-ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಅಭಿಮತ । ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಸಾಧಕ ರೈತರಿಗೆ ಸನ್ಮಾನ
ಕನ್ನಡಪ್ರಭವಾರ್ತೆ ಹೊಸದುರ್ಗ
ಕೃಷಿಕರಿಗೆ ಬೇಕಾದ ನೀರು, ಗೊಬ್ಬರ ಇತ್ಯಾದಿಗಳನ್ನು ಒದಗಿಸಿದರೆ ಈ ನಾಡು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ 3ನೇ ದಿನದ ಸಭಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಚಿತ್ರದುರ್ಗ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ ಬಸವಕುಮಾರಸ್ವಾಮೀಜಿ ಮಾತನಾಡಿ, ಸಾಂಸ್ಕೃತಿಕ ಲೋಕವನ್ನು ಸೃಷ್ಟಿ ಮಾಡುವುದು ಮಠ ಪರಂಪರೆಯ ಸಂಪತ್ತು. ಇದನ್ನು ಸೃಷ್ಟಿ ಮಾಡುವುದು ಸಾಹಸದ ಕೆಲಸ, ರಂಗಭೂಮಿ ಕೇವಲ ಕಲಾವಿದರಿಂದ ಕೂಡಿರುವುದಿಲ್ಲ ಮಹಾಂತರಿಂದಲೂ ಕೂಡಿದೆ. ಇದೊಂದು ತಪೋಭೂಮಿಯನ್ನಾಗಿ ಮಾಡಿದ್ದಾರೆ ಎಂದರು
ನಮ್ಮ ಸಾಂಪ್ರದಾಯಿಕ ಸಾವಯವ ಬೇಸಾಯ ವ್ಯವಸ್ಥೆಯಲ್ಲಿ ಅತ್ಯಂತ ಅಮೂಲ್ಯವಾದ ಗುಣಧರ್ಮದ ಕಾಳುಗಳನ್ನು ಬೆಳೆಯಬಹುದಾಗಿದ್ದು ಅದರ ಜೊತೆಯಲ್ಲಿ ಮಿಶ್ರ ಬೆಳೆ ವ್ಯವಸ್ಥೆಯನ್ನು ಆಳವಡಿಸಿಕೊಂಡರೆ ವರ್ಷವಿಡೀ ರೈತ ಲಾಭದಾಯಕವಾದ ಪರಿಸ್ಥಿತಿಯನ್ನು ಕಾಣಬಹುದಾಗಿದೆ. ಸಾವಯವ ರೈತರನ್ನು ಸಂಘಟಿಸುವುದು ಸವಾಲು ಜೊತೆಗೆ ಸಾವಯವ ಕೃಷಿಯಲ್ಲಿ ದೇಶಕ್ಕೆ ಉಣಬಡಿಸಬಹುದು ಎಂಬುದನ್ನು ಸಾಬೀತುಪಡಿಸಬೇಕಿದೆ ಎಂದರು.
ಪಾಂಡೋಮಟ್ಟಿಯ ಗುರು ಬಸವಸ್ವಾಮೀಜಿ ಮಾತನಾಡಿ, ರೈತರು ದೇಶದ ಬೆನ್ನೆಲುಬು ಎಂದು ಮಾತನಾಡುತ್ತೇವೆ. ಆದರೆ, ರೈತರ ಬೆನ್ನೆಲುಬು ಮುರಿದವರು ರಾಜಕಾರಣಿಗಳು. ಏಕೆಂದರೆ ಕಾಯಕ ಮಾಡುವುದನ್ನು ಕಲಿಸದೆ ಸೋಮಾರಿತನ ಕಲಿಸಿದರು.ಕಾಯಕದ ನಾಯಕ ಬಸವಣ್ಣನವರ ಆಶಯದಂತೆ ಕಾಯಕನಿಷ್ಠ ಸಮಾಜ ಬೇಕು. ರೈತರಿಗೆ ನೀರು, ಬೆಳೆ, ಬೆಲೆ ಮತ್ತು ವಿದ್ಯುತ್ ಬೇಕು. ಇವಿಷ್ಟನ್ನು ಕೊಟ್ಟರೆ ರೈತರು ಕೈ ಎತ್ತಿ ಕೊಡುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹೊಳಲ್ಕೆರೆ ಶಾಸಕ ಚಂದ್ರಪ್ಪ, ಪರಿಷತ್ ಸದಸ್ಯ ಕೆ ಎಸ್ ನವೀನ್, ಶಾಸಕ ಹೆಚ್ ಡಿ ತಮ್ಮಯ್ಯ ವೇದಿಕೆಯಲ್ಲಿದ್ದರು.
ಪ್ರಾರಂಭದಲ್ಲಿ ಹೊಸದುರ್ಗದ ಅಕ್ಕನಬಳಗದ ಕಲಾವಿದರು ವಚನಗೀತೆ ಹಾಡಿದರು. ಗುರುಪಾದೇಶ್ವರ ಪ್ರೌಡಶಾಲೆ ಹಾಗೂ ಶಿವಕುಮಾರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ನೃತ್ಯ ರೂಪಕ ನಡೆಸಿಕೊಟ್ಟರು. ಕೊನೆಯಲ್ಲಿ ಟಿಕೆ ರಾಮ್‌ರಾವ್ ಕಾದಂಬರಿ ಆಧಾರಿತ ವೈಡಿ ಬದಾಮಿ ನಿರ್ದೆಶನದ ಬಂಗಾರದ ಮನುಷ್ಯ ನಾಟಕವನ್ನು ಶಿವಸಂಚಾರದ ಕಲಾವಿದರು ಅಭಿನಯಿಸಿದರು.------
ಪೋಟೋ, 6ಎಚ್‌ಎಸ್‌ಡಿ4: ಸಾಣೇಹಳ್ಳಿಯ ರಾಷ್ಟ್ರೀಯ ನಾಟಕೋತ್ಸವದಲ್ಲಿ ಹೊಸದುರ್ಗದ ನಿಜಲಿಂಗಪ್ಪ ಶಾಲೆಯ ಮಕ್ಕಳು ನೃತ್ಯ ರೂಪಕ ನಡೆಸಿಕೊಟ್ಟರು.