ಹರಪನಹಳ್ಳಿ: ನಮ್ಮ ಪರಂಪರೆಯನ್ನು ತಿಳಿದುಕೊಳ್ಳದಿದ್ದರೆ ನಾವು ಅನಾಥರಾಗುತ್ತೇವೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ದೇವರಕೊಂಡಾರೆಡ್ಡಿ ಹೇಳಿದರು.ಪಟ್ಟಣದ ಅಂಬ್ಲಿ ದೊಡ್ಡ ಭರಮಪ್ಪ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಹಾಗೂ ಇತಿಹಾಸ ಪರಂಪರೆ ಅಧ್ಯಯನ ಟ್ರಸ್ಟ್ ಬೆಂಗಳೂರು ಸಹಯೋಗದಲ್ಲಿ ಆಯೋಜಿಸಲಾಗಿದ್ದ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಐತಿಹಾಸಿಕ ಪ್ರಜ್ಞೆ ವಿದ್ಯಾರ್ಥಿಗಳಲ್ಲಿ ಜಾಗೃತಿಯಾಗಬೇಕು. ಮಾತೃಭಾಷೆಯ ಮೇಲೆ ಹೆಚ್ಚು ಒಲವಿರಲಿ. ಕಲಿಕೆ ಭಾಷೆಯನ್ನು ಹೆಚ್ಚು ಅವಲಂಬಿಸಿದರೆ ಗುಲಾಮಗಿರಿಗೆ ಮರುಳಾಗುತ್ತಿರಿ. ನಿಮ್ಮ ಅಕ್ಕಪಕ್ಕಗಳಲ್ಲಿ ದೊರಕುವ ಶಿಲ್ಪ ಕಲೆ, ಶಾಸನಗಳು, ಸ್ಮಾರಕಗಳೆಡೆ ಲಕ್ಷ್ಯ ವಹಿಸಿ ಅವುಗಳಲ್ಲಿ ಅಡಗಿರುವ ಜ್ಞಾನ ಅರಿಯಲು ಪ್ರಯತ್ನಿಸಿ ರಕ್ಷಿಸಿ ಎಂದರು.
ಅಂಬ್ಲಿ ದೊಡ್ಡ ಭರಮಪ್ಪ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಮೋಹನ ರೆಡ್ಡಿ ಮಾತನಾಡಿ, ಇತಿಹಾಸದ ಮೇಲೆ ಆಸಕ್ತಿ ಇರುವವರು ಅಳಿವಿನಂಚಿನಲ್ಲಿರುವ ಶಿಲಾ ಶಾಸನಗಳನ್ನು ಸಂಗ್ರಹಿಸಿ ರಕ್ಷಿಸಿ ಎಂದು ಹೇಳಿದರು.ಗ್ರಾಮೀಣ ಪ್ರದೇಶಗಳಲ್ಲಿ ಹಳೆಯ ಕಾಲದ ನಾಣ್ಯಗಳು ದೊರಕಿದ ನಂತರ ಇತಿಹಾಸವನ್ನು ಸಾರಿ ಸಾರಿ ಹೇಳುತ್ತವೆ. ವೀರಶೈವ ಮಠಮಾನ್ಯಗಳು ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿವೆ. ಹರಪನಹಳ್ಳಿ ತಾಲೂಕು ಇತಿಹಾಸ ಪ್ರಸಿದ್ಧಿ ಹಾಗೂ ಹಿನ್ನೆಲೆ ಹೊಂದಿರುವ ಊರು ಎಂದು ಹೇಳಿದರು.
ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್‌ನ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ ಮಾತನಾಡಿ, ಅಖಂಡ ಬಳ್ಳಾರಿ ಜಿಲ್ಲೆಯ ಹಡಗಲಿ ನನ್ನ ಜನ್ಮ ಭೂಮಿ. ಆದರೆ ಹರಪನಹಳ್ಳಿ ನನ್ನ ಕರ್ಮಭೂಮಿ. ಹಾಗಾಗಿ ಹರಪನಹಳ್ಳಿ ತಾಲೂಕು ಇತಿಹಾಸ ಸಾಹಿತ್ಯದ ಕೇಂದ್ರ ಸ್ಥಾನ. ಸ್ವಾತಂತ್ರ್ಯಕ್ಕಿಂತಲೂ ಮುಂಚೆಯೇ ಕನ್ನಡ ಸಾಹಿತ್ಯ ಸಮ್ಮೇಳನ ಇಲ್ಲಿ ನಡೆದಿದೆ ಎಂದರು.ಈ ಸಂದರ್ಭದಲ್ಲಿ ಡಾ.ಡಿ.ತಿಪ್ಪೇಸ್ವಾಮಿ, ಡಾ.ಸಂಧ್ಯಾ ಬಿ.ಕೆ. ಧನಪಾಲ್, ಎಡಿಬಿ ಕಾಲೇಜ್ ಪ್ರಾಚಾರ್ಯ ಸಿದ್ದಲಿಂಗ ಮೂರ್ತಿ, ಬಸವರಾಜ್ ಉಪಸ್ಥಿತರಿದ್ದರು.
ಹರಪನಹಳ್ಳಿ ಎಡಿಬಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐತಿಹಾಸಿಕ ಪರಂಪರೆಯನ್ನು ಉಳಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು.