ಕಳ್ಳಿಕೊಪ್ಪದಲ್ಲಿ ಸ್ವಸಹಾಯ ಸಂಘಗಳ ಸದಸ್ಯರಿಗೆ ವಿವಿಧ ಇಲಾಖೆ ಮಾಹಿತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಚಿಕ್ಕಮಗಳೂರು ಜೆಲ್ಲೆ ಹಾಗೂ ತಾಲೂಕಿನ ಹಲವು ಕಡೆ ಡೆಂಘೀ ಕಾಣಿಸಿಕೊಂಡಿದ್ದು, ಸಾರ್ವಜನಿಕರು ಡೆಂಘೀ ಜ್ವರ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಸಲಹೆ ನೀಡಿದರು.
ಸೋಮವಾರ ತಾಲೂಕಿನ ಕಳ್ಳಿಕೊಪ್ಪದ ನಾರಾಯಣ ಗೌಡ ಸಮುದಾಯ ಭವನದಲ್ಲಿ ಸೋಷಿಯಲ್ ವೆಲ್ ಫೇರ್ ಸೊಸೈಟಿ, ತೋಟಗಾರಿಕೆ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ವಿವಿಧ ಸ್ವಸಹಾಯ ಸಂಘಗಳ ಆಶ್ರಯ ದಲ್ಲಿ ಸ್ವಸಹಾಯ ಸಂಘದ ಸದಸ್ಯರ ಮಾಹಿತಿ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು. ರಾಜ್ಯದ ಬೆಂಗಳೂರು ಮಹಾನಗರ ಬಿಟ್ಟರೆ ಚಿಕ್ಕಮಗಳೂರು ಜಿಲ್ಲೆಯಲ್ಲೇ ಹೆಚ್ಚು ಡೆಂಘೀ ಜ್ವರ ಕಾಣಿಸಿದೆ. ಜಿಲ್ಲೆಯಲ್ಲಿ ನರಸಿಂಹರಾಜ ಪುರ ತಾಲೂಕು 4 ನೇ ಸ್ಥಾನದಲ್ಲಿದೆ. ಡೆಂಘೀ ಗುಣವಾಗುವ ಕಾಯಿಲೆಯಾಗಿದ್ದು ಡೆಂಘೀ ಜ್ವರದ ಲಕ್ಷಣ ಕಂಡು ಬಂದ ಕೂಡಲೇ ಪರೀಕ್ಷಿಸಿ ಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದರು.ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಂ.ಜಿ.ರೋಹಿತ್ ಮಾಹಿತಿ ನೀಡಿ, ತೋಟಗಾರಿಕೆ ಇಲಾಖೆಯಿಂದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬಿಪಿಎಲ್ ಕಾರ್ಡುದಾರರು, ಸಣ್ಣ, ಅತಿ ಸಣ್ಣ ರೈತರು, ಪ.ಜಾತಿ ಹಾಗೂ ಪ. ಪಂಗಡ ರೈತರು ಅಡಕೆ ತೋಟ ಮಾಡಿದರೆ 1 ಸಸಿಗೆ 130 ರು. ನಂತೆ ಸಿಗಲಿದೆ. ಕಾಳು ಮೆಣಸು ನಾಟೀ ಮಾಡಿದರೆ 1 ಗಿಡಕ್ಕೆ 80 ರು. ಸಿಗಲಿದೆ. ತೆಂಗಿನ ಗಿಡ ನೆಟ್ಟರೆ 1 ಗಿಡಕ್ಕೆ 590 ರು. ನೀಡಲಾಗುತ್ತದೆ. ಗ್ರಾಮ ಸಭೆಯಲ್ಲಿ ಕ್ರಿಯಾ ಯೋಜನೆಗೆ ಅನುಮತಿ ಪಡೆಯಬೇಕು. ಈ ರೈತರು ತಮ್ಮ ಜೀವಿತದ ಅವಧಿಯಲ್ಲಿ 5 ಲಕ್ಷ ರು. ವರೆಗೆ ಸಹಾಯ ಧನ ಪಡೆದು ಕೊಳ್ಳಬಹುದು. ಹವಾಮಾನ ಆಧಾರಿತ ಬೆಳೆ ವಿಮೆ ಪ್ರಾರಂಭವಾಗಿದ್ದು ಅಡಕೆ ಹಾಗೂ ಕಾಳುಮೆಣಸು ಬೆಳೆಗೆ ವಿಮೆ ಕಟ್ಟಬಹುದು. 1 ಎಕ್ರೆ ಅಡಕೆ ತೋಟಕ್ಕೆ 2560 ರು,1 ಎಕ್ರೆ ಕರಿ ಮೆಣಸಿಗೆ 940 ರು. ಕಟ್ಟಬೇಕು.ಜುಲೈ 31 ಕಡೆಯ ದಿನಾಂಕ ಎಂದರು.
ಸೋಷಿಯಲ್ ವೆಲ್ ಫೇರ್ ಸೊಸೈಟಿ ಕಾರ್ಯಕ್ರಮ ಸಂಯೋಜಕ ಪ್ರಭಾಕರ್ ಮಾತನಾಡಿ,ಕಳೆದ 34 ವರ್ಷದಿಂದ ಸೋಷಿಯಲ್ ವೆಲ್ ಫೇರ್ ಸೊಸೈಟಿ ನ.ರಾ.ಪುರ ಹಾಗೂ ಕೊಪ್ಪ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಸ್ವ ಸಹಾಯ ಸಂಘ ರಚನೆ ಮಾಡಿ ಬ್ಯಾಂಕಿನಿಂದ ಸಾಲ ಕೊಡಿಸಿ ಸ್ವ ಉದ್ಯೋಗ ಮಾಡಲು ತರಬೇತಿ ಸಹ ನೀಡಲಾಗಿದೆ. ಹೊಲಿಗೆ, ಅಣಬೆ, ಕುರಿ, ಕೋಳಿ, ಮೀನುಗಾರಿಕೆಗೆ ತರಬೇತಿ ನೀಡಿದ್ದೇವೆ. ಮದ್ಯ ವ್ಯಸನಕ್ಕೆ ತುತ್ತಾದವರಿಗೆ ಔಷಧಿ ನೀಡಿ ಆರೈಕೆ ಮಾಡಿದ್ದೇವೆ ಎಂದರು.ಸೋಷಿಯಲ್ ವೆಲ್ ಫೇರ್ ಸೊಸೈಟಿ ನಿರ್ದೇಶಕ ರೆ.ಫಾ.ಜೋಬೀಸ್ ಉದ್ಘಾಟಿಸಿದರು. ಅತಿಥಿಗಳಾಗಿ ಮಾದರಿ ಮಹಿಳಾ ಮಂಡಳಿ ಅಧ್ಯಕ್ಷೆ ಪ್ರಮೀಳಾ ರೆಡ್ಡಿ, ಗ್ರಾಪಂ ಉಪಾಧ್ಯಕ್ಷೆ ಪಚ್ಚೆಯಮ್ಮ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ದಿನಕರ ನಾಯ್ಕ, ಸೋಷಿಯಲ್ ವೆಲ್ ಫೇರ್ ಸೊಸೈಟಿ ಸಹಾಯಕ ನಿರ್ದೇಶಕ ಫಾ.ಅಭಿನವ, ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಆರ್. ಶಶಿಕಲಾ, ಸ್ವಸಹಾಯ ಸಂಘದ ಲೇಖಾ ಕವನ , ಸಹನ ಇದ್ದರು.