ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಮಹಿಳೆಯರು ಕಾನೂನನ್ನು ಉಪಯೋಗ ಮಾಡಿಕೊಳ್ಳುವುದಕ್ಕಿಂತ ದುರಪಯೋಗ ಜಾಸ್ತಿ ಮಾಡಿಕೊಳ್ಳುತ್ತಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳನ್ನು ಮಹಿಳೆಯರು ಕೂಡ ಮಾಡಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಆರ್. ಉಷಾರಾಣಿ ಹೇಳಿದರು.ಪಟ್ಟಣದ ನ್ಯಾಯಾಲಯದ ವಕೀಲರ ಸಂಘದಲ್ಲಿ ಸೋಮವಾರ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯ, ಗಂಡುಮಕ್ಕಳು ತನ್ನ ಕುಟುಂಬ ನಿರ್ವಹಣೆಗಾಗಿ ಅನೇಕ ಸಮಸ್ಯೆ ಎದುರಿಸಿ ತ್ಯಾಗ ಮಾಡುತ್ತಾ ಬಂದಿರುತ್ತಾರೆ. ಎಲ್ಲಾ ಕೊಡುಗೆಗೆ ಪುರುಷರ ಪಾತ್ರ ಬಹಳ ಮುಖ್ಯ ಎಂದು ಹೇಳಿದರು.ಮಹಿಳೆಯರಿಗೆ ಸ್ವತಂತ್ರ ಪೂರ್ವದಲ್ಲಿ ಸರಿಯಾದ ಸ್ಥಾನಮಾನ ಇರಲಿಲ್ಲ. ದೇಶಕ್ಕೆ ಸಂವಿಧಾನ ಬಂದಾಗಿನಿಂದ ಮಹಿಳೆಯರಿಗೆ ಸ್ಥಾನಮಾನ ಸಿಕ್ಕಿದೆ ಎಂದ ಅವರು, ಮಹಿಳೆಯರನ್ನು ಗೌರವಿಸುವುದು ಸಂವಿಧಾನಕ್ಕೆ ಗೌರವಿಸಿದಂತೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಟಿ.ವೆಂಕಟೇಶ್ ಮಾತನಾಡಿ, ಹೆಣ್ಣು ಸಮಾಜದ ಕಣ್ಣು. ಒಂದು ಕುಟುಂಬ ಸುಂದರವಾಗಿ ನಡೆಯ ಬೇಕಾದರೆ ಮಹಿಳೆಯ ಪಾತ್ರ ಬಹಳ ಮುಖ್ಯ. ಸಮಾಜದಲ್ಲಿ ಮಹಿಳೆಯರನ್ನು ಸಮಾನವಾಗಿ ನೋಡಿದಾಗ ಮಾತ್ರ ಸಮಾಜ ಪರಿವರ್ತನೆ ಆಗಲು ಸಾಧ್ಯ ಎಂದು ಹೇಳಿದರು.ಈ ಸಂದರ್ಭ ಸಿವಿಲ್ ನ್ಯಾಯಾಧೀಶ ಮನುಶರ್ಮ, ಎಸ್.ಪಿ. ವಕೀಲ ಸಂಘದ ಅಧ್ಯಕ್ಷ ಟಿ.ವೆಂಕಟೇಶ, ವಕೀಲರಾದ ಕಣವಿಹಳ್ಳಿ ಮಂಜುನಾಥ್, ಬಿ.ಹಾಲೇಶ್ ಮಾತನಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ಮಂಜುನಾಥ್ ಎಸ್.ಬಾಗಳಿ, ಕಾರ್ಯದರ್ಶಿ ಎಂ.ಮಲ್ಲಪ್ಪ, ಜಂಟಿ ಕಾರ್ಯದರ್ಶಿ,ಸಿ.ರಾಜಪ್ಪ, ಖಜಾಂಚಿ ಕೆ. ಸಣ್ಣ ನಿಂಗನಗೌಡ, ಸರಕಾರಿ ಅಭಿಯೋಜಕರಾದ ಮೀನಾಕ್ಷಿ ಎನ್. ಮಹಿಳಾ ವಕೀಲರಾದ ರೇಣುಕಾ ಮೇಟಿ, ದೇವಕ್ಕಾ, ಜೆ.ಸೀಮಾ, ನಳಿನ ಕುಮಾರಿ, ಸೌಖ್ಯ, ಐಶ್ವರ್ಯ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯರಾದ ಕೊಟ್ರೇಶ್, ಬಸವರಾಜ್ ಸೇರಿದಂತೆ ಇತರರು ಇದ್ದರು.