ಹಾನಗಲ್ಲ: ಕೃಷಿಯಲ್ಲಿ ಬದುಕು ಕಟ್ಟಿಕೊಂಡವರ ಇತಿಹಾಸ ನೋಡಿ ತಿಳಿದರೆ ಪಟ್ಟಣದ ಉದ್ಯೋಗಗಳಿಂದ ಹೊರ ಬಂದು ಕೃಷಿಯನ್ನೇ ಬದುಕು ಮಾಡಿಕೊಳ್ಳುಲು ಸಾಧ್ಯ, ಅದಕ್ಕೆ ಆತ್ಮವಿಶ್ವಾಸ ಇಚ್ಛಾಶಕ್ತಿ ಇದ್ದರೆ ಸಾಕು ಎಂದು ಕೃಷಿ ತಜ್ಞ ಹನುಮಗೌಡ ಪಾಟೀಲ ತಿಳಿಸಿದರು.
ಸಾಹಿತಿ ಪ್ರೊ. ಮಾರುತಿ ಶಿಡ್ಲಾಪುರ, ಕೃಷಿಯೂ ಒಂದು ಶಿಕ್ಷಣವೇ. ಕೃಷಿ ಕುಟುಂಬದಲ್ಲಿ ಸಹಜವಾಗಿಯೇ ಅಲ್ಲಿನ ಮಕ್ಕಳು ಕೃಷಿ ಜ್ಞಾನ ಪಡೆಯುತ್ತಾರೆ. ಆದರೆ ಕೃಷಿಯಿಂದ ವಿಮುಖವಾಗಿ ಪಟ್ಟಣದ ಕೆಲಸಗಳ ಆಕರ್ಷಣೆ ಕಾರಣವಾಗಿ ಹಳ್ಳಿಯ ಹುಡುಗರು ಉದ್ಯೋಗದ ನೀತಿ ಬದಲಾಯಿಸಿಕೊಳ್ಳುತ್ತಿದ್ದಾರೆ. ಅಂತಿಮವಾಗಿ ಮತ್ತೆ ಕೃಷಿಯೇ ಬದುಕು ಕಟ್ಟಿಕೊಡಬಲ್ಲದು ಎಂಬ ಅರಿವು ಅವರಿಗೆ ಬರುತ್ತಿದೆ. ಈಗಾಗಲೇ ಪಟ್ಟಣದ ಶ್ರೀಮಂತರು ಹಳ್ಳಿಗಳಿಗೆ ಬಂದು ಜಮೀನು ಖರೀದಿಸುತ್ತಿದ್ದಾರೆ. ಅದರೆ ಬೆಲೆ ಗಗನಕ್ಕೇರಿದೆ. ರೈತ ಭೂಮಿ ಖರೀದಿಸುವ ಶಕ್ತಿ ಹೊಂದಿಲ್ಲ. ಆದರೆ ಪಟ್ಟಣದವರದು ಹಣವನ್ನಿಟ್ಟುಕೊಂಡು ಕೃಷಿ ಮಾಡುವುದು. ಅದರ ಫಲ ಪ್ರತಿಫಲ ನಂತರವೇ ತಿಳಿಯುತ್ತಿದೆ ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ವಿಶ್ವನಾಥ ಬೋಂದಾಡೆ, ಕೃಷಿಯ ವಿಚಾರಗಳು ಗಿಳಿಪಾಠಗಳಾದರೆ ಅವು ನಮ್ಮನ್ನು ಪ್ರೇರಣೆಗೊಳಿಸಲಾರವು. ಇಂತಹ ವಿಷಯಗಳನ್ನು ಕ್ರಿಯಾತ್ಮಕವಾಗಿ ಮುನ್ನಡೆಸುವ ಛಲದೊಂದಿಗೆ ಕೇಳಿದರೆ ಒಳ್ಳೆಯ ಫಲ ನೀಡುತ್ತವೆ. ಕೃಷಿ ಸಾಧಕರನ್ನು ಕಂಡು ಅವರ ಕೆಲಸದ ಕ್ಷೇತ್ರ ಕಾರ್ಯ ಮಾಡುವುದು ಅಷ್ಟೇ ಮುಖ್ಯವಾಗಿದೆ. ಕೃಷಿಯ ಬಗೆಗೆ ನಿರ್ಲಕ್ಷ್ಯ ಬೇಡ. ಭೂಮಿ ತಾಯಿ ಎಂದೂ ನಂಬಿದವರನ್ನು ಕೈಬಿಡುವುದಿಲ್ಲ ಎಂದರು.ಗೋಷ್ಠಿಯಲ್ಲಿ ನಡೆದ ಚರ್ಚೆಯಲ್ಲಿ ಕವಿತಾ ಕೊಳಲು, ಮುತ್ತಣ್ಣ ಜಿ., ಕಾರ್ತಿಕ, ಕವನ ಅಭಿಪ್ರಾಯ ಹಂಚಿಕೊಂಡರು. ಉಪನ್ಯಾಸಕ ಡಾ. ಜಿ.ವಿ. ಪ್ರಕಾಶ, ಕೃಷಿಕರಾದ ಪೀರಪ್ಪ ಜಾವೋಜಿ, ಚಂದ್ರಪ್ಪ ಬಾರ್ಕಿ, ಬಸವರಾಜ ಹಿರೂರ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ರೋಜಾ ಸಂಗಡಿಗರು ಪ್ರಾರ್ಥನೆ ಹಾಡಿದರು. ರೇಖಾ ಹರಿಜನ ಸ್ವಾಗತಿಸಿದರು. ಪೂಜಾ ಅಲ್ಲಾಪುರ ವಂದಿಸಿದರು.