ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಾವು ಭಾರತೀಯರು ಎಂಬ ಸಮಾನ ಪ್ರಜ್ಞೆಯಿಂದ ಎಂತಹ ಬಿಕ್ಕಟ್ಟುಗಳನ್ನು ಮೀರಲು ಸಾಧ್ಯ ಎಂದು ಪ್ರಾಧ್ಯಾಪಕ ಡಾ.ಮೇಟಿ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಂಕರಘಟ್ಟದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಸ್ನಾತಕೋತ್ತರ ವಿದ್ಯಾರ್ಥಿನಿ ನಿಲಯದ ಆವರಣದಲ್ಲಿ ಡಾ.ಸಣ್ಣರಾಮ ಅಭಿನಂದನಾ ಸಮಿತಿ ನೀಡಿರುವ ದತ್ತಿ ಆಶಯದಂತೆ ಸಮಕಾಲೀನ ಸಮಾಜ-ಮಹಿಳಾ ಬಿಕ್ಕಟ್ಟುಗಳು ಕುರಿತು ಉಪನ್ಯಾಸ ನೀಡಿದರು.ಗುಣಾತ್ಮಕ ಜೀವನಕ್ಕೆ ಪ್ರಜ್ಞೆ ಬೇಕು. ನಮ್ಮ ಅಸ್ತಿತ್ವದ ಚರಾಚರವನ್ನು ಗುರುತಿಸುವುದು ಪ್ರಜ್ಞೆ. ನಾವು ಮನುಷ್ಯರು ಎನ್ನುವ ಸಮಾನ ಪ್ರಜ್ಞೆ ನೆಲೆಯೂರಿದಾಗ ಮಾತ್ರ ನಾವು ಮನುಷ್ಯರಾಗಿರುತ್ತೇವೆ.
ನಮಗೆ ಸ್ವಯಂ ಅರಿವು ಇರಬೇಕು. ಕೂಡಿಟ್ಟು ಹಾಳು ಮಾಡುವುದಕ್ಕಿಂತ ಇಲ್ಲದವರಿಗೆ ಹಂಚಿ ಸಾಮಾಜಿಕ ಪ್ರಜ್ಞೆ ತಂದುಕೊಂಡರೆ ಬಿಕ್ಕಟ್ಟು ಮೀರಲು ಅವಕಾಶವಿದೆ. ನಾವು ಭಾರತೀಯರು ಎನ್ನುವ ಸಂವಿಧಾನ ಬದ್ಧ ಹಕ್ಕು ದೊರೆತಾಗಲೂ ಬಿಕ್ಕಟ್ಟು ಬಗೆ ಹರಿಯದಿರುವುದು ನಮ್ಮ ಚಿಂತನೆಗಳಲ್ಲಿನ ಭಿನ್ನತೆ ಕಾರಣವಾಗಿದೆ ಎಂದರು.ಗಿಡಕ್ಕೆ ನೀರೆರದು ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ದತ್ತಿ ಯೋಜನೆ ಅನೇಕ ಮಹನೀಯರ ಸ್ಮರಣೆ ಮಾಡುತ್ತಲೆ ಸಮಸಮಾಜಕ್ಕೆ ಮೌಲ್ಯಯುತ ವಿಚಾರಗಳನ್ನು ಮತ್ತೆ ನೆನಪು ಮಾಡಿಕೊಳ್ಳಲು ನೆರವಾಗುತ್ತಿದೆ.
ಯುವ ಸಮೂಹ ಶಾಲಾ, ಕಾಲೇಜು ಸೇರಿ ಎಲ್ಲಿಯೂ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಾಣುವುದು ಕಷ್ಟ. ಅವರೆಲ್ಲ ಮೊಬೈಲ್ ಮಾಯಾ ಲೋಕದಲ್ಲಿ ಕಾಣೆಯಾಗುವ ಮುನ್ನ ನಿಮ್ಮ ಅರಿವಿನ ವಿಸ್ತಾರಕ್ಕೆ ಸಾಹಿತ್ಯ ಓದು, ಒಳ್ಳೆಯ ಮಾತು ಅಗತ್ಯವಿದೆ. ಅದಕ್ಕಾಗಿ ನೀವಿರುವಲ್ಲಿಗೆ ನಾವೆಲ್ಲರೂ ಬರುತ್ತಿದ್ದೇವೆ ಎಂದು ವಿವರಿಸಿದರು.ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಭತ್ತ ಬೆಳೆಯುವ ಗದ್ದೆಗಳಾಗಬೇಕು. ಸಂವಿಧಾನ ನೀಡಿದ ಸೌಲಭ್ಯ ಪಡೆದು ಉತ್ತಮ ಶಿಕ್ಷಣ ಪಡೆದು ಪ್ರಜ್ಞಾವಂತ ಪ್ರಜೆಗಳಾಗಬೇಕು. ಶೋಷಣೆ, ಮೌಢ್ಯದ ವಿರುದ್ಧ ಧ್ವನಿಎತ್ತಬೇಕು ಎಂದು ವಿವರಿಸಿದರು.
ದತ್ತಿ ದಾನಿಗಳಾದ ಸಾಹಿತಿ ಡಾ. ಅಣ್ಣಪ್ಪ ಮಳೀಮಠ, ರಂಗನಿರ್ದೇಶಕ ಡಾ.ಜಿ.ಆರ್ ಲವ, ತಾಲೂಕು ಕಸಾಪ ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಜಿಲ್ಲಾ ಕಾರ್ಯದರ್ಶಿ ಎಂ.ಎಂ.ಸ್ವಾಮಿ, ಕಾರ್ಯದರ್ಶಿ ಎಚ್.ತಿಮ್ಮಪ್ಪ ಉಪಸ್ಥಿತರಿದ್ದರು. ಉಪನ್ಯಾಸಕರಾದ ಡಾ.ಮಂಜುನಾಥ, ಡಾ.ರಾಜೇಂದ್ರ, ಮುಖ್ಯ ಶಿಕ್ಷಕ ನಾಗೇಶ್ ಕನ್ನಡ ಗೀತೆ ಹಾಡಿದರು. ಉಷಾ ಪ್ರಾರ್ಥಿಸಿ, ನಿಲಯ ಪಾಲಕರಾದ ಅಶ್ವಿನಿ ವಿ.ಆರ್. ಸ್ವಾಗತಿಸಿ, ಸುಮಿತ್ರಾ ನಿರೂಪಿಸಿ, ರಮ್ಯಾ ವಂದಿಸಿದರು.