಕವಾಗಿ ಅನುಷ್ಠಾನ ಮಾಡಲು ಕ್ರಮ ವಹಿಸಬೇಕು

ಕೊಪ್ಪಳ:ಸುಪ್ರೀಂ ಕೋರ್ಟ್‌ನ ಆದೇಶದನುಸಾರ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಸ್ತು ವಿಲೇವಾರಿಗೆ ಸೂಕ್ತ ಕ್ರಮ ಕೈಗೊಂಡು, ತ್ಯಾಜ್ಯ ಸಂಸ್ಕರಿಸದವರಿಗೆ ನೀರು ಹಾಗೂ ವಿದ್ಯುತ್ ಸ್ಥಗಿತಗೊಳಿಸಲು ಅಗತ್ಯ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಮತ್ತು ಇತರೆ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಘನ ತ್ಯಾಜ್ಯ ವಸ್ತು ವಿಲೇವಾರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ನಿರ್ದೇಶನದ ಕೇಂದ್ರ ಸರ್ಕಾರವು 01/04/2026 ರಿಂದ ಅನ್ವಯವಾಗುವಂತೆ ಘನ ತ್ಯಾಜ್ಯ ವಸ್ತುಗಳ ನಿರ್ವಹಣಾ ನಿಯಮ ಜಾರಿಗೊಳಿಸಲಾಗಿದ್ದು, ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆ ತಮ್ಮ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಸ್ತುಗಳ ನಿರ್ವಹಣಾ ನಿಯಮ ಸಮರ್ಪಕವಾಗಿ ಅನುಷ್ಠಾನ ಮಾಡಲು ಕ್ರಮ ವಹಿಸಬೇಕು. ಸರ್ಕಾರದ ಆದೇಶದನುಸಾರ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಂಬಂಧಿಸದಂತೆ ಜಿಲ್ಲಾ ಮಟ್ಟದ ವಿಜಿಲನ್ಸ್ ಕಮೀಟಿ ಹಾಗೂ ವಿಶೇಷ ಶೆಲ್ ರಚಿಸಲಾಗಿದ್ದು, ತ್ಯಾಜ್ಯ ಸಂಸ್ಕರಣೆಯ ಬಗ್ಗೆ ಸಮಿತಿಯ ಆದೇಶ ಪಾಲಿಸಬೇಕೆಂದು ನಿರ್ದೇಶಿಸಿದರು.

ಘನ ತ್ಯಾಜ್ಯ ವಸ್ತುಗಳ ನಿರ್ವಹಣೆಯ 2026ರ ಹೊಸ ನಿಯಮಾವಳಿ ತಪ್ಪದೇ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಈ ಬಗ್ಗೆ ನಾಗರಿಕರಿಗೆ ವ್ಯಾಪಕವಾಗಿ ಅರಿವು ಮೂಡಿಸಬೇಕು. ಸ್ವಚ್ಛ ಮತ್ತು ಆರೋಗ್ಯ ಪರಿಸರ ರೂಪಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಘನ ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿ ಮತ್ತು ನಿರ್ವಹಣೆ ಮಾಡದಿರುವುದು ಪರಿಸರ ಹಾಗೂ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ ಘನ ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿ ಮಾಡಲು ಸೂಕ್ತ ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಹೊಸ ನಿಯಮಾವಳಿಗಳನ್ವಯ ಪ್ರತಿ ಸ್ಥಳೀಯ ಸಂಸ್ಥೆಗಳಲ್ಲಿ 4 ವಿಧದ ತ್ಯಾಜ್ಯ ವಿಂಗಡಣೆ ಕಡ್ಡಾಯವಾಗಿ ಪಾಲಿಸಬೇಕು. ಈ ಹಿನ್ನೆಲೆಯಲ್ಲಿ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಹಾಗೂ ಸ್ಪೆಷಲ್ ಕೇರ್ ತ್ಯಾಜ್ಯ (ಬಲ್ಬ್ ,ಬ್ಯಾಟರಿ, ಅವಧಿ ಮೀರಿದ ಔಷಧಿ, ಪೇಂಟ್ ಡಬ್ಬಿಗಳು ಇತ್ಯಾದಿ) ವಿಧದ ತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆ ಹಾಗೂ ಸಂಸ್ಕರಣೆ ಮತ್ತು ವಿಲೇವಾರಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆ ಪ್ರತಿಯೊಬ್ಬ ನಾಗರೀಕರಿಗೆ ಸಮರ್ಪಕ ಅರಿವು ಮೂಡಿಸಿ.ತ್ಯಾಜ್ಯ ಉತ್ಪಾದನೆ ಮಾಡುವ ಘಟಕ ಗುರುತಿಸಿ ನೋಂದಾಯಿಸುವುದು ಮತ್ತು ಬೃಹತ್ ತ್ಯಾಜ್ಯ ಉತ್ಪಾದಿಸುವ ಸ್ಥಳಗಳಲ್ಲಿಯೇ ಘನ ತ್ಯಾಜ್ಯ ಸಂಸ್ಕರಿಸಲು ಕ್ರಮವಹಿಸಿ ಎಂದು ಹೇಳಿದರು.

ನೂತನ ನಿಯಮಾವಳಿ ಉಲ್ಲಂಘನೆ ಮಾಡುವ ವ್ಯಕ್ತಿ ಅಥವಾ ಸಂಘ-ಸಂಸ್ಥೆಗಳ ವಿರುದ್ಧ ಕಡ್ಡಾಯವಾಗಿ ದಂಡ ವಿಧಿಸಬೇಕು ಹಾಗೂ ಅಂತಹ ವ್ಯಕ್ತಿ ಅಥವಾ ಸಂಘ-ಸಂಸ್ಥೆಗಳಿಗೆ ನೀರಿನ ಸಂಪರ್ಕ ಕಡಿತಗೊಳಿಸಲು ಕ್ರಮವಹಿಸಿ. ಪ್ರತಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ರಸ್ತೆ ಸ್ವಚ್ಛತೆಗಾಗಿ ನಿಯಮಿತವಾಗಿ ಬ್ಲಾಕ್ ಸ್ಪಾಟ್‌ ಕಾಲಕಾಲಕ್ಕೆ ತೆರವುಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಒಣ ತ್ಯಾಜ್ಯ ಪ್ರತ್ಯೇಕವಾಗಿ ಸಂಸ್ಕರಣೆಗೊಳಿಸಿ, ಈ ತ್ಯಾಜ್ಯ ಮರುಸಂಸ್ಕರಣೆಗೊಳಿಸಲು ಸಹ ಕ್ರಮವಹಿಸಬೇಕು. ಪ್ರತಿ ಮನೆ ಮಟ್ಟದಲ್ಲಿ ಕಾಂಪೊಸ್ಟಿಂಗ್ ಬಯೋಗ್ಯಾಸ್ (Composting Biogas) ಉತ್ಪಾದನೆಗೆ ಪ್ರೋತ್ಸಾಹ ಕೊಡುವಂತೆ ಸೂಚಿಸಲಾಯಿತು. ಪ್ರತಿ ನಿತ್ಯ ಮನೆ ಮನೆಗಳಲ್ಲಿ ಹಾಗೂ ರಸ್ತೆಗಳಲ್ಲಿನ ತ್ಯಾಜ್ಯ ಸಂಗ್ರಹಣೆಗೆ ಒತ್ತು ನೀಡಬೇಕು. ಒಟ್ಟಾರೆ ಕೊಪ್ಪಳ ಜಿಲ್ಲೆಯಲ್ಲಿನ ಎಲ್ಲ ಸ್ಥಳೀಯ ಸಂಸ್ಥೆಗಳ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಿ, ಸುತ್ತಮುತ್ತಲಿನ ಪರಿಸರ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಆದ್ಯತೆಯ ಮೇರೆಗೆ ಕ್ರಮ ವಹಿಸಬೇಕು. ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದನ್ವಯ ಘನ ತ್ಯಾಜ್ಯ ವಸ್ತುಗಳ ನಿರ್ವಹಣಾ ನಿಯಮ ಕಟ್ಟುನಿಟ್ಟಾಗಿ ಪಾಲಿಸುವಂತೆ ಸಭೆಯಲ್ಲಿ ಹಾಜರಿದ್ದ ಎಲ್ಲ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಸಭೆಯಲ್ಲಿ ಕೊಪ್ಪಳ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಲಿಂಗರಾಜು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ, ಕೊಪ್ಪಳ ವಿಶ್ವವಿದ್ಯಾಲಯದ ಕುಲ ಸಚಿವರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೃದ್ಯ ಪುಸ್ತಕ ಪ್ರೀತಿ ಬೆಳೆಸಿ ಪುಸ್ತಕ ಸಂಸ್ಕೃತಿ ಬೆಳೆಸಿ ಉತ್ತೇಜಿಸುವ ಅಗತ್ಯವಿದೆ
ಬಂಗಾರಪ್ಪ ನಗರ, ಗಾಂಧಿನಗರ ನಿವಾಸಿಗಳ ಮನೆಗಳ ತೆರವಿಗೆ ತಡೆ