ಮೋಸ ಹೋದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿ

KannadaprabhaNewsNetwork |  
Published : Jan 07, 2026, 01:30 AM IST
ನಗರದ ಎಸ್‌ಟಿಜೆ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ  ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್.ಆರ್.ಚನ್ನಕೇಶವ ಉದ್ಘಾಟಿಸಿದರು | Kannada Prabha

ಸಾರಾಂಶ

ಚಿಕ್ಕಮಗಳೂರು: ಆನ್‌ಲೈನ್‌ನಲ್ಲಿ ಖರೀದಿಸಿದ ವಸ್ತುವಿನ ಗುಣಮಟ್ಟ ಕಳಪೆ ಮತ್ತು ದೋಷಪೂರಿತವಾಗಿದ್ದಲ್ಲಿ ಗ್ರಾಹಕರು ಸೂಕ್ತ ದಾಖಲೆ ಯೊಂದಿಗೆ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದರೆ ಕಾನೂನಿನಡಿ ಸೂಕ್ತ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್.ಆರ್.ಚನ್ನಕೇಶವ ಹೇಳಿದರು.

ಎಸ್‌ಟಿಜೆ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಎನ್.ಆರ್.ಚನ್ನಕೇಶವ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಆನ್‌ಲೈನ್‌ನಲ್ಲಿ ಖರೀದಿಸಿದ ವಸ್ತುವಿನ ಗುಣಮಟ್ಟ ಕಳಪೆ ಮತ್ತು ದೋಷಪೂರಿತವಾಗಿದ್ದಲ್ಲಿ ಗ್ರಾಹಕರು ಸೂಕ್ತ ದಾಖಲೆ ಯೊಂದಿಗೆ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದರೆ ಕಾನೂನಿನಡಿ ಸೂಕ್ತ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್.ಆರ್.ಚನ್ನಕೇಶವ ಹೇಳಿದರು.ನಗರದ ಎಸ್‌ಟಿಜೆ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಮಾಪನಶಾಸ್ತ್ರ ಇಲಾಖೆ ಹಾಗೂ ಎಸ್‌ಟಿಜೆ ಮಹಿಳಾ ಪದವಿ ಪೂರ್ವ ಕಾಲೇಜಿನಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಇತ್ತೀಚೆಗೆ ಆನ್‌ಲೈನ್ ಖರೀದಿ ಹೆಚ್ಚಾಗಿದ್ದು, ತಾವು ಖರೀದಿಸಿದ ವಸ್ತುಗಳು, ಉತ್ಪನ್ನ ಕಳಪೆ ಗುಣಮಟ್ಟದಿಂದ ಕೂಡಿದ್ದು, ಗ್ರಾಹಕರ ಹಕ್ಕುಗಳಿಗೆ ಚ್ಯುತಿ ಬಂದಾಗ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ, ಪರಿಹಾರ ಪಡೆದುಕೊಳ್ಳಬಹುದು ಎಂದರು.ಗ್ರಾಹಕರು ಮೋಸ ಹೋದ ಸಂದರ್ಭದಲ್ಲಿ ನ್ಯಾಯ ಕೋರಿ ಆಯೋಗಕ್ಕೆ ಬಂದಾಗ ಕಡಿಮೆ ಖರ್ಚಿನಲ್ಲಿ ಸೂಕ್ತ ನ್ಯಾಯದಾನ ದೊರಕಲಿದೆ. ಗ್ರಾಹಕರು ಖರೀದಿಸಿದ ವಸ್ತುವಿನ ಬೆಲೆ ₹5 ಲಕ್ಷ ಗಳಿಗಿಂತ ಕಡಿಮೆ ಇದ್ದಲ್ಲಿ, ನ್ಯಾಯಾಲಯದ ಶುಲ್ಕ ಪಾವತಿ ಸದೇ ನೇರವಾಗಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಕೇವಲ ಪತ್ರ ಬರೆದು ಸಂಪರ್ಕಿಸಿದರೆ ಸಾ. ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ಕ್ರಮದ ಕುರಿತು ಮಾಹಿತಿ ನೀಡಲಿದ್ದಾರೆ. ಹಾಗಾಗಿ ಗ್ರಾಹಕರು ಹಿತರಕ್ಷಣೆಗೆ ಇರುವ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸಂಪರ್ಕಿಸಿ ಇದರ ಸದುಪಯೋಗ ಪಡೆಯಬೇಕು ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಮಾತನಾಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಬಡತನದಲ್ಲಿರುವ ಮಹಿಳೆಯರು, ಮಕ್ಕಳಿಗೆ, ಪರಿಶಿಷ್ಟ ಜಾತಿ, ಪಂಗಡದವರಿಗೆ, ವಿಶೇಷ ಚೇತನರು, ಹಿರಿಯ ನಾಗರಿಕರಿಗೆ, ಪ್ರಕೃತಿ ವಿಕೋಪದಲ್ಲಿ ಬಾಧಿತರಾದವರಿಗೆ ಹಾಗೂ ₹3 ಲಕ್ಷ ಗಳಿಗಿಂತ ಕಡಿಮೆ ಆದಾಯ ಇರುವವರಿಗೂ ಉಚಿತವಾಗಿ ಕಾನೂನು ನೆರವು ಕಲ್ಪಿಸಲಾಗುತ್ತಿದೆ. ಪ್ರತಿ ತಾಲೂಕಿನಲ್ಲಿಯೂ, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತಿದೆ. ಬಾಧಿತರಿಗೆ ಉಚಿತ ಕಾನೂನು ಅರಿವು-ನೆರವು ಜತೆಗೆ ವಕೀಲರನ್ನು ಸಹ ನೇಮಿಸಲಾಗುತ್ತಿದೆ. ಹಾಗಾಗಿ ನೊಂದವರು, ಬಾಧಿತರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಾಯ ಪಡೆಯಬಹುದು ಎಂದು ಹೇಳಿದರು.ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸದಸ್ಯೆ ಈ.ಪ್ರೇಮ ಮಾತನಾಡಿ, ದಿನನಿತ್ಯದ ವ್ಯವಹಾರಗಳಲ್ಲಿ ನಮ ಗಾಗುವ ಮೋಸ, ಅನ್ಯಾಯಗಳ ವಿರುದ್ಧ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಬಹುದು. ಇ-ಕಾಮರ್ಸ್ ಅನುಷ್ಠಾನಗೊಳಿಸುವ ಮೂಲಕ ಎಲ್ಲವನ್ನು ತಂತ್ರಜ್ಞಾನಕ್ಕೆ ಅಳವಡಿಸಲಾಗುತ್ತಿದೆ. ಇ-ಜಾಗೃತಿಯಿಂದ ನಾವು ಕುಳಿತಲ್ಲಿಯೇ ದೂರು ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರು.ಎಸ್‌ಟಿಜೆ ಮಹಿಳಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಶಿವನಗೌಡ ಕೆ.ಸುರಕೋಡ ಮಾತನಾಡಿ, ಗುಣಮಟ್ಟದ ವಸ್ತು ಪಡೆಯುವುದು ಗ್ರಾಹಕನ ಹಕ್ಕು. ಗುಣಮಟ್ಟದಲ್ಲಿ ಕಳಪೆಯಾದರೆ ಗ್ರಾಹಕರು ಆಯೋಗಕ್ಕೆ ದೂರು ನೀಡಬಹುದು. ಅಂತಹ ಸಂದರ್ಭದಲ್ಲಿ ಗ್ರಾಹಕರ ನ್ಯಾಯಾಲಯ ಪ್ರಕರಣ ಪರಿಶೀಲಿಸಿ ಸೂಕ್ತ ಪರಿಹಾರ ನೀಡಲಿದೆ ಎಂದರು.ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಯೋಗಾನಂದ, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಜಿ.ಮಹಾಂತೇಶ್ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯ ಕ್ರಮದಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ