ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಎಚ್.ಜಿ.ಉಮೇಶ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಶುದ್ಧವಾದ ಆಮ್ಲಜನಕಯುಕ್ತ ಗಾಳಿಯಿಲ್ಲದೇ ನಾವು ಆರೋಗ್ಯಕರ ಜೀವನ ನಡೆಸಲು ಸಾಧ್ಯವಿಲ್ಲ. ಮರಗಿಡಗಳನ್ನು ರಕ್ಷಿಸುವುದರ ಜತೆಗೆ ಹೊಸ ಗಿಡಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಮೇಲಿದೆ ಎಂದರು.
ಶಿಕ್ಷಕ ಎಂ.ಗುರುಸಿದ್ಧಸ್ವಾಮಿ ಮಾತನಾಡಿ, ಈ ಊರು ಸುಂದರ ವನವಾಗಬೇಕು ಎಂದರೆ ತಾವುಗಳೆಲ್ಲ ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಯುವಕರು ಇಂದು ನೆಟ್ಟಿರುವ ಗಿಡದ ವಾರಸುದಾರರಾಗಿ ಕಾಪಾಡುವ ವನಪಾಲಕರಾಗಿರಬೇಕು. ಆಗ ಮಾತ್ರ ಪರಿಸರ ದಿನಾಚರಣೆಯ ಆಚರಣೆಗೆ ಒಂದು ಅರ್ಥ ಬರುತ್ತದೆ ಎಂದು ತಿಳಿ ಹೇಳಿದರು.ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್, ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ್, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯ ಶಿಕ್ಷಕ ಶಾನವಾಡಿ ಮತ್ತು ಸಹ ಶಿಕ್ಷಕರು ಹಾಗೂ ಬಸವ ಪರಿಸರ ವೇದಿಕೆ ಅಧ್ಯಕ್ಷರಾದ ನಾಯಕನಹಟ್ಟಿ ರುದ್ರಪ್ಪ, ವೀರೇಶ ಸ್ವಾಮಿ, ಕೆರೆನಹಳ್ಳಿ ರಾಜು, ಮಾಲತೇಶ, ಮಲ್ಲೇಶ್, ಮಹೇಶ್, ಗೋಣೆಪ್ಪ, ಹನುಮಂತಜ್ಜ ರೆಡ್ಡಿ, ನಿವೃತ್ತ ಶಿಕ್ಷಕ ಸುರೇಶ, ರೇವಣಸಿದ್ದಪ್ಪ ಬಸವರಾಜಪ್ಪ ಇತರರು ಹಾಜರಿದ್ದರು.